Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು: ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿನಲ್ಲಿ ಮೃತದೇಹ ಪತ್ತೆ

ಬೆಂಗಳೂರು: ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿನಲ್ಲಿ ಮೃತದೇಹ ಪತ್ತೆ

ಬೆಂಗಳೂರು: ನೆಲಗದರನಹಳ್ಳಿ ಮುಖ್ಯರಸ್ತೆ ಬದಿಯ ಪಾರ್ಕಿಂಗ್‌ ಸ್ಥಳದಲ್ಲಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಪೀಣ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಾಸನ ಜಿಲ್ಲೆಯ ಸುನಿತ್ (36) ಮೃತಪಟ್ಟವರು.

ನಗರದ ಎಚ್‍ಎಂಟಿ ಲೇಔಟ್‍ನಲ್ಲಿ ಅಣ್ಣನ ಜತೆ ಸುನಿತ್‌ ವಾಸವಾಗಿದ್ದರು.

ಉಬರ್ ಕಂಪನಿಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಸುನಿತ್‌ ಸೋಮವಾರ ಬೆಳಿಗ್ಗೆ ಮುಖ್ಯರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಬಾಗಿಲು ಮತ್ತು ಕಿಟಕಿ ಬಂದ್ ಮಾಡಿ ಎ.ಸಿ ಹಾಕಿಕೊಂಡು ವಾಹನದೊಳಗೆ ಮಲಗಿದ್ದರು. ಸಾಕಷ್ಟು ಸಮಯ ಕಳೆದರೂ ಕಾರು ಅಲ್ಲಿಯೇ ನಿಂತಿರುವುದನ್ನು ಗಮನಿಸಿದ್ದ ಸ್ಥಳೀಯರು, ಮಧ್ಯಾಹ್ನ ವಾಹನದ ಬಳಿ ಹೋಗಿ ಬಾಗಿಲು ಬಡಿದು ಚಾಲಕನನ್ನು ಏಳಿಸಲು ಪ್ರಯತ್ನಿಸಿದ್ದರು. ಆದರೂ ಸುನಿತ್‌ ಅವರು ಬಾಗಿಲು ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಕಾರಿನ ಕಿಟಕಿ ಗಾಜು ಒಡೆದು ಬಾಗಿಲು ತೆರೆದು ನೋಡಿದಾಗ ಸುನಿತ್‌ ಮೃತಪಟ್ಟಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

'ಸ್ಥಳೀಯರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಪರಿಶೀಲಿಸಿದಾಗ ಸುನಿತ್ ಮೃತಪಟ್ಟಿರುವುದು ದೃಢಪಟ್ಟಿತು. ಹೃದಯಾಘಾತದಿಂದ ಚಾಲಕ ಮೃತಪಟ್ಟಿರುವ ಶಂಕೆಯಿದೆ. ವೈದ್ಯರು ವರದಿ ನೀಡಿದ ಬಳಿಕ ಸುನಿತ್‌ ಅವರ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ' ಎಂದು ಪೊಲೀಸರು ತಿಳಿಸಿದರು.

ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani