Dailyhunt Logo
  • Light mode
    Follow system
    Dark mode
    • Play Story
    • App Story
ಭೂಮಿ ನೀಡುವ ಅವಧಿ ವಿಸ್ತರಿಸದಂತೆ ರೈತರಿಂದ ಆಗ್ರಹ

ಭೂಮಿ ನೀಡುವ ಅವಧಿ ವಿಸ್ತರಿಸದಂತೆ ರೈತರಿಂದ ಆಗ್ರಹ

ದೇವನಹಳ್ಳಿ: ಚನ್ನರಾಯಪಟ್ಟಣ ಹೋಬಳಿ ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಸರ್ಕಾರ ನಿಗದಿಪಡಿಸಿದ್ದ ಕಾಲಾವಕಾಶ ಅ. 31ಕ್ಕೆ ಮುಕ್ತಾಯಗೊಂಡಿದ್ದು, ಯಾವುದೇ ಕಾರಣಕ್ಕೂ ಮತ್ತೆ ಅವಧಿ ವಿಸ್ತರಿಸಬಾರದು ಎಂದು ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಮಂಗಳವಾರ ನಡೆದ ರೈತರ ಸಭೆಯಲ್ಲಿ ಭೂಸ್ವಾಧೀನದ ಮುಂದಿನ ಬೆಳವಣಿಗೆ, ರೈತರ ಸಹಕಾರ ಸಂಘ ಸ್ಥಾಪನೆ, ರೈತಭವನ ನಿರ್ಮಾಣ ಹಾಗೂ ರಾಜ್ಯದ ವಿವಿಧ ರೈತ ಹೋರಾಟಗಳಿಗೆ ಬೆಂಬಲ ನೀಡುವ ಕುರಿತು ಚರ್ಚಿಸಿ ಹಲವು ನಿರ್ಣಯ ಕೈಗೊಳ್ಳಲಾಯಿತು.

'ರೈತರು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿರುವ ಜಮೀನುಗಳನ್ನು ಉಳಿಸಿಕೊಳ್ಳಲು ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದಾರೆ. ಭೂಮಿ ನೀಡಲು ಸರ್ಕಾರ ಕಲ್ಪಿಸಿದ್ದ ಅವಧಿ ಮುಕ್ತಾಯಗೊಂಡಿದ್ದು, ಅದನ್ನು ಮತ್ತೆ ವಿಸ್ತರಿಸುವುದರಿಂದ ರೈತರಲ್ಲಿ ಗೊಂದಲ ಉಂಟಾಗಲಿದೆ. ಸರ್ಕಾರ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು' ಎಂದು ರೈತ ಮುಖಂಡ ಕಾರಹಳ್ಳಿ ಶ್ರೀನಿವಾಸ್‌ ಒತ್ತಾಯಿಸಿದರು.

'ಕೃಷಿಭೂಮಿ ರೈತರ ಜೀವನಾಧಾರಆಗಿದೆ. ಭೂಮಿ ಕಳೆದುಕೊಂಡರೆ ಕುಟುಂಬಗಳ ಮುಂದಿನ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ರೈತರ ಅಭಿಪ್ರಾಯಕ್ಕೆ ಬೆಲೆ ನೀಡದೆ ಯಾವುದೇ ತೀರ್ಮಾನ ಕೈಗೊಳ್ಳಬಾರದು. ನ.5ರಂದು ಎಲ್ಲ ರೈತರು ಒಗ್ಗೂಡಿ ಕೆಐಎಡಿಬಿ ಕಚೇರಿಗೆ ತೆರಳಿ ಅವಧಿ ವಿಸ್ತರಿಸದಂತೆ ಲಿಖಿತ ಮನವಿ ಸಲ್ಲಿಸಲಾಗುವುದು' ಎಂದು ತಿಳಿಸಿದರು.

'ಭೂಸ್ವಾಧೀನ ವಿರೋಧಿ ಹೋರಾಟದ ಸಂದರ್ಭದಲ್ಲಿ ರೈತರ ನಡುವೆ ಬೆಳೆದಿರುವ ಒಗ್ಗಟ್ಟನ್ನು ಮುಂದುವರಿಸಬೇಕಿದೆ. ಹೋರಾಟಕ್ಕೆ ಮಾತ್ರ ಸೀಮಿತವಾಗದೆ ರೈತರ ಆರ್ಥಿಕ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಈ ಉದ್ದೇಶದಿಂದ ಹೋರಾಟ ಸಮಿತಿ ನೇತೃತ್ವದಲ್ಲಿ ಸಹಕಾರ ಸಂಘ ಸ್ಥಾಪಿಸುವ ಪ್ರಕ್ರಿಯೆ ಚುರುಕುಗೊಳಿಸಲು ನಿರ್ಧರಿಸಲಾಗಿದೆ' ಎಂದು ರೈತ ಮುಖಂಡ ಚೀಮಾನಹಳ್ಳಿ ರಮೇಶ್ ಹೇಳಿದರು.

'ರೈತರ ಸಮಸ್ಯೆಗಳ ಕುರಿತು ಚರ್ಚಿಸಲು, ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸಲು, ಸಂಘಟನಾತ್ಮಕ ಚಟುವಟಿಕೆಗಳಿಗೆ ಅನುಕೂಲಆಗುವಂತೆ ರೈತಭವನ ನಿರ್ಮಾಣ ಅಗತ್ಯವಾಗಿದೆ. ಈ ತಿಂಗಳೊಳಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಸೂಕ್ತ ಜಾಗ ಗುರುತಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.

ಹೋರಾಟಗಾರ್ತಿ ಪ್ರಭಾ ಬೆಳಮಂಗಳ ಮಾತನಾಡಿ, 'ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸುವಂತೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯಬೇಕು ಎಂಬುದು ಎಲ್ಲ ರೈತರ ಸಾಮಾನ್ಯ ಬೇಡಿಕೆಯಾಗಿದೆ' ಎಂದರು.

'ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಬೆಂಬಲಿಸಿ ನ.5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ರೈತರ ಸಮಸ್ಯೆಗಳ ವಿಚಾರದಲ್ಲಿ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು' ಎಂದು ತಿಳಿಸಿದರು.

ರೈತ ಮುಖಂಡ ಮೋಹನ್ ಮಾತನಾಡಿ, 'ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ರೈತರು ತೋರಿರುವ ಒಗ್ಗಟ್ಟನ್ನು ಮುಂದುವರಿಸಬೇಕು. ಸಹಕಾರ ಸಂಘ ಸ್ಥಾಪನೆ, ರೈತಭವನ ನಿರ್ಮಾಣಕ್ಕೆ ಸಂಬಂಧಿಸಿದ ಮುಂದಿನ ರೂಪುರೇಷೆಗಳನ್ನು ಅಂತಿಮಗೊಳಿಸಲು ಇದೇ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ರೈತರ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಲ್ಲರೊಂದಿಗೆ ಚರ್ಚಿಸಿ ಕೈಗೊಳ್ಳಬೇಕು' ಎಂದರು.

'ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ವಿವಿಧ ಜನಪರ ಸಂಘಟನೆಗಳು ನೀಡಿರುವ ಹೋರಾಟದ ಕರೆಗೆ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ' ಎಂದು ಹೇಳಿದರು.

ಕೃಷಿಭೂಮಿ ರಕ್ಷಣೆ, ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ವಿಚಾರದಲ್ಲಿ ಹೋರಾಟ ಸಮಿತಿಯ ಚಟುವಟಿಕೆಗಳನ್ನು ಮುಂದುವರಿಸಲು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ವಿವಿಧ ಗ್ರಾಮಗಳ ರೈತರು ಹಾಗೂ ಹೋರಾಟ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

261104-15-2082948376

Dailyhunt
Disclaimer: This content has not been generated, created or edited by Dailyhunt. Publisher: Prajavani