ಭಾಲ್ಕಿ: 'ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆದ 2026ನೇ ಸಾಲಿನ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಶೇ 100ರಷ್ಟು ಗುರಿ ಸಾಧಿಸಿದ್ದೇವೆ' ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ವಿವಿಧ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಜೂನ್ 30ರಂದು ಎಸ್‍ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿ ಆ.8ರ ಒಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ನೀಡಿತು. ಅದರಂತೆ ಕ್ಷೇತ್ರದಲ್ಲಿ ಎಸ್‍ಐಆರ್ ಪ್ರಕ್ರಿಯೆ ಆರಂಭಿಸಿ ನಿಗದಿತ ಎರಡ್ಮೂರು ದಿನಗಳ ಮೊದಲೇ ಎಸ್‍ಐಆರ್ ಪೂರ್ಣಗೊಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದೇವೆ' ಎಂದರು.
'ಕ್ಷೇತ್ರದಲ್ಲಿ 263 ಮತಗಟ್ಟೆ ಹೊಂದಿದ್ದು, 2,43,811 ಮತದಾರರು ಇದ್ದಾರೆ. ಅದರಂತೆ ಮತಗಟ್ಟೆ ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೂ ಭೇಟಿ ನೀಡಿ ಎಲ್ಲ ಮತದಾರರಿಗೆ ಎನ್ಯುಮರೇಷನ್ ಫಾರಂ ನೀಡಿ ಸಂಪೂರ್ಣ ಗಣಕೀಕರಣಗೊಳಿಸಿ ನಿರ್ದಿಷ್ಟ ಗುರಿ ಸಾಧಿಸಿದ್ದೇವೆ' ಎಂದು ಹೇಳಿದರು.
'ಕ್ಷೇತ್ರದಲ್ಲಿರುವ 2,43,811 ಮತದಾರರ ಎನ್ಯುಮರೇಷನ್ ಫಾರಂ ಗಣಕೀಕರಣಗೊಳಿಸಲಾಗಿದೆ. ಅದರಲ್ಲಿ 19,828 ಮತದಾರರು ಸ್ಥಳಾಂತರಗೊಂಡಿದ್ದು, 4,973 ಮತದಾರರು ಮೃತರಾಗಿದ್ದಾರೆ. 4,962 ಮತದಾರರು ಗೈರಾಗಿದ್ದು, 2,468 ದ್ವಿಪ್ರತಿ ಮತದಾರರು, ಇತರೆ 118 ಸೇರಿ ಒಟ್ಟು 32,349 ಮತದಾರರು ಮತ ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆಯಿದೆ. ಆಕ್ಷೇಪಣೆ ಸಲ್ಲಿಸಲು ಮತ್ತು ಹೊಸ ಸೇರ್ಪಡೆಗೆ ಅವಕಾಶ ಇದ್ದು, ಅರ್ಹರು ಸದುಪಯೋಗ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.
ಚುನಾವಾಣಾ ನೋಂದಣಾಧಿಕಾರಿ ಶಂಕರ ಖಾದಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ, ಬಾಬುರಾವ್ ಧೂಪೆ ಇತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-33-1597746992

