Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು: ಕ್ಷಮೆ ಕೇಳುವುದಾಗಿ ನಟಿಸಿ ಪತ್ನಿ ಕೊಲೆ

ಬೆಂಗಳೂರು: ಕ್ಷಮೆ ಕೇಳುವುದಾಗಿ ನಟಿಸಿ ಪತ್ನಿ ಕೊಲೆ

ಬೆಂಗಳೂರು: ಪ್ರತ್ಯೇಕ ವಾಸಿಸುತ್ತಿದ್ದ ಪತ್ನಿಯ ಮನೆಗೆ ನುಗ್ಗಿ ಮಕ್ಕಳ ಎದುರು ಚಾಕುವಿನಿಂದ ಇರಿದು ಪತ್ನಿಯ ಕೊಲೆ ಮಾಡಿದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಸೋಮವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಂಜುಳಾ (32) ಕೊಲೆಯಾದವರು.

ಕೃತ್ಯ ಎಸಗಿದ ಪ್ರದೀಪ್‌ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ.

10 ವರ್ಷದ ಹಿಂದೆ ಪ್ರದೀಪ್ ಮತ್ತು ಮಂಜುಳಾ ಮದುವೆಯಾಗಿತ್ತು. ಮಂಜುಳಾ ಅವರು ‌ಮಹದೇವಪುರ ಪೊಲೀಸ್ ಠಾಣೆಯಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪ್ರದೀಪ್‌, ಆನ್‌ಲೈನ್ ಆಯಪ್‌ಗಳಲ್ಲಿ ಬೆಟ್ಟಿಂಗ್ ಗೀಳಿಗೆ ಸಿಲುಕಿದ್ದರು. ಬೆಟ್ಟಿಂಗ್‌ ಗೀಳಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಅಲ್ಲದೇ ಪತ್ನಿಯ ಜತೆಗೆ ಗಲಾಟೆ ಮಾಡುತ್ತಿದ್ದರು. ಅನುಮಾನವನ್ನೂ ಪಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಚಾಕು ಬಚ್ಚಿಟ್ಟುಕೊಂಡು ಬಂದಿದ್ದ ಆರೋಪಿ: ಪತಿಯ ಹಿಂಸೆ ತಾಳಲಾರದೆ ಮಂಜುಳಾ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮಂಜುಳಾ ಇದ್ದ ಮನೆಗೆ ಬಂದಿದ್ದ ಪ್ರದೀಪ್, ಮಾಡಿದ ತಪ್ಪಿಗೆ ಕ್ಷಮೆ ಕೇಳುವವನಂತೆ ನಟಿಸಿದ್ದರು. 'ಕಾಲು ಹಿಡಿಯುತ್ತೇನೆ, ತಪ್ಪಾಯಿತು ಮನೆಗೆ ಬಾ...' ಎಂದು ಕಾಲಿಗೆ ಬಿದ್ದದ್ದಂತೆ ನಟಿಸಿ ಬಚ್ಚಿಟ್ಟುಕೊಂಡು ತಂದಿದ್ದ ಚಾಕುವಿನಿಂದ ಮಂಜುಳಾಗೆ ಇರಿದು ಕೊಲೆ ಮಾಡಿದ್ದರು. ಕೃತ್ಯ ನಡೆದಾಗ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದರು ಎಂದು ಪೊಲೀಸರು ಹೇಳಿದರು.

ಕೊಲೆಗೂ ಮುನ್ನ ವಿಡಿಯೊ:

ಪ್ರದೀಪ್‌ ಕೃತ್ಯ ಎಸಗುವ ಮುನ್ನ ವಿಡಿಯೊ ಮಾಡಿದ್ದರು. ಪತ್ನಿಯಿಂದ ದೂರ ಇರಲು ಬಯಸುವುದಿಲ್ಲ. ಭಾಮೈದ ಮತ್ತು ಮಾವನಿಗೆ ಕರೆ ಮಾಡಿ ಪತ್ನಿಯನ್ನು ತನ್ನೊಂದಿಗೆ ಹೋಗುವಂತೆ ಬುದ್ಧಿಮಾತು ಹೇಳುವಂತೆ ಕೇಳಿಕೊಂಡಿದ್ದರು. 'ಸಂಜೆ 6 ಗಂಟೆಗೆ ಕೆಲಸದಿಂದ ಬರುತ್ತಾಳೆ. ಬೇಗ ಮನೆಗೆ ಬರುವಂತೆ ಕೇಳುತ್ತೇನೆ. ಆದರೂ ಬರುವುದಿಲ್ಲ. ಆಕೆಯನ್ನು ಸಾಯಿಸುತ್ತೇನೆ. ನನ್ನ ನಾದಿನಿ ಮತ್ತು ಅತ್ತೆಯಿಂದಲೇ ನನ್ನ ಸಂಸಾರ ಹಾಳಾಗಿದೆ. ಯಾರೂ ಆನ್‌ಲೈನ್‌ ಬೆಟ್ಟಿಂಗ್‌ ಆಡಬೇಡಿ. ಅದರಿಂದ ನನ್ನ ಇಡೀ ಕುಟುಂಬ ಬೀದಿಗೆ ಬಿತ್ತು. ಅದರಿಂದ ನಾನು ಸಾಯುತ್ತಿದ್ದೇನೆ. ನನ್ನ ಹೆಂಡತಿ ಕೂಡ ಸಾಯುತ್ತಿದ್ದಾಳೆ. ನಾನು ಸಂಪೂರ್ಣವಾಗಿ ಹಾಳಾಗಿದ್ದೇನೆ. ಹಣ ಎಂಬುದು ಬಹಳ ಮುಖ್ಯ' ಎಂದು ವಿಡಿಯೊದಲ್ಲಿ ಆರೋಪಿ ಹೇಳಿದ್ದಾರೆ.

ಆತ್ಮಹತ್ಯೆ ಯತ್ನ: ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪ್ರದೀಪ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿಯ ಮೃತದೇಹ ಎದುರು ಮಕ್ಕಳ ಗೋಳಾಟ ನೋಡಲು ಸಾಧ್ಯವಾಗದೆ ಚಾಕುವಿನಿಂದ ಕೈ ಕೊಯ್ದುಕೊಂಡು ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಪರಾರಿ ಆಗಿದ್ದರು ಎಂದು ಮೂಲಗಳು ಹೇಳಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani