Dailyhunt Logo
  • Light mode
    Follow system
    Dark mode
    • Play Story
    • App Story
ಭಾರತಕ್ಕೆ ಸುಲಭ ತುತ್ತಾದ ದಕ್ಷಿಣ ಆಫ್ರಿಕಾ

ಭಾರತಕ್ಕೆ ಸುಲಭ ತುತ್ತಾದ ದಕ್ಷಿಣ ಆಫ್ರಿಕಾ

ಮ್‌ಸ್ಟೆಲ್ವೀನ್ (ಪಿಟಿಐ): ಅಧಿಕಾರಯುತವಾಗಿ ಆಡಿದ ಭಾರತ ತಂಡ, ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಡಿ ಗುಂಪಿನ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ತಂಡವನ್ನು 6-1 ಗೋಲುಗಳಿಂದ ಸದೆಬಡಿಯಿತು. ಈ ಗೆಲುವಿನ ಮೂಲಕ ಮುಂದಿನ ಹಂತಕ್ಕೆ ಮುನ್ನಡೆಯುವ ಅವಕಾಶವನ್ನು ಉಜ್ವಲಗೊಳಿಸಿತು.

ಮಧ್ಯಂತರದ ವೇಳೆಗೆ ಭಾರತ 3-0 ಮುನ್ನಡೆ ಗಳಿಸಿತ್ತು. ಸುನೆಲಿತಾ ಟೊಪ್ಪೊ (11ನೇ ನಿಮಿಷ), ನವನೀತ್ ಕೌರ್ (17ನೇ), ಸುಶೀಲಾ ಚಾನು (25ನೇ), ದೀಪಿಕಾ (38ನೇ), ಲಾಲ್ರೆಮ್‌ಸಿಯಾಮಿ (44ನೇ) ಮತ್ತು ಸಾಕ್ಷಿ ರಾಣಾ (45ನೇ) ಅವರು ಗೋಲುಗಳನ್ನು ಗಳಿಸಿದರು.

ಹಣಕಾಸಿನ ಮುಗ್ಗಟ್ಟಿನಿಂದ ಕಂಗೆಟ್ಟಿದ್ದ ಕಾರಣ ದಕ್ಷಿಣ ಆಫ್ರಿಕಾ ತಂಡ ನೆರವಿಗಾಗಿ ಸಾಮಾಜಿಕ ಜಾಲತಾಣದ ಮೊರೆಹೋಗಿತ್ತು. ಸರ್ಕಾರ ನೆರವು ನೀಡಿದ್ದರಿಂದ ತಂಡಆಡಲು ಸಾಧ್ಯವಾಯಿತು. ಈ ತಂಡದ ಪರ ದ ವಾಲ್ ಕೇಲು 55ನೇ ನಿಮಿಷ ಏಕೈಕ ಗೋಲು ಗಳಿಸಿದರು.

ಈ ಗೆಲುವು ತಂಡದ ಭಾರತ ಕೋಚ್ ಸ್ಯೋರ್ಡ್ ಮರಿನ್ ಅವರಿಗೆ ತೃಪ್ತಿ ಮೂಡಿಸಿತು. ತಂಡದ 11 ಮಂದಿ ಇದೇ ಮೊದಲ ಬಾರಿ ವಿಶ್ವಕಪ್ ಆಡುತ್ತಿದ್ದಾರೆ.

ಡಿ ಗುಂಪಿನಲ್ಲಿ ಭಾರತ ಮತ್ತು ಚೀನಾ ತಂಡಗಳು ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿವೆ. ಇಂಗ್ಲೆಂಡ್ ಒಂದು ಗೆದ್ದು, ಒಂದು ಸೋತು ಮೂರು ಪಾಯಿಂಟ್ಸ್ ಗಳಿಸಿದೆ. ದಕ್ಷಿಣ ಆಫ್ರಿಕಾ ಎರಡನೇ ಸೋಲಿನಿಂದ ಹೊರಬಿದ್ದಿದೆ.

ಈ ದೊಡ್ಡ ಅಂತರದ ಗೆಲುವು ಭಾರತ ತಂಡದ ಗೋಲು ವ್ಯತ್ಯಾಸವನ್ನು ಬಹುಮಟ್ಟಿಗೆ ಸುಧಾರಿಸಿತು. ಇದು ಗುಂಪು ಹಂತದ ಸ್ಥಾನ ನಿರ್ಧಾರದಲ್ಲಿ ನಿರ್ಣಾಯಕವಾಗಲೂ ಬಹುದು.

ಸಲಿಮಾ ಟೇಟೆ ನೇತೃತ್ವದ ತಂಡವು ಗುರುವಾರ ನಡೆಯುವ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಗೆದ್ದರೆ ಎರಡನೇ ಹಂತಕ್ಕೆ ಸುಲಭವಾಗಿ ಮುನ್ನಡೆಯಬಹುದಾಗಿದೆ.

ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಮಾಡಿ ನಾಲ್ಕನೇ ನಿಮಿಷವೇ ಪೆನಾಲ್ಟಿ ಕಾರ್ನರ್ ಪಡೆದಿತ್ತು. ಆದರೆ ಗೋಲ್‌ಕೀಪರ್ ಬಿಚೂ ದೇವಿ ಅವಕಾಶವನ್ನು ಸುಲಭವಾಗಿ ತಡೆದರು. ಆದರೆ ಶೀಘ್ರ ಲಯ ಕಂಡುಕೊಂಡ ಭಾರತ ಪ್ರತಿ ದಾಳಿ ನಡೆಸಿ 11ನೇ ನಿಮಿಷ ಗೋಲು ಖಾತೆ ತೆರೆಯಿತು. ನಂತರ ಪಂದ್ಯದ ಬಹುತೇಕ ಅವಧಿಯಲ್ಲಿ ಭಾರತವೇ ಹಿಡಿತ ಸಾಧಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-51-729322249

Dailyhunt
Disclaimer: This content has not been generated, created or edited by Dailyhunt. Publisher: Prajavani