Dailyhunt Logo
  • Light mode
    Follow system
    Dark mode
    • Play Story
    • App Story
ಭಾರತಕ್ಕೆ ಏಕೀಕೃತ ಸರ್ಕಾರಿ ವಿನ್ಯಾಸ ಮಾನದಂಡ ಏಕೆ ಅಗತ್ಯ?

ಭಾರತಕ್ಕೆ ಏಕೀಕೃತ ಸರ್ಕಾರಿ ವಿನ್ಯಾಸ ಮಾನದಂಡ ಏಕೆ ಅಗತ್ಯ?

ಬೆಂಗಳೂರಿನ ಒಬ್ಬ ನಾಗರಿಕರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸರ್ಕಾರದ ಪೋರ್ಟಲ್ ತೆರೆಯುತ್ತಾರೆ. ಪೋರ್ಟಲ್‌ನ ಮುಖಪುಟವು ಕೇಂದ್ರ ಸರ್ಕಾರದ ವಿನ್ಯಾಸವನ್ನು ಹೋಲುತ್ತದೆ, ಆದರೆ ಅದರ ಒಳಗಿನ ಲಿಂಕುಗಳು ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತವೆ. ನಂತರ ಅವರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಲು ಬಿಬಿಎಂಪಿ ತೆರಿಗೆ ಪೋರ್ಟಲ್ ತೆರೆಯುತ್ತಾರೆ; ಅಲ್ಲಿ ಮತ್ತೊಂದು ವಿನ್ಯಾಸ ಎದುರಾಗುತ್ತದೆ.

ಬೇಸತ್ತ ಅವರು ಡಿಜಿಟಲ್ ಮಾರ್ಗವನ್ನು ಬಿಟ್ಟು ನೇರವಾಗಿ ಸರ್ಕಾರಿ ಕಚೇರಿಗೆ ತೆರಳುತ್ತಾರೆ. ಏಕೆಂದರೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಗೊಂದಲಕಾರಿಯಾಗಿದ್ದು, ಸುಲಭವಾಗಿ ಅನುಸರಿಸಲು ಸಾಧ್ಯವಾಗುವುದಿಲ್ಲ.

ಇದು ಒಂದು ಪ್ರತ್ಯೇಕ ಅಥವಾ ಅಪರೂಪದ ಅನುಭವವಲ್ಲ. ಇದು ಲಕ್ಷಾಂತರ ಭಾರತೀಯರ ದೈನಂದಿನ ವಾಸ್ತವವಾಗಿದೆ.

ಭಾರತವು ಆಧಾರ್, ಯುಪಿಐ ಮತ್ತು ಡಿಜಿಲಾಕರ್‌ನಂತಹ ವಿಶ್ವಮಟ್ಟದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸಿದೆ. ಆದರೆ ಸರ್ಕಾರದೊಂದಿಗೆ ಸಂವಹನ ನಡೆಸುವ 'ಫ್ರಂಟ್ ಎಂಡ್ ಎಕ್ಸ್‌ಪಿರಿಯನ್ಸ್‌' ಕೆಟ್ಟದಾಗಿದೆ. ಇತ್ತೀಚೆಗೆ ದಿ ಎಕನಾಮಿಸ್ಟ್ ಪತ್ರಿಕೆಯು, ಭಾರತಕ್ಕೆ ಒಂದು ಸಮರ್ಪಕ ವೀಸಾ ವೆಬ್‌ಸೈಟ್ ನಿರ್ಮಿಸಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿತ್ತು. ಅನೇಕ ಸರ್ಕಾರಿ ಪೋರ್ಟಲ್‌ಗಳನ್ನು ಪಾಪ್-ಅಪ್‌ಗಳು, ಚಲಿಸುವ ಪಠ್ಯ, ಮಿನುಗುವ ಗ್ರಾಫಿಕ್ಸ್, ಸಚಿವರ ಭಾವಚಿತ್ರಗಳು ಮತ್ತು ಹಳೆಯ ಶೈಲಿಯ ಕ್ಯಾಪ್ಚಾಗಳ ಮಿಶ್ರಣ ಎಂದು ಅದು ವರ್ಣಿಸಿತ್ತು.

ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲ. ತಂತ್ರಜ್ಞಾನದ ಕೊರತೆಯೂ ಇಲ್ಲ. ಭಾರತದಲ್ಲಿ ಕಾಣೆಯಾಗಿರುವುದು ಒಂದೇ; ಸರ್ಕಾರದ ಪ್ರತಿಯೊಂದು ಹಂತದಲ್ಲೂ ಜಾರಿಗೊಳಿಸಲಾದ ಏಕೀಕೃತ ಡಿಜಿಟಲ್ ವಿನ್ಯಾಸ ಮಾನದಂಡ.

ಛಿದ್ರ ವಿನ್ಯಾಸ, ಛಿದ್ರ ಆಡಳಿತ

ಭಾರತದ ಡಿಜಿಟಲ್ ಆಡಳಿತವು ಕೇಂದ್ರ ಸರ್ಕಾರ, 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು, 700ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ಸಾವಿರಾರು ನಗರಪಾಲಿಕೆಗಳು ಮತ್ತು ಪಂಚಾಯಿತಿಗಳಲ್ಲಿ ಹರಡಿಕೊಂಡಿದೆ. ಪ್ರತಿಯೊಂದೂ ತನ್ನದೇ ಆದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳನ್ನು ನಿರ್ಮಿಸುತ್ತಿದೆ.

ಭಾರತೀಯ ಸರ್ಕಾರಿ ವೆಬ್‌ಸೈಟ್‌ಗಳ ಕುರಿತಾದ ಒಂದು ಅಧ್ಯಯನವು ಲೇಔಟ್, ನ್ಯಾವಿಗೇಷನ್ ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಪ್ರಮಾಣದ ಅಸಮಂಜಸತೆಗಳನ್ನು ಪತ್ತೆಹಚ್ಚಿದೆ. ಮಹಾರಾಷ್ಟ್ರದಲ್ಲಿ ಡೊಮೇನ್ ಹೆಸರುಗಳಲ್ಲಿಯೂ ಏಕರೂಪತೆ ಇಲ್ಲ ಎಂಬುದು ಕಂಡುಬಂದಿದೆ. ಕೆಲವು ಇಲಾಖೆಗಳು .gov.in ಬಳಸಿದರೆ, ಇನ್ನೂ ಕೆಲವು ಬಳಸುವುದಿಲ್ಲ.

ಮೂರು ಗಂಭೀರ ಸಮಸ್ಯೆಗಳು:

ಒಂದು, ನಾಗರಿಕರು ಗೊಂದಲಕ್ಕೊಳಗಾಗುತ್ತಾರೆ. ಪ್ರತಿಯೊಂದು ಇಲಾಖೆಯೂ ವಿಭಿನ್ನ ವಿನ್ಯಾಸ ಭಾಷೆಯನ್ನು ಬಳಸುತ್ತದೆ. ಆದಾಯ ತೆರಿಗೆ ಪೋರ್ಟಲ್ ಅರ್ಥವಾಗುವ ನಾಗರಿಕನಿಗೆ ಪಾಸ್‌ಪೋರ್ಟ್ ಪೋರ್ಟಲ್ ಗೊಂದಲ ಉಂಟುಮಾಡಬಹುದು. ಕರ್ನಾಟಕದ ಸೇವೆಗಳಿಗೆ ಒಗ್ಗಿಕೊಂಡಿರುವ ಬಳಕೆದಾರರು ಬೇರೆ ರಾಜ್ಯದ ಪೋರ್ಟಲ್‌ನಲ್ಲಿ ದಾರಿ ತಪ್ಪಬಹುದು.

ಎರಡು, ವಿಶ್ವಾಸ ಕುಸಿಯುತ್ತದೆ. ಹಳೆಯದಾದ ಮತ್ತು ಕಳಪೆಯಾಗಿ ವಿನ್ಯಾಸಗೊಳಿಸಲಾದ ವೆಬ್‌ಸೈಟ್‌ಗಳು ಸಾಂಸ್ಥಿಕ ನಿರ್ಲಕ್ಷ್ಯದ ಸಂಕೇತವಾಗುತ್ತವೆ. ಸರ್ಕಾರವು ತಮಗೆ ಬೇಕಾದ ಸೇವೆಯನ್ನು ಸಮರ್ಪಕವಾಗಿ ನೀಡಲು ಸಮರ್ಥವೇ ಎಂಬ ಸಂದೇಹ ನಾಗರಿಕರಲ್ಲಿ ಮೂಡಲು ಆರಂಭವಾಗುತ್ತದೆ.

ಮೂರು, ಸಾರ್ವಜನಿಕ ಹಣ ವ್ಯರ್ಥವಾಗುತ್ತದೆ. ಒಂದು ಇಲಾಖೆಯು ಈಗಾಗಲೇ ಪರಿಹರಿಸಿರುವ ಸಮಸ್ಯೆಗೆ ಮತ್ತೊಂದು ಇಲಾಖೆ ಹೊಸ ಪರಿಹಾರ ಕಂಡುಹಿಡಿಯಲು ಮುಂದಾಗುತ್ತದೆ. ಏಕೀಕೃತ ವಿನ್ಯಾಸ ವ್ಯವಸ್ಥೆಯು ಸರ್ಕಾರಿ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಇಮೇಲ್ ಬಿಕ್ಕಟ್ಟು

ಇನ್ನೂ ಆಳವಾದ ಸಮಸ್ಯೆಯೆಂದರೆ ಅಧಿಕೃತ ಸರ್ಕಾರಿ ಇಮೇಲ್ ಬಳಕೆ. ಪದೇ ಪದೇ ಎಚ್ಚರಿಕೆ ನೀಡಲಾಗಿದ್ದರೂ, ಅನೇಕ ಸರ್ಕಾರಿ ನೌಕರರು ಅಧಿಕೃತ ಸಂವಹನಕ್ಕಾಗಿ ವೈಯಕ್ತಿಕ ಜಿಮೇಲ್, ಯಾಹೂ ಮತ್ತು ಹಾಟ್‌ಮೇಲ್ ಖಾತೆಗಳನ್ನು ಬಳಸುವುದನ್ನು ಮುಂದುವರಿಸಿದ್ದಾರೆ. 2024ರ CBIC ಸುತ್ತೋಲೆಯೊಂದು, 95 ಕಸ್ಟಮ್ಸ್ ಮತ್ತು ಸಿಜಿಎಸ್‌ಟಿ ಘಟಕಗಳು ತಮ್ಮ ಅಧಿಕೃತ ಐಡಿಯಾಗಿ ಜಿಮೇಲ್ ಬಳಸುತ್ತಿದ್ದುದನ್ನು ಬಹಿರಂಗಪಡಿಸಿತ್ತು. ರಕ್ಷಣಾ ಲೆಕ್ಕಪತ್ರ ಇಲಾಖೆಯು ಸಹ ಇದೇ ರೀತಿಯ ಎಚ್ಚರಿಕೆಯನ್ನು ನೀಡಿತ್ತು. ವೈಯಕ್ತಿಕ ಇಮೇಲ್ ಬಳಕೆಯು ಸರ್ಕಾರಿ ದತ್ತಾಂಶವನ್ನು ಅಪಾಯಕ್ಕೆ ಒಡ್ಡಬಹುದು ಎಂದು ಅದು ತಿಳಿಸಿತ್ತು.

ಇದು ಅಪಾಯಕಾರಿ. ವೈಯಕ್ತಿಕ ಇಮೇಲ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ದುರುದ್ದೇಶಪೂರಿತ ಲಿಂಕ್‌ಗಳು ಸರ್ಕಾರದ ಭದ್ರತಾ ಗೇಟ್‌ವೇಗಳನ್ನು ಬೈಪಾಸ್ ಮಾಡಬಹುದು. ನಾಗರಿಕರು ಅಧಿಕೃತತೆಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಸೂಕ್ಷ್ಮ ದತ್ತಾಂಶವು ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹವಾಗಿರುತ್ತದೆ. ಫಿಶಿಂಗ್ ಮತ್ತು ಕ್ರೆಡೆನ್ಷಿಯಲ್ ಕಳ್ಳತನದ ಅಪಾಯ ಹೆಚ್ಚಾಗುತ್ತದೆ.

info@department.gov.in ಮಾದರಿಯ ಹಂಚಿಕೊಂಡ ಇಲಾಖಾ ಇನ್‌ಬಾಕ್ಸ್‌ಗಳು (shared inbox) ಸಹ ಸಮಾನವಾಗಿ ಸಮಸ್ಯಾತ್ಮಕವಾಗಿವೆ. ಅವು ಜವಾಬ್ದಾರಿತನವನ್ನು (accountability) ಕುಗ್ಗಿಸುತ್ತವೆ ಮತ್ತು ಸಾಂಸ್ಥಿಕ ಸ್ಮೃತಿಯನ್ನು (institutional memory) ದುರ್ಬಲಗೊಳಿಸುತ್ತವೆ. ಒಬ್ಬ ಅಧಿಕಾರಿ ವರ್ಗಾವಣೆಯಾದಾಗ, ಇಮೇಲ್ ಖಾತೆ ಇಲಾಖೆಯಲ್ಲೇ ಉಳಿಯುತ್ತದೆ. ಆದರೆ ಪತ್ರವ್ಯವಹಾರದ ಇತಿಹಾಸ ಮತ್ತು ನಿರ್ಧಾರಗಳ ಜಾಡು ಕಳೆದುಹೋಗುತ್ತದೆ.

ಇಮೇಲ್ ನೀತಿ: ಕಾಗದದ ಮೇಲೆ ಬಲಿಷ್ಠ, ಆಚರಣೆಯಲ್ಲಿ ದುರ್ಬಲ

ಭಾರತ ಸರ್ಕಾರವು ಅಕ್ಟೋಬರ್ 30, 2024ರಂದು ಇಮೇಲ್ ನೀತಿ 2024 ಅನ್ನು ಅಧಿಸೂಚಿಸಿತು. ಅದು ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ:

· ಅಧಿಕೃತ ಸಂವಹನಕ್ಕೆ .NIC eMail ಮಾತ್ರ ಬಳಸಬೇಕು.

· ಪ್ರತಿ ನೌಕರನಿಗೂ ವೈಯಕ್ತಿಕ, ಸೇವಾ-ನಿರ್ದಿಷ್ಟ ಇಮೇಲ್ ಐಡಿ ಇರಬೇಕು (ಉದಾ: ಐಪಿಎಸ್ ಅಧಿಕಾರಿಗೆ @ips.gov.in).

· ಇಲಾಖೆಗಳು @departmentname.gov.in ಡೊಮೇನ್‌ಗಳಿಗೆ ವಲಸೆ ಹೋಗಬೇಕು. ಇದಕ್ಕಾಗಿ ಆರು ತಿಂಗಳ ಗಡುವು ನೀಡಲಾಗಿದೆ.

· ಗುತ್ತಿಗೆದಾರರು ಮತ್ತು ಸಲಹೆಗಾರರ ಐಡಿಗಳಿಗೆ "-contractor" ಸೇರಿಸಬೇಕು.

· ಅಧಿಕೃತ ಇಮೇಲ್ ಅನ್ನು ಸಾಮಾಜಿಕ ಮಾಧ್ಯಮ ನೋಂದಣಿಗೆ ಬಳಸುವಂತಿಲ್ಲ.

ಆದರೆ ಅನುಷ್ಠಾನ ಇನ್ನೂ ಅಸಮಂಜಸವಾಗಿದೆ. ಅಧಿಕಾರಿಗಳು ಇನ್ನೂ ಜಿಮೇಲ್‌ಗೆ ಆದ್ಯತೆ ನೀಡುತ್ತಾರೆ, ಏಕೆಂದರೆ ಅದು ವೇಗವಾಗಿದ್ದು ಬಳಸಲು ಸುಲಭವಾಗಿದೆ. ಇಲಾಖೆಗಳು ಡೊಮೇನ್ ವಲಸೆಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿವೆ. ಜಾರಿ ದುರ್ಬಲವಾಗಿದೆ. ತಾಂತ್ರಿಕ ಮೂಲಸೌಕರ್ಯವೂ ಹಿಂದೆ ಬಿದ್ದಿದೆ.

ಬ್ರಿಟನ್ ಮಾದರಿ: ಭಾರತಕ್ಕೆ ಒಂದು ಆದರ್ಶ ಚೌಕಟ್ಟು

ಯುನೈಟೆಡ್ ಕಿಂಗ್ಡಮ್ ಒಂದು ಸಾಬೀತಾದ ಮಾದರಿಯನ್ನು ನೀಡುತ್ತದೆ. ಬ್ರಿಟನ್‌ನಲ್ಲಿ ಪ್ರತಿಯೊಬ್ಬ ಸಾರ್ವಜನಿಕ ವಲಯದ ನೌಕರನೂ, ಸಚಿವರಿಂದ ಕಿರಿಯ ಗುಮಾಸ್ತರವರೆಗೆ, ವೈಯಕ್ತಿಕ .gov.uk ಇಮೇಲ್ ಖಾತೆಯನ್ನು ಬಳಸಬೇಕು. ಇದು ವೃತ್ತಿಪರತೆ, ಪಾರದರ್ಶಕತೆ, ಭದ್ರತೆ ಮತ್ತು ಜವಾಬ್ದಾರಿತನವನ್ನು ಖಚಿತಪಡಿಸುತ್ತದೆ.

ಬ್ರಿಟನ್‌ನ ಗವರ್ನಮೆಂಟ್ ಡಿಜಿಟಲ್ ಸರ್ವಿಸ್ (GDS) GOV.UK ಡಿಸೈನ್ ಸಿಸ್ಟಂ ಅನ್ನು ರೂಪಿಸಿದೆ. ಇದು ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಬಳಸುವ ಏಕೀಕೃತ ಶೈಲಿಗಳು, ಘಟಕಗಳು ಮತ್ತು ಮಾದರಿಗಳ ಸಮೂಹವಾಗಿದೆ. ಪ್ರತಿ ಬ್ರಿಟಿಷ್ ಸರ್ಕಾರಿ ವೆಬ್‌ಸೈಟ್ ಒಂದೇ ರೀತಿಯಲ್ಲಿ ಕಾಣುತ್ತದೆ ಮತ್ತು ಒಂದೇ ರೀತಿಯ ಅನುಭವವನ್ನು ನೀಡುತ್ತದೆ. ನಾಗರಿಕರು ಪ್ರತಿಯೊಂದು ಸೇವೆಗೂ ಹೊಸ ಇಂಟರ್ಫೇಸ್ ಕಲಿಯುವ ಅಗತ್ಯವಿರುವುದಿಲ್ಲ.

ಪ್ರತಿ ಸೇವೆಯೂ ನೇರ ಪ್ರಸಾರಕ್ಕೆ ಮುನ್ನ ಕಡ್ಡಾಯ ಸೇವಾ ಮಾನದಂಡ (Service Standard) ಮೌಲ್ಯಮಾಪನವನ್ನು ಉತ್ತೀರ್ಣವಾಗಬೇಕು.

ಫಲಿತಾಂಶ: ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಸರ್ಕಾರಿ ವೇದಿಕೆಗಳಲ್ಲಿ ಒಂದಾಗಿದೆ.

ಅಡಿಪಾಯ ಇದೆ

GIGW 3.0 (Guidelines for Indian Government Websites) ಗುಣಮಟ್ಟ, ಪ್ರವೇಶಸಾಧ್ಯತೆ ಮತ್ತು ಭದ್ರತೆಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಇದನ್ನು NIC, STQC ಹಾಗೂ CERT-In ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

UX4G ಡಿಸೈನ್ ಸಿಸ್ಟಂ 2.0 (MeitY) ಆಧುನಿಕ, ಮುಕ್ತ-ಮೂಲ ವಿನ್ಯಾಸ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು Figma-ready ಆಗಿದ್ದು, ಮರುಬಳಕೆ ಮಾಡಬಹುದಾದ ಘಟಕಗಳನ್ನು ನೀಡುತ್ತದೆ.

ಡಿಜಿಟಲ್ ಬ್ರಾಂಡ್ ಐಡೆಂಟಿಟಿ ಮ್ಯಾನ್ಯುಯಲ್ (DBIM) ಬ್ರಾಂಡಿಂಗ್ ಅನ್ನು ಸಮನ್ವಯಗೊಳಿಸುತ್ತದೆ.

NeSDA (National e-Governance Service Delivery Assessment) ಡಿಜಿಟಲ್ ಸೇವಾ ವಿತರಣೆಯನ್ನು ಮೌಲ್ಯಮಾಪನ ಮಾಡುತ್ತದೆ.

ಆದರೆ ಈ ಉಪಕ್ರಮಗಳು ಸ್ವಯಂಪ್ರೇರಿತವಾಗಿದ್ದು, ಅಸಮಂಜಸವಾಗಿ ಅಳವಡಿಸಲ್ಪಟ್ಟಿವೆ. ಕೆಲವು ಇಲಾಖೆಗಳು GIGW ಅನ್ನು ಪಾಲಿಸುತ್ತವೆ. ಇನ್ನೂ ಕೆಲವು ನಿರ್ಲಕ್ಷಿಸುತ್ತವೆ. ಕೆಲವು UX4G ಬಳಸುತ್ತವೆ. ಇನ್ನೂ ಕೆಲವು ತಮ್ಮದೇ ವಿನ್ಯಾಸವನ್ನು ರೂಪಿಸುತ್ತವೆ. ಇಮೇಲ್ ನೀತಿಯ ಜಾರಿಯೂ ತೇಪೆ ತೇಪೆಯಾಗಿದೆ.

ಒಂದು ರಾಷ್ಟ್ರ, ಒಂದೇ ಡಿಜಿಟಲ್ ಗುರುತು

  1. ರಾಷ್ಟ್ರೀಯ ಡಿಜಿಟಲ್ ವಿನ್ಯಾಸ ಪ್ರಾಧಿಕಾರವನ್ನು ರಚಿಸಿ. MeitY ಅಡಿಯಲ್ಲಿ ಒಂದು ಕೇಂದ್ರ ಸಂಸ್ಥೆಯು ಎಲ್ಲಾ ಹಂತಗಳ ಸರ್ಕಾರದಲ್ಲಿ ಡಿಜಿಟಲ್ ವಿನ್ಯಾಸ ಮಾನದಂಡಗಳನ್ನು ಜಾರಿಗೊಳಿಸಬೇಕು.

  2. GIGW ಅನುಸರಣೆಯನ್ನು ಕಡ್ಡಾಯಗೊಳಿಸಿ. ಅನುಸರಿಸದ ವೆಬ್‌ಸೈಟ್‌ಗಳನ್ನು ಗುರುತಿಸಿ, ನಿಗದಿತ ಗಡುವಿನೊಳಗೆ ಸರಿಪಡಿಸಲು ಸೂಚಿಸಬೇಕು.

  3. UX4G ಅನ್ನು ರಾಷ್ಟ್ರೀಯ ವಿನ್ಯಾಸ ವ್ಯವಸ್ಥೆಯಾಗಿ ಅಳವಡಿಸಿ. ಪ್ರತಿ ಸರ್ಕಾರಿ ವೆಬ್‌ಸೈಟ್ ಒಂದೇ ಘಟಕಗಳು, ಲೇಔಟ್‌ಗಳು ಮತ್ತು ಮಾದರಿಗಳನ್ನು ಬಳಸಬೇಕು.

  4. ಇಮೇಲ್ ನೀತಿ 2024 ಅನ್ನು ಎಲ್ಲಾ ಹಂತಗಳಲ್ಲಿ ಜಾರಿಗೊಳಿಸಿ. ಪ್ರತಿ ಸರ್ಕಾರಿ ನೌಕರನಿಗೂ ವೈಯಕ್ತಿಕ ಅಧಿಕೃತ ಇಮೇಲ್ ಐಡಿ ಇರಬೇಕು. ಹಂಚಿಕೊಂಡ ಇಲಾಖಾ ಇಮೇಲ್ ಖಾತೆಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಬೇಕು.

  5. ಏಕೀಕೃತ .gov.in ಡೊಮೇನ್ ರಚನೆಯನ್ನು ಜಾರಿಗೊಳಿಸಿ. ಭಾರತವು .gov.in ಮತ್ತು ರಾಜ್ಯ-ನಿರ್ದಿಷ್ಟ ಡೊಮೇನ್‌ಗಳನ್ನು (ಉದಾ: .karnataka.gov.in) ಕಡ್ಡಾಯಗೊಳಿಸಬೇಕು.

  6. ಕಡ್ಡಾಯ ಸೇವಾ ಮೌಲ್ಯಮಾಪನವನ್ನು ಪರಿಚಯಿಸಿ. ಗುಣಮಟ್ಟ, ಪ್ರವೇಶಸಾಧ್ಯತೆ ಮತ್ತು ಭದ್ರತಾ ಮಾನದಂಡಗಳನ್ನು ಪೂರೈಸದೆ ಯಾವುದೇ ಡಿಜಿಟಲ್ ಸೇವೆ ನೇರ ಪ್ರಸಾರಕ್ಕೆ ಹೋಗಬಾರದು.

  7. ಕೇಂದ್ರೀಕೃತ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ನಿರ್ಮಿಸಿ. ಯಾವ ಇಲಾಖೆಗಳು ಅನುಸರಿಸುತ್ತಿವೆ ಮತ್ತು ಯಾವುವು ಅನುಸರಿಸುತ್ತಿಲ್ಲ ಎಂಬುದನ್ನು ನಾಗರಿಕರು ನೋಡಲು ಸಾಧ್ಯವಾಗಬೇಕು.

  8. ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಿ. ಏಕೀಕೃತ ವಿನ್ಯಾಸ ಮಾನದಂಡವನ್ನು ಜಾರಿಗೊಳಿಸಲು ಸರ್ಕಾರದಾದ್ಯಂತ ನುರಿತ ವಿನ್ಯಾಸಕರು ಮತ್ತು ಡೆವಲಪರ್‌ಗಳು ಅಗತ್ಯವಿದ್ದಾರೆ. ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದೊಂದಿಗೆ ಸಹಭಾಗಿತ್ವದಲ್ಲಿ ತರಬೇತಿ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡಬೇಕು.

ಕರ್ನಾಟಕಕ್ಕೆ ವಿಶೇಷ ಅವಕಾಶ

ಕರ್ನಾಟಕವು ಈ ಸುಧಾರಣೆಗೆ ಮುಂಚೂಣಿಯಲ್ಲಿರಲು ಸಾಕಷ್ಟು ಸಾಮರ್ಥ್ಯ ಹೊಂದಿದೆ. ಸಕಾಲ ಯೋಜನೆಯು ಈಗಾಗಲೇ ಸೇವಾ ಖಾತರಿ ಕಾಯ್ದೆಯ ಮೂಲಕ ಸಮಯಬದ್ಧ ಸೇವಾ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಬೆಂಗಳೂರು ಒನ್ ಕೇಂದ್ರಗಳು ಏಕೀಕೃತ ಸೇವಾ ವಿತರಣೆಯ ಮಾದರಿಯಾಗಿವೆ. ರಾಜ್ಯದಲ್ಲಿ ಐಟಿ ಮತ್ತು ಬಿಟಿ ಕ್ಷೇತ್ರದ ಅಗಾಧ ಪ್ರತಿಭೆ ಲಭ್ಯವಿದೆ.

ಕರ್ನಾಟಕವು ತನ್ನ ಎಲ್ಲಾ ಇಲಾಖಾ ವೆಬ್‌ಸೈಟ್‌ಗಳಿಗೆ UX4G ಅನ್ನು ಅಳವಡಿಸಿ, ಎಲ್ಲಾ ಅಧಿಕಾರಿಗಳಿಗೆ @karnataka.gov.in ಇಮೇಲ್ ಅನ್ನು ಕಡ್ಡಾಯಗೊಳಿಸಿದರೆ, ಅದು ದೇಶಕ್ಕೆ ಮಾದರಿಯಾಗಬಹುದು. ಇದು ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಕರ್ನಾಟಕದ ಮಹತ್ವದ ಕೊಡುಗೆಯಾಗುತ್ತದೆ.

ಡಿಜಿಟಲ್ ಇಂಡಿಯಾಗೆ ಒಂದು ಡಿಜಿಟಲ್ ಗುರುತು

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ವಿಶ್ವದ ಕಣ್ಣಿಗೆ ಅಸೂಯೆಯ ಸಂಗತಿಯಾಗಿದೆ. ಆಧಾರ್ ಒಂದು ಶತಕೋಟಿಗೂ ಹೆಚ್ಚು ಜನರಿಗೆ ಗುರುತನ್ನು ನೀಡಿದೆ. ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಡಿಜಿಲಾಕರ್ ದಾಖಲೆ ನಿರ್ವಹಣೆಯ ಸ್ವರೂಪವನ್ನೇ ಬದಲಿಸಿದೆ.

ಆದರೆ ಸರ್ಕಾರದೊಂದಿಗೆ ಸಂವಹನ ನಡೆಸುವ ಮುಂಭಾಗದ ಅನುಭವವು ಇನ್ನೂ ಛಿದ್ರಗೊಂಡಿದ್ದು, ಕಿರಿಕಿರಿಯುಂಟುಮಾಡುವಂತಿದೆ. GIGW 3.0, UX4G 2.0, DBIM ಮತ್ತು ಇಮೇಲ್ ನೀತಿ ಎಲ್ಲವೂ ಅಗತ್ಯ ಕಟ್ಟಡ ಕಲ್ಲುಗಳನ್ನು ಒದಗಿಸುತ್ತವೆ. ಕಾಣೆಯಾಗಿರುವುದು ಒಂದೇ: ಪ್ರತಿಯೊಂದು ಹಂತದ ಸರ್ಕಾರದಲ್ಲೂ ಅನುಸರಣೆಯನ್ನು ಕಡ್ಡಾಯಗೊಳಿಸುವ ರಾಜಕೀಯ ಇಚ್ಛಾಶಕ್ತಿ.

ಬ್ರಿಟನ್‌ನ ಗವರ್ನಮೆಂಟ್ ಡಿಜಿಟಲ್ ಸರ್ವಿಸ್ ಒಂದು ಸಾಬೀತಾದ ಮಾದರಿಯಾಗಿದೆ. ಏಕೀಕೃತ ವಿನ್ಯಾಸ ವ್ಯವಸ್ಥೆ, ಕಡ್ಡಾಯ ಸೇವಾ ಮಾನದಂಡಗಳು, ಪ್ರತಿ ನೌಕರನಿಗೂ ವೈಯಕ್ತಿಕ .gov.uk ಇಮೇಲ್ ಹಾಗೂ ಅವುಗಳನ್ನು ಜಾರಿಗೊಳಿಸುವ ಕೇಂದ್ರ ಪ್ರಾಧಿಕಾರ-ಇವೆಲ್ಲವೂ ಬ್ರಿಟನ್‌ನಲ್ಲಿ ನಾಗರಿಕರು ಸರ್ಕಾರದೊಂದಿಗೆ ಸಂವಹನ ನಡೆಸುವ ರೀತಿಯನ್ನು ಬದಲಿಸಿವೆ. ಭಾರತವೂ ಅದನ್ನೇ ಸಾಧಿಸಬಹುದು.

ಒಂದು ರಾಷ್ಟ್ರ, ಒಂದೇ ಡಿಜಿಟಲ್ ಗುರುತು. ಇದು ಡಿಜಿಟಲ್ ಇಂಡಿಯಾದ ಮುಂದಿನ ಹಂತದ ಮಂತ್ರವಾಗಬೇಕು. ತಂತ್ರಜ್ಞಾನ ಇದೆ. ವಿನ್ಯಾಸ ವ್ಯವಸ್ಥೆಗಳು ಇವೆ. ಮಾರ್ಗಸೂಚಿಗಳು ಇವೆ. ಬೇಕಾಗಿರುವುದು ಅವುಗಳನ್ನು ಒಟ್ಟುಗೂಡಿಸಿ ಕಡ್ಡಾಯಗೊಳಿಸುವ ನಾಯಕತ್ವ.

(ಸಾರ್ವಜನಿಕ ನೀತಿ ವಿಶ್ಲೇಷಕರು, ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ಸಂಶೋಧಕರು)

Dailyhunt
Disclaimer: This content has not been generated, created or edited by Dailyhunt. Publisher: Prajavani