Wednesday, 27 Jan, 6.55 pm ಪ್ರಜಾವಾಣಿ

ಜಿಲ್ಲೆ
ಭೂಗತ ವಿದ್ಯುತ್‌ ಕೇಬಲ್ ಅಳವಡಿಕೆಗೆ ಕ್ರಮ: ಯತ್ನಾಳ

ವಿಜಯಪುರ: ನಗರದಲ್ಲಿ ₹265 ಕೋಟಿ ಮೊತ್ತದಲ್ಲಿ ಭೂಗತ ಕೇಬಲ್ ಅಳವಡಿಸುವ ಮೂಲಕ ವಿದ್ಯುತ್‌ ಸಂಪರ್ಕ ನೀಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಅಟಲ್‌ ಬಿಹಾರಿ ವಾಜಪೇಯಿ ರಸ್ತೆಯಿಂದ ಎ.ಪಿ.ಎಂ.ಸಿ ಮೂಲಕ ಹೊಸ ಕಿರಾಣ ಬಜಾರ್‌ವರೆಗೆ ನಗರ ಸಾರಿಗೆ ಬಸ್‍ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ 24X7 ಕುಡಿಯುವ ನೀರಿನ ವ್ಯವಸ್ಥೆ, ಡ್ರೈನೇಜ್, ಸಿ.ಸಿ. ರಸ್ತೆ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಮನೆಗಳನ್ನು ಕಟ್ಟಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ವಂತಿಗೆ ಹಣ ತುಂಬುವುದರಲ್ಲಿ ಕಡಿಮೆ ಮಾಡಿರುವಂತೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೂ ವಂತಿಗೆ ಹಣ ಕಡಿಮೆ ಮಾಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ನಗರದ ಅಲ್ಲಲ್ಲಿ ತರಕಾರಿ ಮಾರುಕಟ್ಟೆಗಳಿದ್ದು ರೈತರು ತಾವು ಬೆಳೆದ ತರಕಾರಿಗಳನ್ನು ಮಾರಲು ಬರುತ್ತಾರೆ ಅವರೊಂದಿಗೆ ಚೌಕಾಸಿ ಮಾಡದೇ ಹೂವು, ಹಣ್ಣು, ತರಕಾರಿ ಖರೀದಿಸಿ, ಇದರಿಂದಾಗಿ ಬಡ ವ್ಯಾಪಾರಸ್ಥ ಮಹಿಳೆಯರು, ಹೊಲದಲ್ಲಿ ತಾವು ಬೆಳೆದ ತರಕಾರಿ ಮಾರಲು ಬರುವಂತಹ ರೈತರಿಗೆ ಅನುಕೂಲವಾಗಲಿದೆ ಮತ್ತು ಪ್ರತಿ ಕಾಲೊನಿಗಳಲ್ಲಿ ತರಕಾರಿ ಮಾರುಕಟ್ಟೆಗಳಿರುವುದರಿಂದ ನಗರವಾಸಿಗಳಿಗೂ ಅನುಕೂಲವಾಗಲಿದೆ ಎಂದರು.

ಇಬ್ರಾಹಿಂ ರೋಜಾದ ಮುಂದೆ ನಿರ್ಮಿಸಿದ ಸಿ.ಸಿ.ರಸ್ತೆಗೆ ಚಾಲನೆ ನೀಡಿ, ಈ ರಸ್ತೆಯ ಎರಡೂ ಬದಿ ಫೇವರ್ಸ್ ಅಳವಡಿಸಿ ಫುಟ್‌ಪಾತ್ ನಿರ್ಮಾಣ ಮಾಡುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹1.25 ಕೋಟಿ ಮೊತ್ತದ ಬಾಬು ಜಗಜೀವನರಾಂ(ಸೆಟಲೈಟ್ ಬಸ್ ನಿಲ್ದಾಣ ಹತ್ತಿರ) ಜಂಕ್ಷನ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಿದ್ಧೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಮುಖಂಡರಾದ ವಿಕ್ರಮ್ ಗಾಯಕವಾಡ, ಲಕ್ಷ್ಮಣ ಜಾಧವ್, ಅಡಿವೆಪ್ಪ ಸಾಲಗಲ್ಲ, ಗವಿಸಿದ್ದ ಅವಟಿ, ಚಂದ್ರು ಚೌಧರಿ, ಸಂತೋಷ ಪಾಟೀಲ, ಪ್ರಕಾಶ ಚವ್ಹಾಣ, ರಾಜಶೇಖರ ಭಜಂತ್ರಿ ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top