Dailyhunt Logo
  • Light mode
    Follow system
    Dark mode
    • Play Story
    • App Story
ಭಾನುವಾರದ ಪುರವಣಿ ಲೇಖನ: ಬಯಲನ್ನೇ ಪಾಠಶಾಲೆ ಮಾಡಿದ ಶಿಕ್ಷಕಿ

ಭಾನುವಾರದ ಪುರವಣಿ ಲೇಖನ: ಬಯಲನ್ನೇ ಪಾಠಶಾಲೆ ಮಾಡಿದ ಶಿಕ್ಷಕಿ

ಗಿಡಗಂಟಿ ಬೆಳೆದು, ಹಾವುಗಳು ಓಡಾಡುತ್ತಿದ್ದ ಶಾಲೆಯ ಆವರಣವೀಗ ಬಯಲು ಪಾಠಶಾಲೆ. ಈ ಬದಲಾವಣೆಯ ಹಿಂದಿರುವವರು ಮುಖ್ಯಶಿಕ್ಷಕಿ ರತ್ನಕುಮಾರಿ. ಸೀಮಿತ ಸಂಪನ್ಮೂಲಗಳಲ್ಲೇ ಶಾಲೆಯನ್ನು ವಿಭಿನ್ನವಾಗಿ ರೂಪಿಸಿದ ಅವರ ಪ್ರಯತ್ನಕ್ಕೆ ಈ ಬಾರಿ ರಾಷ್ಟ್ರಪ್ರಶಸ್ತಿ ದೊರೆತಿದೆ.

ಹಳೆಯ ಡಿಶ್ ಆಂಟೆನಾ ಪ್ರಶ್ನೆ ಕೇಳುತ್ತದೆ. ಪೈಪ್ ಗಾಳಿ ಮತ್ತು ಧ್ವನಿಯ ಪಾಠ ಹೇಳುತ್ತದೆ. ಜೋಕಾಲಿ ಚಲನೆಯ ನಿಯಮ ಪರಿಚಯಿಸುತ್ತದೆ. ಹಳೆಯ ಟೈರ್, ಖಾಲಿ ಬಾಟಲಿ, ಗೋಡೆ, ಬೆಂಚು... ಶಾಲೆಯ ಆವರಣದಲ್ಲಿರುವ ಪ್ರತಿ ವಸ್ತುಗಳೂ ಇಲ್ಲಿ ಮಕ್ಕಳಿಗೆ ಒಂದೊಂದು ಪಾಠ ಹೇಳುತ್ತವೆ.

'ಪಾಠ ಎಂದರೆ ತರಗತಿಯ ನಾಲ್ಕು ಗೋಡೆಗಳೊಳಗೆ ಮಾತ್ರ ನಡೆಯಬೇಕೇ?' ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬದಲಿಸಿದವರು ಮುಖ್ಯಶಿಕ್ಷಕಿ ರತ್ನಕುಮಾರಿ. ಸೀಮಿತ ಸಂಪನ್ಮೂಲಗಳಲ್ಲೇ ಮಕ್ಕಳಿಗೆ ಕಲಿಕೆಯ ಹೊಸ ಅನುಭವ ನೀಡಬೇಕು ಎಂಬ ಅವರ ಯೋಚನೆ, ಇಡೀ ಶಾಲೆಯ ಕಲಿಕಾ ವಾತಾವರಣವನ್ನೇ ಬದಲಿಸಿತು. ಈ ಪ್ರಯತ್ನಕ್ಕೆ ಈಗ ರಾಷ್ಟ್ರಮಟ್ಟದ ಮನ್ನಣೆಯೂ ಸಿಕ್ಕಿದೆ. ರತ್ನಕುಮಾರಿ ಅವರು 2026ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

24 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರತ್ನಕುಮಾರಿ ಅವರು ಇಲ್ಲಿಗೆ ಬಂದಾಗ ಕಟ್ಟಡಗಳಿದ್ದವು, ಒಂದಿಷ್ಟು ಮರಗಳಿದ್ದವು. ಆದರೆ ಶಾಲೆಯ ಸುತ್ತಲಿನ ಜಾಗ ವ್ಯವಸ್ಥಿತವಾಗಿರಲಿಲ್ಲ. ಗಿಡಗಂಟಿಗಳು ಬೆಳೆದು ನಿಂತಿದ್ದವು. ಹಾವುಗಳೂ ಓಡಾಡುತ್ತಿದ್ದವು. ಆ ಜಾಗವನ್ನೇ ಮಕ್ಕಳ ಕಲಿಕೆಯ ಭಾಗವನ್ನಾಗಿ ಮಾಡಬೇಕು ಎಂಬ ಯೋಚನೆಯೊಂದಿಗೆ ಬದಲಾವಣೆಗೆ ಕೈಹಾಕಿದರು.

ಒಂದು ದಶಕದ ಹಿಂದೆ ಶಾಲೆಯಲ್ಲಿ 24 ಮಕ್ಕಳಷ್ಟೇ ಇದ್ದರು. ಶಾಲೆ ಮುಚ್ಚುವ ಆತಂಕವೂ ಎದುರಾಗಿತ್ತು. ಶಿಕ್ಷಕಿಯಾಗಿ ತಾವೇ ಕೈಚೆಲ್ಲಿ ಕುಳಿತರೆ ಹೇಗೆ ಎಂದು ರತ್ನಕುಮಾರಿ ಮತ್ತೆ ಟೊಂಕಕಟ್ಟಿ ನಿಂತರು. ಹಣಕಾಸಿನ ಕೊರತೆ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಶಿಕ್ಷಕರನ್ನು ಜೊತೆ ಸೇರಿಸಿಕೊಂಡು, ಗ್ರಾಮಸ್ಥರು, ದಾನಿಗಳು ಮತ್ತು ಸರ್ಕಾರೇತರ ಸಂಘಟನೆಗಳ ನೆರವಿನಿಂದ ಶಾಲೆಯನ್ನು ಭಿನ್ನವಾಗಿ ರೂಪಿಸಿದರು.

ಶಾಲೆಯ ಅಭಿವೃದ್ಧಿ ಎಂದರೆ ಕಟ್ಟಡ, ಬಣ್ಣ ಅಥವಾ ಹೊಸ ಪೀಠೋಪಕರಣಗಳನ್ನು ತರುವುದು ಮಾತ್ರವಲ್ಲ ಎಂಬುದು ಅವರ ನಿಲುವು. ಮಕ್ಕಳಿಗೆ ಕಲಿಕೆ ಆಸಕ್ತಿದಾಯಕವಾಗಬೇಕು; ಅವರು ಕಲಿಯುವುದನ್ನು ತಮ್ಮ ಬದುಕಿನೊಂದಿಗೆ ಜೋಡಿಸಿಕೊಳ್ಳಬೇಕು ಎಂಬ ಚಿಂತನೆಯೇ ಇಲ್ಲಿನ ಹಲವು ಪ್ರಯೋಗಗಳಿಗೆ ಕಾರಣವಾಯಿತು.

ಇಂದು ಆರು ಶಿಕ್ಷಕರು ಹಾಗೂ 56 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ. ಸಮಟಗಾರು ಗ್ರಾಮದ ನಾಲ್ಕು ಮಕ್ಕಳನ್ನು ಹೊರತುಪಡಿಸಿದರೆ ಉಳಿದ 52 ಮಕ್ಕಳು 10ರಿಂದ 12 ಕಿ.ಮೀ. ದೂರದ ಊರುಗಳಿಂದ ಬರುತ್ತಿದ್ದಾರೆ. ಒಂದು ಕಾಲದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದ ಶಾಲೆಗೆ ದೂರದ ಊರುಗಳಿಂದಲೂ ಮಕ್ಕಳು ಬರುತ್ತಿರುವುದನ್ನು ಗಮನಿಸಿದರೆ, ಶಾಲೆಯ ಮೇಲೆ ಪೋಷಕರು ಇಟ್ಟಿರುವ ವಿಶ್ವಾಸ ಎಷ್ಟು ಎನ್ನುವುದು ಗೊತ್ತಾಗುತ್ತದೆ.

ತರಗತಿಯ ಹೊರಗೂ ಪಾಠ

'ಗಣಿತವೆಂದರೆ ಪುಸ್ತಕದಲ್ಲಿರುವ ಸಂಖ್ಯೆಗಳಲ್ಲ; ವಿಜ್ಞಾನವೆಂದರೆ ಪಠ್ಯಪುಸ್ತಕದ ಅಧ್ಯಾಯವಲ್ಲ' ಎಂಬ ಚಿಂತನೆಯೊಂದಿಗೆ ಗಣಿತ ಮತ್ತು ವಿಜ್ಞಾನ ವನಗಳನ್ನು ನಿರ್ಮಿಸಲಾಗಿದೆ. ಆಟದ ಮೂಲಕ ಕಲಿಕೆ, ಅನುಭವ ಆಧಾರಿತ ಶಿಕ್ಷಣ, ಆಟಿಕೆ ಮತ್ತು ಚಟುವಟಿಕೆ ಆಧಾರಿತ ಬೋಧನೆಗೆ ಒತ್ತು ನೀಡಲಾಗಿದೆ.

ಹಳೆಯ ಡಿಶ್ ಆಂಟೆನಾ ಪ್ರಶ್ನೋತ್ತರ ಆಧಾರಿತ ಕಲಿಕಾ ಸಾಧನವಾಗಿದೆ. ಪೈಪ್‌ಗಳು ಗಾಳಿ ಮತ್ತು ಧ್ವನಿಯ ಪಾಠ ಹೇಳುತ್ತವೆ. ಜೋಕಾಲಿ ಮಕ್ಕಳ ಆಟದ ಜಾಗವಾಗಿರುವುದರ ಜತೆಗೆ ಚಲನೆಯ ನಿಯಮವನ್ನು ಅರ್ಥಮಾಡಿಕೊಳ್ಳುವ ಸಾಧನವೂ ಆಗಿದೆ. ಹೀಗೆ ಮಕ್ಕಳು ಪಾಠವನ್ನು ಕೇಳುವುದಷ್ಟೇ ಅಲ್ಲ; ನೋಡುತ್ತಾರೆ, ಮುಟ್ಟುತ್ತಾರೆ, ಪ್ರಯೋಗಿಸುತ್ತಾರೆ.

'ವಿಲೇಜ್ ಫೇರ್' (ಗ್ರಾಮ ಸಂತೆ) ಮೂಲಕ ವ್ಯವಹಾರ, ಲೆಕ್ಕಾಚಾರ ಮತ್ತು ಸಂವಹನದಂತಹ ನೈಜ ಬದುಕಿನ ಕೌಶಲಗಳನ್ನು ಕಲಿಸಲಾಗುತ್ತದೆ. ಚುನಾವಣಾ ಆಯಪ್ ಬಳಸಿ ವಿದ್ಯಾರ್ಥಿ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಅನುಭವದ ಮೂಲಕ ತಿಳಿಸಲಾಗುತ್ತದೆ. 'ನೈಮಿಷ' ಔಷಧೀಯ ಸಸ್ಯಗಳ ಉದ್ಯಾನ ಪ್ರಕೃತಿ, ಆರೋಗ್ಯ ಮತ್ತು ವಿಜ್ಞಾನದ ಸಂಬಂಧವನ್ನು ಪರಿಚಯಿಸುತ್ತದೆ.

ಇಂಗ್ಲಿಷ್ ವ್ಯಾಕರಣ, ವಿರಾಮ ಚಿಹ್ನೆ ಸೇರಿದಂತೆ ಹಲವು ವಿಷಯಗಳನ್ನು ಆಟದ ಮೂಲಕ ಕಲಿಯುವ ವಲಯಗಳಿವೆ. ಬಹುವರ್ಗ ಬೋಧನೆ ಸಾಧ್ಯವಾಗದ ಸಂದರ್ಭಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶಕರಾಗುತ್ತಾರೆ. ತರಗತಿಯಲ್ಲಿ ಕಲಿತ ವಿಷಯಗಳನ್ನು ಹೊರಾಂಗಣದ ಆಟ ಮತ್ತು ಚಟುವಟಿಕೆಗಳ ಮೂಲಕ ಪುನರ್‌ಮನನ ಮಾಡಲಾಗುತ್ತದೆ.

ಶಾಲೆಯ ಕಲಿಕೆ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳ ಸಾಂಸ್ಕೃತಿಕ ಪ್ರತಿಭೆಗೂ ಇಲ್ಲಿ ವೇದಿಕೆ ಇದೆ. ಯಕ್ಷಗಾನ, ಸಂಗೀತ, ನೃತ್ಯ, ನಾಟಕ, ಏಕಪಾತ್ರಾಭಿನಯದಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಯೋಗ, ಕ್ರೀಡೆ, ಮಾನಸಿಕ ಮತ್ತು ದೈಹಿಕ ಆರೋಗ್ಯ ಚಟುವಟಿಕೆಗಳೂ ನಿಯಮಿತವಾಗಿವೆ. ಆಹಾರ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸುವ 'ಪೋಷಣಾ ಅಭಿಯಾನ'ವೂ ನಡೆಯುತ್ತದೆ.

ಗ್ರಾಮೀಣ ಪ್ರದೇಶದ ಪೋಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದರೆ ಅವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಬಹುದು ಎಂಬುದನ್ನು ಅರಿತ ಶಿಕ್ಷಕರು ಸಾಧ್ಯವಾದಷ್ಟು ಹೊಣೆಗಾರಿಕೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಮಕ್ಕಳ ಬ್ಯಾಗ್, ಪುಸ್ತಕ ಸೇರಿದಂತೆ ಹಲವು ಅಗತ್ಯಗಳನ್ನು ಸಂಘಸಂಸ್ಥೆಗಳು ನೋಡಿಕೊಳ್ಳುತ್ತಿರುವುದರಿಂದ ಪೋಷಕರ ಮೇಲಿನ ಆರ್ಥಿಕ ಹೊರೆ ಕೂಡ ಕಡಿಮೆಯಾಗಿದೆ.

ರತ್ನಕುಮಾರಿ ಅವರಿಗೆ ಸರ್ಕಾರಿ ಕೆಲಸ ಪಡೆಯಬೇಕು ಎಂಬ ಕಾರಣಕ್ಕೆ ಶಿಕ್ಷಕ ವೃತ್ತಿ ಆಯ್ಕೆಯಾಗಿರಲಿಲ್ಲ. ಮುಗ್ಧ ಮಕ್ಕಳಿಗೆ ಪಾಠ ಹೇಳಬೇಕು, ನಿಷ್ಕಲ್ಮಷ ಮನಸ್ಸಿನ ಮಕ್ಕಳೊಂದಿಗೆ ಬದುಕಬೇಕು, ಗ್ರಾಮೀಣ ಮಕ್ಕಳ ಬದುಕಿಗೆ ಉತ್ತಮ ದಾರಿ ರೂಪಿಸಬೇಕು ಎಂಬ ಹಂಬಲ ಅವರ ಆಯ್ಕೆಯ ಹಿಂದಿತ್ತು.

'ಮಕ್ಕಳು ವೈದ್ಯರು, ಎಂಜಿನಿಯರ್‌ಗಳೇ ಆಗಬೇಕೆಂದು ಅವರು ಬಯಸುವುದಿಲ್ಲ. ಶ್ರದ್ಧೆ, ಪ್ರಾಮಾಣಿಕತೆಯಿಂದ ಬದುಕಿಗೊಂದು ದಾರಿ ಕಂಡುಕೊಂಡರೆ ಅದೇ ಸಾರ್ಥಕ' ಎನ್ನುವುದು ಅವರ ನಂಬಿಕೆ.

ಶಾಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಸಮಯ ಮೀಸಲಿಡುವ ಅವರಿಗೆ ಕುಟುಂಬದ ಬೆಂಬಲವೂ ಇದೆ. ಪತಿ ವಸಂತ ಎಸ್‌.ವಿ. ಅವರು ಪ್ರಾಂಶುಪಾಲರಾಗಿರುವುದರಿಂದ ಮಾರ್ಗದರ್ಶನ ನೀಡುತ್ತಾರೆ. ಇಬ್ಬರು ಮಕ್ಕಳನ್ನೂ ತಮ್ಮದೇ ಶಾಲೆಯಲ್ಲಿ ಓದಿಸಿದ್ದಾರೆ. 'ನಮ್ಮ ಕೆಲಸವೇ ಇತರರಿಗೆ ಪ್ರೇರಣೆಯಾಗಬೇಕು' ಎನ್ನುವುದು ಅವರ ಅಚಲ ನಂಬಿಕೆ.

'ರತ್ನಕುಮಾರಿ ಮೇಡಂ ಹೆಸರಿಗೆ ತಕ್ಕಂತೆ ಅಮೂಲ್ಯ ರತ್ನ. ನನ್ನನ್ನೂ ಸೇರಿದಂತೆ ನೂರಾರು ಮಕ್ಕಳ ಬದುಕನ್ನು ರೂಪಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ಆಸಕ್ತಿಗೆ ತಕ್ಕಂತೆ ಅವರು ನೀಡಿದ ಮಾರ್ಗದರ್ಶನ ನಮ್ಮ ಬದುಕನ್ನು ಶಿಸ್ತುಬದ್ಧವಾಗಿಸಿದೆ' ಎನ್ನುತ್ತಾರೆ 'ಕಾಂತಾರ' ಮತ್ತು 'ಶಾಖಾಹಾರಿ' ಸಿನಿಮಾಗಳ ಸಹಾಯಕ ನಿರ್ದೇಶಕ ಶ್ರೀಪತಿ ಕಡಸೂರು.

ಒಂದು ಸರ್ಕಾರಿ ಶಾಲೆಯನ್ನು ಬದಲಿಸಲು ದೊಡ್ಡ ಕಟ್ಟಡ, ದುಬಾರಿ ಸಾಧನಗಳು ಅಥವಾ ಅಪಾರ ಹಣವೇ ಬೇಕಿಲ್ಲ. ಮಕ್ಕಳು ಹೇಗೆ ಕಲಿಯಬೇಕು ಎಂಬುದರ ಬಗ್ಗೆ ಹೊಸದಾಗಿ ಯೋಚಿಸುವ ಒಬ್ಬ ಶಿಕ್ಷಕ ಸಾಕು ಎಂಬುದನ್ನು ಸಮಟಗಾರು ಶಾಲೆ ತೋರಿಸುತ್ತಿದೆ.

ರತ್ನಕುಮಾರಿ ಅವರ ಸಣ್ಣ ಸಣ್ಣ ಪ್ರಯೋಗಗಳು ಶಾಲೆಯ ಸ್ವರೂಪವನ್ನೇ ಬದಲಿಸಿದವು. ಆ ಬದಲಾವಣೆ ಮಕ್ಕಳನ್ನು ಸೆಳೆಯಿತು, ಪೋಷಕರ ವಿಶ್ವಾಸ ಗಳಿಸಿತು. ಒಂದು ಕಾಲದಲ್ಲಿ ಮುಚ್ಚುವ ಆತಂಕದಲ್ಲಿದ್ದ ಶಾಲೆ ಇಂದು ದೂರದ ಊರುಗಳ ಮಕ್ಕಳನ್ನೂ ಆಕರ್ಷಿಸುತ್ತಿದೆ. ಆ ಪಯಣ ಈಗ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯ ಮನ್ನಣೆಯವರೆಗೆ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-51-2062439308

Dailyhunt
Disclaimer: This content has not been generated, created or edited by Dailyhunt. Publisher: Prajavani