Dailyhunt Logo
  • Light mode
    Follow system
    Dark mode
    • Play Story
    • App Story
ಭರಚುಕ್ಕಿ ಜಲಪಾತಕ್ಕೆ ಮರುಕಳಿಸಿದ ದೃಶ್ಯ ವೈಭವ; ಪ್ರವಾಸಿಗರ ದಂಡು

ಭರಚುಕ್ಕಿ ಜಲಪಾತಕ್ಕೆ ಮರುಕಳಿಸಿದ ದೃಶ್ಯ ವೈಭವ; ಪ್ರವಾಸಿಗರ ದಂಡು

ಕೊಳ್ಳೇಗಾಲ: ಕೇರಳಂನ ವಯನಾಡಿ ನಲ್ಲಿ ಭರಪೂರ ಮಳೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಹೊರಹರಿವು ಹೆಚ್ಚಾಗಿರುವುದರಿಂದ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದೆ.

ಕಬಿನಿ‌ ಜಲಾಶಯದಿಂದ ₹25,000 ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹೊರಬಿಟ್ಟಿರುವುದರಿಂದ ಭರಚುಕ್ಕಿ ಜಲಪಾತದಲ್ಲಿ ಜಲವೈಭವ ಸೃಷ್ಟಿಯಾಗಿದೆ.‌ ಧುಮ್ಮಿಕ್ಕುವ ಜಲಪಾತವನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ವಾರದ ಹಿಂದಷ್ಟೆ ತೀವ್ರ ಮಳೆಕೊರತೆಯಿಂದ ಭರಚುಕ್ಕಿ ಸಂಪೂರ್ಣವಾಗಿ ಬತ್ತಿಹೋಗಿತ್ತು. ಕೊರಕಲು ಬಂಡೆಗಳು ನೀರಿನ ಬರವನ್ನು ಸಾರುತ್ತಿದ್ದವು. ಪ್ರಸ್ತುತ ದೃಶ್ಯ ಸಂಪೂರ್ಣ ಭಿನ್ನವಾಗಿದ್ದು ಜಲಪಾತ ಭೋರ್ಗೆರೆಯುತ್ತಿದೆ, ರಮಣೀಯ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಮೂರು ದಿನಗಳ ಹಿಂದಷ್ಟೆ ಕಬಿನಿ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು ಕಾವೇರಿ ನದಿ ಕೂಡ ಮೈದುಂಬಿ ಹರಿಯುತ್ತಿದೆ. ಕಾನನದ ನಡುವೆ ಹಾಲ್ನೊರೆಯಂತೆ ನುಗ್ಗುತ್ತಿರುವ ಕಾವೇರಿಯ ಸೊಬಗನ್ನು ನೋಡುವುದೇ ಸೊಗಸಾಗಿದೆ.

ಪ್ರತಿ ವರ್ಷ ಜೂನ್ ಹಾಗೂ ಜುಲೈನಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗುವುದರಿಂದ ಕಾವೇರಿ ಮೈದುಂಬಿಕೊಂಡು ಭರಚುಕ್ಕಿ ಜಲಪಾತ ಬೋರ್ಗೆರೆಯುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಜಲಪಾತದಲ್ಲಿ ನೀರಿನ ಕೊರತೆ ಎದುರಾಗಿರಲಿಲ್ಲ. ಆದರೆ, ಈ ವರ್ಷ ಮಾತ್ರ ಮಳೆ ಕೊರತೆಯಿಂದ ಜಲಪಾತ ಬರಿದಾಗಿತ್ತು, ಮಳೆಗಾಲದ ಎರಡು ತಿಂಗಳು ಜೀವ ಕಳೆ ಕಳೆದುಕೊಂಡಿತ್ತು. ಪ್ರವಾಸಿಗರು ಕೂಡ ಜಲಪಾತದ ದೃಶ್ಯವೈಭವ ಕಾಣಸಿಗದೆ ನಿರಾಶೆಯಿಂದ ಮರಳುತ್ತಿದ್ದರು.

ಕೇರಳ ವಯನಾಡಿನಲ್ಲಿ ಸುರಿದ ಬಿರುಸು ಮಳೆ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ನೀಡಿದೆ. ಭರಚುಕ್ಕಿ ವೀಕ್ಷಣೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ವ್ಯಾಪಾರಿ ಮೊಗದಲ್ಲಿ ಮಂದಹಾಸ: ಭರಚುಕ್ಕಿ ಭಣಗುಡುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಜಲಪಾತದ ಬಳಿ ವ್ಯಾಪಾರ ಬಂದ್ ಆಗಿತ್ತು. ಸಣ್ಣಪುಟ್ಟ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಅನ್ಯ ಉದ್ಯೋಗ ಮಾಡುವ ತಯಾರಿಯಲ್ಲಿದ್ದರು. ಜಲಪಾತ ಮೈದುಂಬಿಕೊಳ್ಳುತ್ತಿದ್ದಂತೆ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಭರಚುಕ್ಕಿ ಸಮೀಪ ಹಿಂದಿನಂತೆ ವ್ಯಾಪಾರ ಶುರು ಮಾಡಿಕೊಂಡಿದ್ದಾರೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಕೂಡ ಖರೀದಿಯಲ್ಲಿ ತೊಡಗಿದ್ದು ಉತ್ತಮ ವ್ಯಾಪಾರ ನಡೆಯುತ್ತಿದೆ. ಬೇಸಿಗೆ ಹಾಗೂ ಚಳಿಗಾಲದ ಏಳೆಂಟು ತಿಂಗಳು ವ್ಯಾಪಾರವಿಲ್ಲದೆ ಕಷ್ಟವಾಗಿತ್ತು. ಈಗ ವ್ಯಾಪಾರ ಹಿಂದಿನಂತಿದೆ. ಕಬ್ಬಿನಹಾಲು,ತಂಪು ಪಾನೀಯ, ಎಳನೀರು, ಪೈನಾಪಲ್, ಪಪ್ಪಾಯ, ಕಲ್ಲಂಗಡಿ, ನಿಪ್ಪಟ್ಟು ಮಸಾಲೆ, ಸೌತೆಕಾಯಿ ಮಸಾಲೆ, ಚುರುಮುರಿ, ಬಜ್ಜಿ-ಬೋಂಡ, ಫಿಶ್ ಪ್ರೈ, ಚಹಾ ಸೇರಿದಂತೆ ಇತರೆ ತಿನಿಸುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ದರ್ಗಾ ದಾರಿಯುದ್ದಕ್ಕೂ ಮಾಂಸಾಹಾರಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿವೆ.

ನಾಲ್ಕೈದು ತಿಂಗಳಿಂದ ವ್ಯಾಪಾರ ಇಲ್ಲದೆ ಮನೆಯಲ್ಲಿದ್ದೆವು, ಜಲಪಾತಕ್ಕೆ ನೀರು ಬಂದ ಕೂಡಲೇ ವ್ಯಾಪಾರ ಶುರುಮಾಡಿದ್ದು ಚೆನ್ನಾಗಿ ನಡೆಯುತ್ತಿದೆ ಎಂದು ಚುರುಮುರಿ ವ್ಯಾಪಾರಿ ವಸಂತ್ ತಿಳಿಸಿದರು.

ಕಾವೇರಿ ನದಿಗೆ ನೀರು: ರೈತರಿಗೆ ಹರ್ಷ

ಕಾವೇರಿ ನದಿಗೆ ನೀರು ಬಿಟ್ಟಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಮಳೆ ಕೊರತೆಯಿಂದ ಹೆಚ್ಚಿನ ರೈತರು ಬೆಳೆ ಬೆಳೆದಿಲ್ಲ, ಕೆಲವರು ಧೈರ್ಯ ಮಾಡಿ ಅಳಕಿನಿಂದಲೇ ಬಿತ್ತನೆ ಮಾಡಿದ್ದರು. ಇದೀಗ ನದಿ ಮೈದುಂಬಿಕೊಂಡಿರುವುದರಿಂದ ನಿಟ್ಟುಸಿರುಬಿಡುವಂತಾಗಿದೆ ಎನ್ನುತ್ತಾರೆ ರೈತ ನಂಜುಂಡಪ್ಪ.

ಸೋಮಶೇಖರ್, ಪ್ರವಾಸಿಗ, ದಾವಣಗೆರೆಪ್ರತಿ ವರ್ಷ ಮಳೆಗಾಲದಲ್ಲಿ ಕೊಡಗು, ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಪಾತದಲ್ಲಿ ನೀರು ಕಡಿಮೆ ಇದೆ, ಆದರೂ ನಿರಾಶೆಯಾಗಿಲ್ಲ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-37-1305039019

Dailyhunt
Disclaimer: This content has not been generated, created or edited by Dailyhunt. Publisher: Prajavani