Wednesday, 16 Sep, 5.27 pm ಪ್ರಜಾವಾಣಿ

ಜಿಲ್ಲೆ
ಭಾರಿ ಮಳೆ; ಹೈರಾಣಾದ ತೆಂಗಳಿ- ಡೊಣ್ಣೂರ ಜನ

ಕಾಳಗಿ: ತಾಲ್ಲೂಕಿನಾದ್ಯಂತ ಕೆಲ ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಅದರಲ್ಲೂ ಮಂಗಳವಾರ ಹೇರೂರ ಬೆಣ್ಣೆತೊರಾ ಜಲಾಶಯದ ನೀರು ಹೊರಬಿಟ್ಟಿದ್ದರಿಂದ ಈ ನೀರು ಹರಿಯುವ ಹಳ್ಳದ ದಂಡೆಯ ಊರುಗಳಲ್ಲಂತೂ ನೀರು ನುಗ್ಗಿ ಜನರ ಬದುಕು ದುಸ್ತರಗೊಂಡಿದೆ.

ಬುಧವಾರ ಡೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ದಿಗ್ಬಂಧನ ಹಾಕಿದೆ. ಅದಲ್ಲದೇ ಕಣಸೂರ, ಮಲಘಾಣ, ಕಲಗುರ್ತಿ ಮತ್ತು ತೆಂಗಳಿ ಹಳ್ಳದ ಸೇತುವೆ ಮೇಲಿಂದ ನೀರು ಹರಿದು ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತಗೊಳಿಸಿದೆ. ಹಳ್ಳದ ದಂಡೆಯ ಹೊಲಗಳಿಗೆ ನುಗ್ಗಿದ ನೀರು ತೊಗರಿ, ಹೆಸರು, ಉದ್ದು ಹೀಗೆ ಮುಂಗಾರು ಬೆಳೆಗಳನ್ನು ನಾಶಗೊಳಿಸಿದ್ದು, ಹೊಲ ಕೊಚ್ಚಿಹೋಗಿ ಅನ್ನದಾತರಿಗೆ ದಿಕ್ಕುತೋಚದಂತೆ ಮಾಡಿದೆ.

ತೆಂಗಳಿ ಮತ್ತು ಕಲಗುರ್ತಿ ಊರೊಳಗೆ ಪ್ರವೇಶಿಸಿದ ನೀರು ದೇವಸ್ಥಾನ, ದರ್ಗಾ, ಹೋಟೆಲ್ ಮತ್ತು ಮನೆಗಳಿಗೆ ಧಕ್ಕೆ ಉಂಟುಮಾಡಿದೆ. ಹಾಗೆ ರಾಜಾಪುರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಬಿಸಿ ಮುಟ್ಟಿಸಿದೆ.

ಕಲಬುರ್ಗಿ ಸಂಪರ್ಕದ ಕಣಸೂರ-ಗೋಟೂರ ಮತ್ತು ವಚ್ಚಾ- ಕೋರವಾರ ಮುಖ್ಯರಸ್ತೆ ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಂಗಳವಾರ ರಾತ್ರಿಯಿಂದ ಚಿತ್ತಾಪುರ ಸಂಪರ್ಕ ಕಡಿತಗೊಂಡಿದೆ.

ಜನರ ಬದುಕಿಗೆ ಆಸರೆ ಕಲ್ಪಿಸಲು ಹುಳಗೇರಾ ಮತ್ತು ನಿಪ್ಪಾಣಿ ಗ್ರಾಮದಲ್ಲಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3 ಆರೈಕೆ ಕೇಂದ್ರಗಳಲ್ಲಿ ಒಟ್ಟು 770 ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿದ್ದು ಅಲ್ಲಿನ ಸ್ಥಿತಿಗತಿ ನೋಡಿಕೊಳ್ಳುತ್ತಿದ್ದಾರೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top