Dailyhunt Logo
  • Light mode
    Follow system
    Dark mode
    • Play Story
    • App Story
ಭದ್ರಾ, ಲಿಂಗನಮಕ್ಕಿ, ಕಬಿನಿ, ಹೇಮಾವತಿ ಜಲಾಶಯದ ನೀರಿನ ಒಳಹರಿವು ಹೆಚ್ಚಳ

ಭದ್ರಾ, ಲಿಂಗನಮಕ್ಕಿ, ಕಬಿನಿ, ಹೇಮಾವತಿ ಜಲಾಶಯದ ನೀರಿನ ಒಳಹರಿವು ಹೆಚ್ಚಳ

ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ನಿಧಾನವಾಗಿ ಚುರುಕುಗೊಳ್ಳುತ್ತಿರುವ ನಡುವೆಯೇ ಕರ್ನಾಟಕದ ಹಲವು ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಭಾಗದಲ್ಲಿ ಎರಡು ಮೂರು ದಿನದಿಂದ ಮಳೆ ಹೆಚ್ಚಿದೆ.

ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಮಳೆ ಪ್ರಮಾಣದಲ್ಲಿ ಏರಿಕೆ ಕಂಡು ಜಲಾಶಯಗಳಿಗೂ ನೀರು ಹರಿದು ಬರುತ್ತಿದೆ.

ಭದ್ರಾ ಜಲಾಶಯ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಈ ಹಂಗಾಮಿನಲ್ಲಿ ಮೊದಲ ಬಾರಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಹೆಚ್ಚಿದ್ದು, ಈ ತಿಂಗಳು ಇನ್ನೂ ಹೆಚ್ಚಿನ ನೀರನ್ನು ನಿರೀಕ್ಷಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಕ್ಕೆ ಗುರುವಾರ ಬೆಳಿಗ್ಗೆ ಹೊತ್ತಿಗೆ 3369 ಕ್ಯುಸೆಕ್‌ ನೀರು ಒಳಹರಿವು ಇದೆ. ಹೊರ ಹರಿವಿನ ಪ್ರಮಾಣ 208 ಕ್ಯುಸೆಕ್‌ ಮಾತ್ರ ಇದೆ.

ಜಲಾಶಯದಲ್ಲಿ ಸದ್ಯ 2109.41 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 2136 ಅಡಿ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ 2158 ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಈವರೆಗೂ ಶೇ 35ರಷ್ಟು ನೀರು ಸಂಗ್ರಹವಾಗಿದೆ.

ಜಲಾಶಯದಲ್ಲಿ ಸದ್ಯ 25.16 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 45.74 ಟಿಎಂಸಿ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ 71.54 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ಲಿಂಗನಮಕ್ಕಿ ಜಲಾಶಯ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ ಒಂದು ವಾರದಿಂದಲೂ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಲೇ ಇದೆ. ಈಗ ಅದು 10 ಸಾವಿರ ಕ್ಯುಸೆಕ್‌ ಅನ್ನು ದಾಟಿದೆ. ಈಗ 10574 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2816 ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ.

ಜಲಾಶಯದ ನೀರಿನ ಮಟ್ಟವು 1746.95 ಅಡಿಯಷ್ಟಿದೆ. ಕಳೆದ ವರ್ಷ ಇದೇ ದಿನ 1786.05 ಅಡಿ ನೀರು ಸಂಗ್ರಹವಿತ್ತು. ಜಲಾಶಯದಲ್ಲಿ 1819.12 ಅಡಿ ನೀರು ಸಂಗ್ರಹಿಸಬಹುದು.

ಈವರೆಗೂ ಜಲಾಶಯದಲ್ಲಿ 15.83 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಶೇ 10ರಷ್ಟು ಮಾತ್ರ ನೀರಿದೆ. ಜಲಾಶಯದಲ್ಲಿ ಕಳೆದ ವರ್ಷ 65.46 ಟಿಎಂಸಿ ನೀರು ಸಂಗ್ರಹವಿತ್ತು. ಇಲ್ಲಿ 151.75 ಟಿಎಂಸಿ ನೀರು ಸಂಗ್ರಹಿಸಬಹುದು.

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಸದ್ಯ 1890 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 500 ಕ್ಯುಸೆಕ್‌ ಇದೆ. ಕೇರಳ ಭಾಗದಲ್ಲಿ ಸಾಮಾನ್ಯ ಮಳೆಯಾಗುತ್ತಿರುವ ಕಾರಣಕ್ಕೆ ಜಲಾಶಯಕ್ಕೆ ಅಲ್ಪ ಪ್ರಮಾಣದ ನೀರು ಬರುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 7496 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. 5720 ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿತ್ತು.

ಜಲಾಶಯದಲ್ಲಿ ಸದ್ಯ 2254.16 ಅಡಿ ನೀರು ಲಭ್ಯವಿದೆ. ಕಳೆದ ವರ್ಷ 2277.46 ಅಡಿ ನೀರಿತ್ತು. ಗರಿಷ್ಠ ಮಟ್ಟು 2284 ಅಡಿ.

ಜಲಾಶಯದಲ್ಲಿ ಈಗ 5.30 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಜಲಾಶಯದಲ್ಲಿ ಜಳೆದ ವರ್ಷ 15. 62 ಟಿಎಂಸಿ ನೀರಿತ್ತು. ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹಿಸುವ ಅವಕಾಶವಿದೆ. ಈಗ ಶೇ 27ರಷ್ಟು ನೀರು ಲಭ್ಯವಿದೆ.

ಕಬಿನಿ ಜಲಾಶಯಕ್ಕೆ ಕಳೆದ ತಿಂಗಳು ಒಳ ಹರಿವು ಕಡಿಮೆಯಿತ್ತು. ಈಗ ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯೇ. ಕೇರಳ ಭಾಗದಲ್ಲಿ ಮಳೆ ಚುರುಕುಗೊಂಡರೆ ಜಲಾಶಯಕ್ಕೆ ನೀರು ಹೆಚ್ಚುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹೇಮಾವತಿ ಜಲಾಶಯ

ಹಾಸನ ಜಿಲ್ಲೆ ಹೇಮಾವತಿ ಜಲಾಶಯಕ್ಕೂ ಗುರುವಾರ ಒಳಹರಿವು ಹೆಚ್ಚಾಗಿದೆ. ಸದ್ಯ 1012 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ 300 ಕ್ಯುಸೆಕ್ ಇದೆ.

ಜಲಾಶಯದಲ್ಲಿ 2891.63 ಅಡಿ ನೀರಿದೆ. ಕಳೆದ ವರ್ಷ 2917.47 ಅಡಿ ನೀರಿತ್ತು. ಇಲ್ಲಿ 2922 ಅಡಿ ನೀರು ಸಂಗ್ರಹಿಸಬಹುದು. ಈವರೆಗೂ ಜಲಾಶಯದಲ್ಲಿ 14.97 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ದಿನ 32.84 ಟಿಎಂಸಿ ನೀರು ಇತ್ತು. ಇಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಬಹುದು.

ಉತ್ತರ ಕನ್ನಡ ಜಿಲ್ಲೆಯ ಸೂಪಾ ಆಣೆಕಟ್ಟೆಗೆ ಸದ್ಯ 1987 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವು 2817 ಕ್ಯುಸೆಕ್‌ ಇದೆ. ಜಲಾಶಯದಲ್ಲಿ 1723.28 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ 1765.31 ಅಡಿ ನೀರಿತ್ತು. ಗರಿಷ್ಠ ಮಟ್ಟ 1850.48 ಅಡಿ. ಜಲಾಶಯದಲ್ಲಿ 29.38 ಟಿಎಂಸಿ ನೀರಿದೆ. ಹಿಂದಿನ ವರ್ಷದಲ್ಲಿ 57. 25 ಟಿಎಂಸಿ ನೀರಿತ್ತು. ಇಲ್ಲಿ 145.33 ಟಿಎಂಸಿ ನೀರು ಸಂಗ್ರಹಿಸಬಹುದು.

ವಾರಾಹಿ ಜಲಾಶಯ

ಉಡುಪಿ ಜಿಲ್ಲೆಯ ವಾರಾಹಿ ಜಲಾಶಯಕ್ಕೆ 1621 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನೀರು ಹೊರ ಹರಿಸುತ್ತಿಲ್ಲ. ಜಲಾಶಯದಲ್ಲಿ ಶೇ 16ರಷ್ಟು ಮಾತ್ರ ನೀರು ಸಂಗ್ರಹವಿದೆ. ಈಗ 4.92 ಟಿಎಂಸಿ ನೀರು ಲಭ್ಯವಿದ್ದು ಕಳೆದ ವರ್ಷ ಇದೇ 13.78 ಟಿಎಂಸಿ ನೀರಿತ್ತು. ಇಲ್ಲಿ 31.13 ಟಿಎಂಸಿ ನೀರು ಸಂಗ್ರಹಿಸಬಹುದು.

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಈಗ 633 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 773 ಕ್ಯುಸೆಕ್‌ ಹೊರ ಹರಿಸಲಾಗುತ್ತಿದದ. ಜಲಾಶಯದಲ್ಲಿ 11.13 ಟಿಎಂಸಿನೊಂದಿಗೆ ಶೇ 23ರಷ್ಟು ಮಾತ್ರ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟವು 80.78 ಅಡಿ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani