ಬೆಂಗಳೂರು: ಜೆ.ಸಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ; ತನ್ನ ಗಂಡನ ಮನೆಯಲ್ಲಿ ಸಾವಿಗೀಡಾಗಿದ್ದ ಗೃಹಿಣಿ ದೀಪಿಕಾ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆಪಾದನೆ ಎದುರಿಸುತ್ತಿದ್ದ ಆಕೆಯ ಗಂಡ, ಅತ್ತೆ-ಮಾವ ಮತ್ತು ನಾದಿನಿಯರು ಸೇರಿದಂತೆ ಒಟ್ಟು ಐವರನ್ನು ನಗರದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ವಿಚಾರಣೆಯಲ್ಲಿ ಆರೋಪಿಗಳ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರ ವಾದವನ್ನು ಮನ್ನಿಸಿರುವ 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ ಎಂ.ರಶ್ಮಿ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶಿಸಿದ್ದಾರೆ.
'ಆರೋಪಿಗಳ ವಿರುದ್ಧದ ಆಪಾದನೆಯನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ವರದಕ್ಷಿಣೆ ಕಿರುಕುಳದಿಂದ ಸಾವು ಸಂಭವಿಸಿದೆ ಎಂದು ನಿರೂಪಿಸುವ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಲಾಗಿದೆ' ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಪ್ರಕರಣ: 'ನನ್ನ ಮಗಳು ದೀಪಿಕಾಗೆ (24) ಆಕೆಯ ಗಂಡ, ಅತ್ತೆ, ಮಾವ ಹಾಗೂ ನಾದಿನಿಯರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಕಿರುಕುಳ ತಾಳಲಾರದೆ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಆದ್ದರಿಂದ, ಸಾವಿಗೆ ಕಾರಣರಾದ ಅಳಿಯ (ದೀಪಿಕಾಳ ಗಂಡ) ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು' ಎಂದು ಕೋರಿ ದೀಪಿಕಾಳ ತಾಯಿ ಜಯಂತಿ 2017ರ ಏಪ್ರಿಲ್ 10ರಂದು ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಅನುಸಾರ ಪೊಲೀಸರು, ಭಾರತೀಯ ದಂಡ ಸಂಹಿತೆ-1860ರ ಕಲಂ 498ಎ (ಕಿರುಕುಳ), 304ಬಿ (ವರದಕ್ಷಿಣೆ ಕಿರುಕುಳದ ಸಾವು) ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿ ದೀಪಿಕಾಳ ಗಂಡ, ಅತ್ತೆ ಮಾವ ಹಾಗೂ ನಾದಿನಿಯರೂ ಸೇರಿದಂತೆ ಒಟ್ಟು ಐವರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

