ನವದೆಹಲಿ (ಪಿಟಿಐ): 'ಕಳೆದ ಹತ್ತು ವರ್ಷಗಳಲ್ಲಿ ದೇಶವು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳದೇಹೋಗಿದ್ದರೆ ಇಂದು ವಿಶ್ವದ ಬೇರೆಬೇರೆ ದೇಶಗಳಲ್ಲಿ ಆಗಿರುವುದ್ದಕ್ಕಿಂತ ಹೆಚ್ಚಿನ ಇಂಧನ ಬಿಕ್ಕಟ್ಟು ಭಾರತದಲ್ಲಿ ಉಂಟಾಗುತ್ತಿತ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೋಮವಾರ ಇಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹೊರತಾಗಿಯೂ ಭಾರತದ ಆರ್ಥಿಕ ಪ್ರಗತಿ ಸದೃಢವಾಗಿದೆ' ಎಂದರು.
'ದೇಶದ ಪಳೆಯುಳಿಕೆರಹಿತ ಇಂಧನ ಸಾಮರ್ಥ್ಯ 300 ಗಿಗಾ ವಾಟ್‌ಗೂ ಹೆಚ್ಚಿದೆ. 2030ರ ಹೊತ್ತಿಗೆ ಇದು 500 ಗಿಗಾ ವಾಟ್ ಆಗಲಿದೆ ಮತ್ತು ಮುಂದಿನ 10-11 ವರ್ಷಗಳಲ್ಲಿ ಈ ಸಾಮರ್ಥ್ಯಕ್ಕೆ ಹೆಚ್ಚುವರಿ 500 ಗಿಗಾ ವಾಟ್ ಸೇರ್ಪಡೆಯಾಗಿಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ರಾಜಕೀಯ ಮತ್ತು ನೀತಿಗಳಲ್ಲಿನ ಸ್ಥಿರತೆಯ ಕಾರಣಕ್ಕೆ ನವೀಕರಿಸಬಹು ದಾದ ಇಂಧನ ವಲಯದಲ್ಲಿ ಅಗಾಧ ವಾದ ಹೂಡಿಕೆ ಅವಕಾಶವನ್ನು ದೇಶವು ನೀಡುತ್ತಿದೆ. ಈ ದಶಕದ ಅಂತ್ಯದ ವೇಳೆಗೆ ₹20 ಲಕ್ಷ ಕೋಟಿಗಳಷ್ಟು ಹೂಡಿಕೆ ಅವಕಾಶ ತೆರೆದುಕೊಳ್ಳಲಿದೆ' ಎಂದ ಅವರು, ಭಾರತದಲ್ಲಿ ಹೂಡಿಕೆ ಮಾಡುವಂತೆ ಹೂಡಿಕೆದಾರರಿಗೆ ಕರೆ ನೀಡಿದರು.
'2 ವರ್ಷಗಳಲ್ಲಿ ಶೇ 50ರಷ್ಟು ಪ್ರಗತಿ'
'ಎರಡು ವರ್ಷಗಳಲ್ಲಿ ಭಾರತವು 67 ಬಿಲಿಯನ್ ಅಮೆರಿಕನ್ ಡಾಲರ್ (₹6.34 ಲಕ್ಷ ಕೋಟಿ) ಹೂಡಿಕೆಯನ್ನು ಆಕರ್ಷಿಸಿದೆ. ಇದು ಒಂದೇ ವಲಯದಲ್ಲಿ ಆದ ಗರಿಷ್ಠ ಹೂಡಿಕೆಗಳಲ್ಲಿ ಒಂದು' ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
'ವೇಗವಾಗಿ ಬೆಳೆಯುತ್ತಿರುವ ಈ ವಲಯವು ಎರಡು ವರ್ಷಗಳಲ್ಲಿ ಶೇ 50ಕ್ಕಿಂತ ಹೆಚ್ಚು ಪ‍್ರಗತಿ ಕಂಡಿದೆ ಮತ್ತು ಭವಿಷ್ಯದಲ್ಲಿ ದೇಶದ ಇಂಧನ ಬೇಡಿಕೆಯನ್ನು ಸರಿದೂಗಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ' ಎಂದು ಹೇಳಿದರು.
'ಗ್ರೀನ್ ಹೈಡ್ರೋಜನ್ ಯೋಜನೆಗಳು ಸುಮಾರು ₹90 ಸಾವಿರ ಕೋಟಿಗಳ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ' ಎಂದಿದ್ದಾರೆ.
ಪ್ರತಿ ಸರ್ಕಾರಿ ಕಟ್ಟಡ, ಶಾಲೆ, ಕಾಲೇಜು, ಆಸ್ಪತ್ರೆ, ಬೀದಿದೀಪ ವ್ಯವಸ್ಥೆಯನ್ನು ಸೌರಶಕ್ತಿಯೊಂದಿಗೆ ಸಂಪರ್ಕಿಸಬೇಕು. ಸ್ಥಳೀಯವಾಗಿ ಸಂಗ್ರಹಣೆ ವ್ಯವಸ್ಥೆ ರೂಪಿಸಬೇಕು ಮತ್ತು ನವೀನ ಬ್ಯಾಟರಿ ಸಂಗ್ರಹ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು ನರೇಂದ್ರ ಮೋದಿ, ಪ್ರಧಾನಿ
261103-51-1832766691

