Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು ಎಂಐಟಿಯಲ್ಲಿ 'ಮಾಹೆ' ಕ್ವಾಂಟಮ್ ಹಬ್ ಸ್ಥಾಪನೆ

ಬೆಂಗಳೂರು ಎಂಐಟಿಯಲ್ಲಿ 'ಮಾಹೆ' ಕ್ವಾಂಟಮ್ ಹಬ್ ಸ್ಥಾಪನೆ

ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವರು ತನ್ನ ಅಂಗಸಂಸ್ಥೆಯಾದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ಬೆಂಗಳೂರು ಕ್ಯಾಂಪಸ್‌ನಲ್ಲಿ 'ಕ್ವಾಂಟಮ್‌ ಹಬ್@ಮಾಹೆ'ಯನ್ನು ಗುರುವಾರ ಆರಂಭಿಸಿದೆ. ಭಾರತದ ರಾಷ್ಟ್ರೀಯ ಕ್ವಾಂಟಮ್ ಮಿಷನ್‌ಗೆ ಅನುಗುಣವಾಗಿರುವ, ಸ್ವದೇಶಿ ಕ್ವಾಂಟಮ್ ಹಾರ್ಡ್‌ವೇರ್ ಅಭಿವೃದ್ಧಿಗಾಗಿ ಮೀಸಲಾಗಿರುವ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆ ಇದಾಗಿದೆ.

ಮಾಹೆ ಕುಲಪತಿ ಲೆಫ್ಟಿನೆಂಟ್‌ ಜನರಲ್ ಎಂ.ಡಿ. ವೆಂಕಟೇಶ್‌ ಮಾತನಾಡಿ, 'ವಿನ್ಯಾಸದಿಂದ ಅನುಷ್ಠಾನದ ತನಕ ಎಲ್ಲವನ್ನೂ ಒಳಗೊಂಡ ವೇದಿಕೆಯಾಗಿರುವ ಕ್ಯು-ಹಬ್@ಮಾಹೆ, ಕ್ವಾಂಟಮ್ ಹಾರ್ಡ್‌ವೇರ್ ಪ್ರಯೋಗಗಳು, ಡೀಪ್ ಟೆಕ್ ಸ್ಟಾರ್ಟಪ್ ಇನ್‌ ಕ್ಯುಬೇಶನ್, ಮಾನವ ಸಂಪನ್ಮೂಲ ಅಭಿವೃದ್ಧಿ, ಪರೀಕ್ಷಾ ಮೂಲಸೌಕರ್ಯ ಮತ್ತು ಏಕೀಕೃತ ಶೈಕ್ಷಣಿಕ ವ್ಯವಸ್ಥೆಯಡಿ ಸಂಶೋಧನೆಗಳನ್ನು ಒಳಗೊಂಡಿದೆ. ಈ ಕ್ರಮ ಭಾರತದ ಕ್ವಾಂಟಮ್ ತಂತ್ರಜ್ಞಾನ ಮೌಲ್ಯ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ' ಎಂದು ತಿಳಿಸಿದರು.

ಆರಂಭಿಕ ಹಂತದಲ್ಲಿ, ಈ ಕೇಂದ್ರ 25 - ಕ್ಯುಬಿಟ್ ಡೈಲ್ಯೂಷನ್ ರೆಫ್ರಿಜಿರೇಶನ್ (ಡಿಆರ್) ಆಧಾರಿತ ಓಪನ್ ಆರ್ಕಿಟೆಕ್ಚರ್ ವ್ಯವಸ್ಥೆಯೊಡನೆ ಕಾರ್ಯಾರಂಭಿಸಲಿದೆ. ಇದು ಆಧುನಿಕ ತರಬೇತಿ ಮತ್ತು ಪ್ರಾಯೋಗಿಕತೆಗೆ ಪೂರಕವಾಗಿ ವಿನ್ಯಾಸಗೊಂಡಿದೆ. ಮುಂದಿನ ಹಂತದಲ್ಲಿ 50-150 ಕ್ಯುಬಿಟ್ 'ಪ್ರೂಫ್ ಆಫ್ ಕಾನ್ಸೆಪ್ಟ್' ವೇದಿಕೆಯಾಗಿ ಬೆಳೆದು, ಅಂತಿಮವಾಗಿ 150-1,000+ ಕ್ಯುಬಿಟ್ ಕೈಗಾರಿಕಾ ದರ್ಜೆಯ ಕ್ವಾಂಟಮ್ ಉತ್ಪನ್ನ ವ್ಯವಸ್ಥೆಯಾಗಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಕ್ಯು-ಹಬ್@ಮಾಹೆ ಸ್ಥಾಪನೆಗಾಗಿ ಕ್ವಾಂಟ್ರೋಲಾಕ್ಸ್ (ಫಿನ್‌ಲೆಂಡ್‌) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಬ್ಲೂಫೋರ್ಸ್ (ಫಿನ್‌ಲೆಂಡ್‌), ಕ್ಯೂಬ್ಲಾಕ್ಸ್ (ನೆದರ್‌ಲೆಂಡ್‌), ಕಾನ್‌ಸೈನ್ಸ್ (ಸ್ವೀಡನ್) ಮತ್ತು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಗ್ (ಸಿ-ಡಿಎಸಿ), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಹಯೋಗದೊಂದಿಗೆ ರೂಪಿಸಲಾಗಿದೆ ಎಂದರು.

ಡಿಸೆಂಬರ್ ಒಳಗೆ 100 ಕ್ವಾಂಟಮ್ ಎಂಜಿನಿಯರ್‌ಗಳನ್ನು ತರಬೇತಿಗೊಳಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಆನ್‌ಲೈನ್ ಪಠ್ಯಕ್ರಮ, ಮೌಲ್ಯಮಾಪನ ಮತ್ತು ಪ್ರಯೋಗಾಲಯ ತರಬೇತಿಗಳನ್ನು ಒಳಗೊಂಡ ವ್ಯವಸ್ಥಿತ ಸರ್ಟಿಫಿಕೇಟ್ ತರಬೇತಿಯನ್ನು ಒದಗಿಸಲಾಗುತ್ತದೆ. ಈ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಮತ್ತು ಮೌಲ್ಯಮಾಪನ ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಈ ಕೇಂದ್ರವು ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ವಿವರಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani