Dailyhunt Logo
  • Light mode
    Follow system
    Dark mode
    • Play Story
    • App Story
ಭಾವಿ ಪತಿಯನ್ನು ಕಣಿವೆಗೆ ನೂಕಿ ಕೊಲೆ: ಭಾವಿಪತ್ನಿ, ಆಕೆಯ ಪ್ರಿಯಕರನ ಬಂಧನ

ಭಾವಿ ಪತಿಯನ್ನು ಕಣಿವೆಗೆ ನೂಕಿ ಕೊಲೆ: ಭಾವಿಪತ್ನಿ, ಆಕೆಯ ಪ್ರಿಯಕರನ ಬಂಧನ

ಪುಣೆ : ಮದುವೆ ಇಷ್ಟವಿಲ್ಲ ಎಂಬ ಕಾರಣಕ್ಕೆ ತನ್ನ ಭಾವಿ ಪತಿಯನ್ನು ಚಾರಣದ ನೆಪದಲ್ಲಿ ಐತಿಹಾಸಿಕ ಲೋಹಾಗಢ ಕೋಟೆಗೆ ಕರೆದೊಯ್ದ ಭಾವಿ ಪತ್ನಿ 400 ಅಡಿ ಆಳದ ಕಂದಕಕ್ಕೆ ನೂಕಿ ಕೊಲೆ ಮಾಡಿದ್ದಾಳೆ.

ಯುವತಿಯ ಪ್ರಿಯಕರನೂ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದರ ನಿರ್ದೇಶಕರಾಗಿದ್ದ ಕೇತನ್‌ ವಿಶಾಲ್‌ ಅಗರವಾಲ್‌ ಸಾವಿನ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಭಾವಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವುದನ್ನು ಪತ್ತೆಮಾಡಿದ್ದಾರೆ.

ಇಬ್ಬರನ್ನೂ ಮಂಗಳವಾರ ಬಂಧಿಸಲಾಗಿದೆ.

ಕೊಲೆಯಾದ ಕೇತನ್‌ ವಿಶಾಲ್‌ ಅಗರವಾಲ್‌ ಅವರನ್ನು ವಿವಾಹ ಆಗಬೇಕಿದ್ದ ಸಿಯಾ ಗೋಯಲ್‌ ಹಾಗೂ ಆಕೆಯ ಪ್ರಿಯಕರ ಚೇತನ್‌ ಬಾಬುಲಾಲ್‌ ಚೌಧರಿ (22) ಬಂಧಿತರು.

'ಆರೋಪಿಗಳು ಕೇತನ್‌ ಅವರನ್ನು ಜೂನ್‌ 18ರಂದು ಪುಣೆಯ ಲೋಹಾಗಢ ಕೋಟೆಯಿಂದ ಆಳವಾದ ಕಣಿವೆಯಲ್ಲಿ ನೂಕಿ ಕೊಲೆ ಮಾಡಿದ್ದರು. ನಂತರ, ಕೇತನ್‌ ಅವರು ಆಕಸ್ಮಿಕವಾಗಿ ಕಣಿವೆಗೆ ಬಿದ್ದು ಸಾವನ್ನಪ್ಪಿದ್ದಾಗಿ ಬಿಂಬಿಸಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ.

26 ವರ್ಷದ ಕೇತನ್ ಅವರು ಪುಣೆ ಜಿಲ್ಲೆಯ ಗಹುಂಜೆ ನಿವಾಸಿಯಾಗಿದ್ದರು. ತಮ್ಮ ಕುಟುಂಬದ ಒಡೆತನದ ರಿಯಲ್‌ ಎಸ್ಟೇಟ್‌ ಸಂಸ್ಥೆಯ ನಿರ್ದೇಶಕರಾಗಿದ್ದರು.

ಕೇತನ್ ಹಾಗೂ ಸಿಯಾ ಗೋಯಲ್‌ ಅವರ ಮದುವೆ ನಿಶ್ಚಯವಾಗಿತ್ತು. ಅವರ ಮದುವೆಗಾಗಿ ಎರಡೂ ಕುಟುಂಬಗಳು ಭರ್ಜರಿ ಸಿದ್ಧತೆ ಮಾಡಿದ್ದವು. ನವೆಂಬರ್‌ನಲ್ಲಿ ಮದುವೆ ನಿಗದಿಯಾಗಿತ್ತು.

ಮದುವೆಗಾಗಿ ರಾಜಸ್ಥಾನದ ಉದಯಪುರದ ಅರಮನೆಯನ್ನು ₹17 ಕೋಟಿಗೆ ಕಾಯ್ದಿರಿಸಿದ್ದ ಕುಟುಂಬಗಳು, ಅತಿಥಿಗಳನ್ನು ಕರೆದೊಯ್ಯುವುದಕ್ಕಾಗಿ ಎರಡು ಖಾಸಗಿ ವಿಮಾನಗಳನ್ನು ಕಾಯ್ದಿರಿಸಿದ್ದವು ಎಂದು ಮೂಲಗಳು ಹೇಳಿವೆ.

ಸಿಯಾ ಅವರ ಜನ್ಮದಿನಾಚರಣೆಗಾಗಿ ಜೂನ್‌ 18ರಂದು ಕೇತನ್ ಲೋಹಾಗಢ ಕೋಟೆಗೆ ಚಾರಣ ಹೋಗಿದ್ದರು.

ಸಿಯಾ ಹೇಳಿದ್ದು: 'ಕೇತನ್ ಅವರು ಸಿಯಾ ಹಾಗೂ ತಮ್ಮ ಸ್ನೇಹಿತರೊಂದಿಗೆ ಲೋಹಾಗಢ ಕೋಟೆಗೆ ಚಾರಣಕ್ಕೆ ತೆರಳಿದ್ದರು. ಈ ವೇಳೆ, ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು. ಜೋರಾಗಿ ಗಾಳಿ ಬೀಸಿದ್ದರಿಂದ ಅವರು ಅಂದಾಜು 400 ಅಡಿ ಆಳದ ಕಣಿವೆಗೆ ಬಿದ್ದು ಸಾವನ್ನಪ್ಪಿದರು' ಎಂದು ಪೊಲೀಸರು ಈ ಮೊದಲು ಹೇಳಿದ್ದರು.

'ಲೋಹಾಗಢ ಕೋಟೆಗೆ ಹೋಗಿದ್ದಾಗ ಫೋಟೊ ತೆಗೆಸಿಕೊಳ್ಳುತ್ತಿದ್ದೆವು. ಈ ವೇಳೆ ಆಯ ತಪ್ಪಿ ಕಣಿವೆಗೆ ಬಿದ್ದು, ಕೇತನ್‌ ಮೃತಪಟ್ಟರು' ಎಂದು ಸಿಯಾ ಅವರು ಲೋಣಾವಳಾ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ನಂತರ, ಮೂರು ಗಂಟೆ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಸಿಬ್ಬಂದಿ, ಕೇತನ್‌ ಮೃತದೇಹ ಪತ್ತೆ ಹಚ್ಚಿದ್ದರು.

'ಮದುವೆ ಇಷ್ಟವಿಲ್ಲದ್ದಕ್ಕೆ ಕೊಲೆ': 'ಈ ಘಟನೆಗೆ ಸಂಬಂಧಿಸಿದ ಸನ್ನಿವೇಶಗಳನ್ನು ಅವಲೋಕಿಸಿದಾಗ, ಕೇತನ್ ಅವರ ಸಾವು ಸಂಶಯಾಸ್ಪದವೆನಿಸಿತು. ಈ ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿದ ಬಳಿಕ ಇದು ಕೊಲೆಗೆ ಮಾಡಿದ ಸಂಚು ಎಂಬುದು ಗೊತ್ತಾಯಿತು' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಪುಣೆ ಗ್ರಾಮೀಣ) ಸಂದೀಪ್‌ ಸಿಂಗ್‌ ಗಿಲ್ ಹೇಳಿದರು.

'ತನಿಖಾ ತಂಡಗಳು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದವು. ಹಣಕಾಸು ವ್ಯವಹಾರ ಹಾಗೂ ವೈಯಕ್ತಿಕ ದ್ವೇಷ ಸೇರಿದಂತೆ ಇತರ ಕಾರಣಗಳಿಂದ ಕೊಲೆ ನಡೆದಿರಬಹುದೇ ಎಂದು ವಿಚಾರಣೆ ನಡೆಸಲಾಯಿತು. ಆದರೆ, ಪುಣೆಯ ಕೊಂಢ್ವಾ ನಿವಾಸಿ ಚೇತನ್ ಬಾಬುಲಾಲ್‌ ಚೌಧರಿ ಮತ್ತು ಸಿಯಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾದ ವಿಷಯ ತನಿಖೆಯಿಂದ ಗೊತ್ತಾಯಿತು' ಎಂದು ಹೇಳಿದರು.

'ಕೇತನ್ ಜೊತೆ ವಿವಾಹವಾಗುವುದು ಸಿಯಾಗೆ ಇಷ್ಟವಿರಲಿಲ್ಲ. ತನ್ನ ಮತ್ತು ಚೇತನ್ ಚೌಧರಿ ಸಂಬಂಧಕ್ಕೆ ಕೇತನ್‌ ಅಡ್ಡಿ ಎಂದು ಭಾವಿಸಿದ್ದರು. ಈ ಕಾರಣಕ್ಕೆ ಕೇತನ್‌ ಅವರನ್ನು ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಯಿತು' ಎಂದು ಗಿಲ್‌ ವಿವರಿಸಿದರು.

ವಿಶಾಲ್ ಅಗರವಾಲ್‌, ಕೇತನ್‌ ತಂದೆಪೊಲೀಸರು ನನ್ನ ಮಗನ ಮೃತದೇಹವನ್ನು ಮನೆಗೆ ತಂದಾಗ ಸಿಯಾಳಿಂದ ಯಾವುದೇ ಪ್ರತಿಕ್ರಿಯೆ ಇದ್ದಿಲ್ಲ. ಅವಳ ಮುಖದಲ್ಲಿ ದುಃಖವೂ ಕಾಣಲಿಲ್ಲ ಲೋಹಾಗಢ ಕೋಟೆಗೆ ಐತಿಹಾಸಿಕ ಮಹತ್ವ ಇದೆ. ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್‌ ಅವರೊಂದಿಗೆ ಈ ಕೋಟೆ ನಂಟು ಹೊಂದಿದೆ. ಯುನೆಸ್ಕೊ ಘೋಷಿಸಿರುವ ಮಹಾರಾಷ್ಟ್ರದ 12 'ವಿಶ್ವ ಪಾರಂಪರಿಕ ತಾಣ'ಗಳಲ್ಲಿ ಈ ಕೋಟೆಯೂ ಸೇರಿದೆ.ಐತಿಹಾಸಿಕ ಮಹತ್ವದ ಕೋಟೆ
Dailyhunt
Disclaimer: This content has not been generated, created or edited by Dailyhunt. Publisher: Prajavani