ದಾವಣಗೆರೆ: 'ಕೃಷಿ ಚಟುವಟಿಕೆಗೆ ಭದ್ರಾ ಜಲಾಶಯದ ನೀರು ಪಡೆಯಲು ಅವಶ್ಯವೆನಿಸಿದರೆ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸಲೂ ಸಜ್ಜಾಗಬೇಕು' ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ಇಲ್ಲಿನ ರೇಣುಕ ಮಂದಿರದಲ್ಲಿ 'ಭಾರತೀಯ ರೈತ ಒಕ್ಕೂಟ'ದ ನೇತೃತ್ವದಲ್ಲಿ ಸೋಮವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
'ನೀರು ಹಂಚಿಕೆ ಕುರಿತು ರೈತರು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಜಲ ಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರೈತರ ಬೇಡಿಕೆಗಳನ್ನು ಮನವರಿಕೆ ಮಾಡಿಕೊಟ್ಟರೆ ಅನುಕೂಲವಾಗಲಿದೆ' ಎಂದು ಹೇಳಿದರು.
'ಹಲವು ವರ್ಷಗಳಿಂದ ನೀರಿನ ಸಮಸ್ಯೆ ಮುಂದುವರಿದಿದೆ. ಸರ್ಕಾರಗಳು ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಹೇಳುತ್ತಿವೆ. ಆದರೆ, ಶಾಸ್ವತ ಪರಿಹಾರ ಇದುವರೆಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ' ಎಂದರು.
'ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ' ಎಂದು ಒಕ್ಕೂಟದ ಅಧ್ಯಕ್ಷ ಲಿಂಗರಾಜ್ ಶಾಮನೂರು ಹೇಳಿದರು.
'ಸದ್ಯ ಜಲಾಶಯದಲ್ಲಿ ಅಂದಾಜು 50 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಮಳೆಗಾಲದ ಬೆಳೆಗಳಿಗೆ 25 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದರೂ, ಕುಡಿಯುವ ಉದ್ದೇಶಕ್ಕೆ ಸಾಕಷ್ಟು ನೀರು ಉಳಿಯಲಿದೆ. ಮುಂದಿನ 2 ತಿಂಗಳು ಒಳಹರಿವು ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.
'ಜಲಾಶಯದ ನೀರಿನ ಹಂಚಿಕೆ ಮತ್ತು ನಿರ್ವಹಣೆಯ ನಿರ್ಧಾರವನ್ನು ಅಧಿಕಾರಿಗಳು, ರೈತರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯ ಮೂಲಕ ಕೈಗೊಳ್ಳಬೇಕು' ಎಂದು ರೈತ ಮುಖಂಡ ಹೊನ್ನೂರು ಮುನಿಯಪ್ಪ ಒತ್ತಾಯಿಸಿದರು.
ರೈತ ಮುಖಂಡರಾದ ಬೆಳವನೂರು ನಾಗೇಶ್ವರರಾವ್, ಡಿ.ಬಿ. ಶಂಕರ್ ಕಕ್ಕರಗೊಳ್ಳ, ಶಿವಾಜಿ ಪಾಟೀಲ್, ರಾಘವೇಂದ್ರ ನಾಯ್ಕ, ಕುಂದುವಾಡ ಮಲ್ಲೇಶ್, ಬಸವರಾಜ್, ಮಾವಿನಕೆರೆ ಮಲ್ಲಣ್ಣ ಮತ್ತಿತರರು ಮಾತನಾಡಿದರು.
ಷಣ್ಮುಖಯ್ಯ, ಎ.ಎಂ. ಮಂಜುನಾಥ, ಕುಂದುವಾಡದ ಹನುಮಂತಪ್ಪ, ಪುನೀತ್, ಎ.ಆರ್. ಶಿವಪ್ಪ, ಪಟೇಲ್ ಲಿಂಗಪ್ಪ ಕಾಡಜ್ಜಿ, ಬಸವರಾಜ್ ಡಿ.ಎನ್. ಮತ್ತಿತರರಿದ್ದರು.
'ಕೂಡಲೇ ನೀರು ಬಿಡುಗಡೆ ಮಾಡಲಿ'
ಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿರುವ ಕಾರಣ ಸರ್ಕಾರ ಕೂಡಲೇ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂಬ ಒಕ್ಕೊರಲಿನ ಒತ್ತಾಯ ರೈತ ಒಕ್ಕೂಟದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಳಿಬಂತು.
'ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು' ಎಂದು ರೈತರು ಆಗ್ರಹಿಸಿದರು.
ಸಭೆಯ ಬಳಿಕ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಬೇಕು ಎಂದು ರೈತರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260804-43-1339823305

