ನವದೆಹಲಿ: ಒಮಾನ್ ಕರಾವಳಿಯಲ್ಲಿ 14 ನಾವಿಕರನ್ನು ಹೊತ್ತೊಯ್ಯುತ್ತಿದ್ದ ಭಾರತದ ಸರಕು ಸಾಗಣೆ ಹಡಗು 'ಎಂಎಸ್‌ವಿ ಅಲ್ ಜುಸುಫಿ' ಗುರಿಯಾಗಿಸಿ ನಡೆದಿರುವ ದಾಳಿಯಲ್ಲಿ ನಾವಿಕನೊಬ್ಬ ಮೃತಪಟ್ಟಿದ್ದಾರೆ.
ಒಮಾನ್ ಕರಾವಳಿಯಲ್ಲಿ ಸಂಚರಿಸುತ್ತಿದ್ದಾಗ ಗುರುತಿಸಲಾಗದ ಡ್ರೋನ್ ಅಥವಾ ಕ್ಷಿಪಣಿ ಮಾದರಿಯ ವಸ್ತುವೊಂದು ಹಡಗಿಗೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ ಎಂದು ನೌಕೆ ಮತ್ತು ಜಲಯಾನ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.
ಮೃತ ನಾವಿಕನನ್ನು ಗುಜರಾತ್ ಮೂಲದ ಗಾಂಧರ್ ನಹೀಮ್ ಅಜೀಜ್ ಎಂದು ಗುರುತಿಸಲಾಗಿದೆ.
'ನವೆಂಬರ್ 2ರಂದು 14 ಭಾರತೀಯ ನಾವಿಕರಿದ್ದ ಭಾರತದ ಎಂಎಸ್‌ವಿ ಅಲ್ ಜುಸುಫಿ ಹಡಗಿಗೆ ಒಮಾನ್ ಕರಾವಳಿಯಲ್ಲಿ ಗುರುತಿಸಲಾಗದ ವಸ್ತುವೊಂದು ಅಪ್ಪಳಿಸಿದೆ. ಹಡಗಿನಲ್ಲಿದ್ದ 13 ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಗುಜರಾತ್‌ನ ಗಾಂಧರ್ ನಹೀಮ್ ಅಜೀಜ್ ಮೃತಪಟ್ಟಿದ್ದಾರೆ' ಎಂದು ಸೋನೊವಾಲ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಚಿವಾಲಯ ಮತ್ತು ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ರಕ್ಷಿಸಲ್ಪಟ್ಟ 13 ನಾವಿಕರಿಗೆ ತಕ್ಷಣದ ನೆರವು ನೀಡಲಾಗುತ್ತಿದೆ. ಅಲ್ಲದೆ, ಗಾಂಧರ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

