ನಾಪೋಕ್ಲು: ಭಾಗಮಂಡಲ ಭಗಂಡೇಶ್ವರ ಕ್ಷೇತ್ರದ ಪುನರ್ ಪ್ರತಿಷ್ಠಾಪನೆಗೆ ಭಾಗಮಂಡಲದಲ್ಲಿ ನಡೆದ ವ್ಯವಸ್ಥಾಪನ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಹಾಗೆಯೇ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರು ಕಡ್ಡಾಯವಾಗಿ ವಸ್ತ್ರಸಂಹಿತೆ ಪಾಲಿಸಬೇಕೆಂದು ಸೂಚಿಸಲಾಗಿದೆ.
ಐದು ವರ್ಷಗಳ ಬಳಿಕ ಭಾಗಮಂಡಲ ನೂತನ ವ್ಯವಸ್ಥಾಪನ ಸಮಿತಿಯ ಮೊದಲ ಸಭೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾನಂಡ ಪ್ರಥ್ಯು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ದೀಪಾವಳಿ ಬಳಿಕ ಪುನರ್ ಪ್ರತಿಷ್ಠಾಪನೆ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೀಲೇಶ್ವರ ಪದ್ಮನಾಭ ತಂತ್ರಿಗಳ ಮೂಲಕ ಸ್ವರ್ಣ ಪ್ರಶ್ನೆ ಮಾಡಲಾಗಿದ್ದು ಅದರಂತೆ ಪುನರ್ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ. ಭಗಂಡೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ನಿತ್ಯ ಪೂಜೆ ನೆರವೇರಿಸಿದ ಬಳಿಕ ಭಕ್ತರಿಗೆ ಪೂಜಾ ಕಾರ್ಯಗಳಿಗೆ ಅನುವು ಮಾಡಿಕೊಡಲಾಗುವುದು ಎಂದರು.
ಭಾಗಮಂಡಲ ದೇವಾಲಯಕ್ಕೆ ಸಂಬಂಧಿಸಿ ನ.6ರಂದು ಚಾಮುಂಡಿ ಕೋಲ ನಡೆಯಲಿದೆ ಎಂದು ತಿಳಿಸಿದರು.
ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಈ ಹಿಂದೆ ಅಳವಡಿಸಲಾಗಿದ್ದು, ಪಾಲನೆ ಸರಿಯಾಗಿ ಆಗುತ್ತಿಲ್ಲ. ವಸ್ತ್ರಸಂಹಿತೆ ಕಟ್ಟುನಿಟಿನ ಪಾಲನೆ ಮಾಡುವಂತಾಗಬೇಕು. ಧಾರ್ಮಿಕ ಕಾರ್ಯಗಳಿಗೆ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುವಂತಾಗಬೇಕು. ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೆ ಸೂಕ್ತ ಮಾಹಿತಿ ನೀಡಿ, ಕ್ಷೇತ್ರಗಳಿಗೆ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ವಸ್ತ್ರಸಂಹಿತೆ ಪಾಲನೆ ಮಾಡಬೇಕು ಎಂದು ಹೇಳಿದರು.
ಕ್ಷೇತ್ರಗಳಲ್ಲಿ ಭದ್ರತಾ ದೃಷ್ಟಿಯಿಂದ ತಲಾ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪಿಡಬ್ಲ್ಯುಡಿ ವತಿಯಿಂದ ₹1 ಕೋಟಿ, ನಿರ್ಮಿತಿ ಕೇಂದ್ರದಿಂದ ₹1 ಕೋಟಿ ಹಾಗೂ ಕಾವೇರಿ ನಿಗಮದಿಂದ ₹2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರಿಗೆ ವಸತಿಗೃಹ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಕ್ಷೇತ್ರದಲ್ಲಿ ಆನೆ ಹಾವಳಿಯಿಂದ ಸುತ್ತಮುತ್ತ ಬೇಲಿ ಹಾಳಾಗಿದ್ದು, ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಕಲ್ಲಿನ ಹಾಸಿಗೆ ಬಿಳಿ ಬಣ್ಣ ಬಳಿದು ಭಕ್ತರಿಗೆ ನಡೆಯಲು ಅನುಕೂಲ ಕಲ್ಪಿಸಲಾಗುವುದು. ತಲಕಾವೇರಿಯಲ್ಲಿ ಮೂವರು ಕಾವಲುಗಾರರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು ಎಂದರು.
ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಚೊಡುಮಡ ಎ.ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಎನ್. ಹರ್ಷ, ಕೆ.ಎ.ತಿಮ್ಮಯ್ಯ, ಕೆದಂಬಾಡಿ ಜಿ ರಘುನಾಥ್, ಎಂ.ಸಿ. ಲಕ್ಷ್ಮಣ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಪಾರುಪತ್ತೆಗಾರ ಪೊನ್ನಣ್ಣ, ಕೋಡಿ ಮಹೇಶ್ ಪಾಲ್ಗೊಂಡಿದ್ದರು.
261104-51-972202813

