ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರು ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 1.90 ಕೋಟಿ ನಗದು ಮೊತ್ತವನ್ನು ಒಳಗೊಂಡಿದೆ.
'ಮಣ್ಣು ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ರತನ್ ಲಾಲ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರುಬಳಕೆ ಕುರಿತು ಸಂಶೋಧನಾ ಕಾರ್ಯದಿಂದ ರತನ್ ಅವರು ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.

