ವಿಶ್ವಸಂಸ್ಥೆ: ಪಾಕಿಸ್ತಾನವು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇದಿಕೆಯಲ್ಲಿ ಮತ್ತೊಮ್ಮೆ ಕಾಶ್ಮೀರ ವಿವಾದ ಹಾಗೂ 2025ರ ಸೇನಾ ಸಂಘರ್ಷದ ವಿಚಾರ ಪ್ರಸ್ತಾಪಿಸಿದೆ.
ಅಧಿವೇಶನದಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಭಾರತದೊಂದಿಗೆ 2025ರ ಮೇ ತಿಂಗಳಲ್ಲಿ ನಡೆದ ಸೇನಾ ಸಂಘರ್ಷದ ವೇಳೆ ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು, 26 ನಾಗರಿಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಇದು ಎರಡೂ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷಕ್ಕೆ ಕಾರಣವಾಗಿತ್ತು. ಮೇ 10ರಂದು ಕದನ ವಿರಾಮ ಘೋಷಣೆಯಾಗಿತ್ತು.
ಉಭಯ ರಾಷ್ಟ್ರಗಳ ನಡುವೆ ಮಧ್ಯಪ್ರವೇಶಿಸಿ, ಸಂಘರ್ಷವನ್ನು ಕೊನೆಗೊಳಿಸಿದ್ದು ತಾವೇ ಎಂದು ಟ್ರಂಪ್ ಜಾಗತಿಕ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಾ ಬಂದಿದೆ.
ವಿಶ್ವಸಂಸ್ಥೆಯಲ್ಲಿ ಸುಮಾರು 23 ನಿಮಿಷ ಮಾತನಾಡಿದ ಷರೀಫ್, ಅಮೆರಿಕ ಅಧ್ಯಕ್ಷ ಟ್ರಂಪ್ ಸಕಾಲದಲ್ಲಿ ಮಧ್ಯಪ್ರವೇಶಿಸಿದ್ದರಿಂದಾಗಿ ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಜೀವಗಳು ಉಳಿದವು. ಅವರ 'ದೃಢ ಹಾಗೂ ದೂರದೃಷ್ಟಿಯ ನಾಯಕತ್ವ'ಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಮುಂದುವರಿದು, 2025ರಲ್ಲಿ ಉದ್ವಿಗ್ನತೆ ಉಂಟಾದಂತೆ ಮತ್ತೆ ಆಗಬಾರದು ಎಂದರೆ, ಕಾಶ್ಮೀರ ಸಮಸ್ಯೆಯು ನ್ಯಾಯಯುತವಾಗಿ ಇತ್ಯರ್ಥವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.

