ಬೆಂಗಳೂರು: 'ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳು ಮತ್ತು ಈ ಕುರಿತಾದ ಸಮಗ್ರ ವಿವರಗಳನ್ನು ಒಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಿ' ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರಿನ ರಸ್ತೆಗಳ ದುಃಸ್ಥಿತಿಯ ಕುರಿತಂತೆ 2015ರಲ್ಲಿ ಕೋರಮಂಗಲದ ವಿಜಯನ್ ಮೆನನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಜಿಬಿಎ ಪರ ವಕೀಲರು, 'ಏಪ್ರಿಲ್‌ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಿದ್ದು ಈ ಕಾರ್ಯ ಮುಂದುವರಿದಿದೆ' ಎಂದರು.
ಇದಕ್ಕೆ ನ್ಯಾಯಪೀಠ, 'ರಸ್ತೆ ಗುಂಡಿಗಳನ್ನು ಮುಚ್ಚಲು ಎಷ್ಟು ಸಮಯದ ಅಗತ್ಯವಿದೆ' ಎಂದು ಪ್ರಶ್ನಿಸಿತಲ್ಲದೆ, 'ಈವರೆಗೆ ಎಷ್ಟು ರಸ್ತೆ ಗುಂಡಿಗಳನ್ನು ಗುರುತಿಸಿದ್ದೀರಿ ಮತ್ತು ಅವುಗಳಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಿದ್ದೀರಿ ಎಂಬುದರ ಸಂಪೂರ್ಣ ದುರಸ್ತಿ ಕಾರ್ಯವಿಧಾನವನ್ನು ಸೂಚಿಸುವ ಪ್ರಮಾಣ ಪತ್ರ ಸಲ್ಲಿಸಿ' ಎಂದು ಸೂಚಿಸಿತು.
'ಪ್ರಮಾಣ ಪತ್ರದಲ್ಲಿ ಗುಂಡಿಗಳ ಸಮಸ್ಯೆಯನ್ನು ಎದುರಿಸಲು ಪ್ರತಿ ವರ್ಷ ಅಳವಡಿಸಿಕೊಳ್ಳುವ ಕಾರ್ಯವಿಧಾನ, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಮತ್ತು ಅಂತಹ ರಸ್ತೆಗಳ ಪ್ರಮಾಣ ತಗ್ಗಿಸಲು ತೆಗೆದುಕೊಂಡ ಕ್ರಮಗಳು ಮತ್ತು ಗುಂಡಿಗಳನ್ನು ಗುರುತಿಸಿ ದುರಸ್ತಿ ಮಾಡಿದ ಸಮಗ್ರ ವಿವರಗಳು ಅಡಕವಾಗಿರಬೇಕು' ಎಂದು ಆದೇಶಿಸಿದೆ.
ಗುಂಡಿಗಳಿಂದ ಉಂಟಾದ ಸಾವುಗಳು ಮತ್ತು ಗಾಯಗಳ ಪ್ರಕರಣಗಳಲ್ಲಿ ದಾಖಲಾದ ಎಫ್‌ಐಆರ್ ಸಂಖ್ಯೆಯ ಕುರಿತು ಮಾಹಿತಿಯನ್ನು ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆಯೂ ನ್ಯಾಯಪೀಠ ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ.

