ಎಪಿ
ಕೇಪ್ ಕೆನವೆರಾಲ್ (ಎಪಿ): ಗಾಮಾ ಕಿರಣಗಳ ಅಧ್ಯಯನಕ್ಕಾಗಿ 22 ವರ್ಷಗಳ ಹಿಂದೆ ನಾಸಾ ಬಾಹ್ಯಾಕಾಶಕ್ಕೆ ಕಳುಹಿಸಿದ್ದ 'ನೀಲ್ ಗೆಹ್ರೇಲ್ ಸ್ವಿಫ್ಟ್ ದೂರದರ್ಶಕ'ವು ತನ್ನ ಯಶಸ್ವಿ ಕಾರ್ಯಚಟುವಟಿಕೆಯನ್ನು ಅಂತ್ಯ ಗೊಳಿಸಿದೆ. ಈ ದೂರದರ್ಶಕವನ್ನು ಉಳಿಸಿಕೊಳ್ಳುವ ಎಲ್ಲ ಯತ್ನಗಳೂ ಸೋತಿದ್ದರಿಂದ, ಬುಧವಾರದ ಹೊತ್ತಿಗೆ ಇದು ಭೂಮಿಗೆ ಬೀಳಲಿದೆ.
ದೂರದರ್ಶಕವು ಭೂಮಿಗೆ ಬೀಳುವ ಪ್ರಕ್ರಿಯೆ ಕುರಿತು ನಾಸಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, 'ಬುಧವಾರ ಮಧ್ಯಾಹ್ನ 2 ಗಂಟೆಯ (11 ತಾಸಿನ ವ್ಯತ್ಯಾಸವಾಗಬಹುದು) ಸುಮಾರಿಗೆ ದೂರದರ್ಶಕವು ಭೂಮಿಗೆ ಬೀಳಲಿದೆ' ಎಂದು ತಿಳಿಸಿದೆ.
'ಒಂದೂವರೆ ಟನ್ ತೂಕದ ಈ ದೂರದರ್ಶಕದ ಬಹುತೇಕ ಭಾಗಗಳು ಭೂಮಿಯ ವಾತಾವರಣ ಪ್ರವೇಶದ ಸಂದರ್ಭದಲ್ಲೇ ಉರಿದು ಹೋಗಲಿವೆ. ಆದರೆ ಟಂಗಸ್ಟನ್ನಿಂದ ತಯಾರಿಸಲಾದ ಬಿಡಿಭಾಗಗಳು ಮತ್ತು ಕನ್ನಡಿಯ ತುಣುಕುಗಳು ವಾತಾವರಣವನ್ನು ಪ್ರವೇಶಿಸಲಿವೆ' ಎಂದು ನಾಸಾ ಅಂದಾಜಿಸಿದೆ.
'ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ದೇಶಗಳು, ಕೇಂದ್ರ ಅಥವಾ ದಕ್ಷಿಣ ಅಮೆರಿಕದ ಭಾಗಗಳಲ್ಲಿ ದೂರದರ್ಶಕದ ತುಣುಕುಗಳು ಬೀಳಬಹುದು ಎಂದು ಅಮೆರಿಕ 'ದಿ ಸ್ಪೇಸ್ ಫೋರ್ಸ್' ಸಂಸ್ಥೆ ಅಂದಾಜಿಸಿದೆ.
'ನಾಸಾ ಹೇಳಿರುವ ಅಕ್ಷಾಂಶಗಳನ್ನು ಭಾರತದ ಸಂದರ್ಭದಲ್ಲಿ ನೋಡಿದರೆ, ದೂರದರ್ಶಕದ ತುಣುಕುಗಳು ಬೀಳುವ ವ್ಯಾಪ್ತಿಯಲ್ಲಿ ದಾಮನ್ನಿಂದ ಒಡಿಶಾದ ಕಠಕ್ವರಗೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳು ಬರುತ್ತವೆ' ಎಂದು ಹೇಳಲಾಗಿದೆ.
2,000ಕ್ಕೂ ಹೆಚ್ಚು ಗಾಮಾ ಕಿರಣ ಸ್ಫೋಟ, 1,400ಕ್ಕೂ ಹೆಚ್ಚು ಸೂಪರ್ನೋವಾ ಸ್ಫೋಟ, ಹಲವು ನಕ್ಷತ್ರಗಳು ಕಪ್ಪುಕುಳಿಯಾಗುವುದನ್ನು ಈ ದೂರದರ್ಶಕ ದಾಖಲಿಸಿದೆ. ಈ ದತ್ತಾಂಶಗಳ ಆಧಾರದಲ್ಲಿ 7,000ಕ್ಕೂ ಹೆಚ್ಚು ಸಂಶೋಧನಾ ಲೇಖನ ಪ್ರಕಟಿಸಲಾಗಿದೆ
* ಸೂರ್ಯನಲ್ಲಿನ ಚಟುವಟಿಕೆಗಳು ಕಳೆದ ಕೆಲವು ವರ್ಷಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ದೂರದರ್ಶಕದ ಕಾರ್ಯಚಟುವಟಿಕೆಯು ಅತಿ ವೇಗವಾಗಿ ಕಡಿಮೆಯಾಯಿತು
* ದೂರದರ್ಶಕವನ್ನು ರಕ್ಷಿಸಲು 'ಲಿಂಕ್' ಹೆಸರಿಗೆ ಮೂರು ಕೈಗಳಿರುವ ರೊಬೊಟ್ ಅನ್ನು ಜುಲೈನಲ್ಲಿ ಕಳುಹಿಸಲಾಗಿತ್ತು. ಈ ರೊಬೊಟ್ ದೂರದರ್ಶಕದಿಂದ 12 ಅಥವಾ 15 ಕಿ.ಮೀ ದೂರದಲ್ಲಿಯೇ ನಿಂತುಕೊಂಡಿತು. ಸೆಪ್ಟೆಂಬರ್ನಲ್ಲಿ ಭೂಮಿಗೆ ಮರಳಿತು
* ಇದೇ ಅಕ್ಟೋಬರ್ 20ಕ್ಕೆ ದೂರದರ್ಶಕವು ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿತು. 2004ರ ನವೆಂಬರ್ 20ರಂದು ಈ ದೂರದರ್ಶಕವನ್ನು ನಭಕ್ಕೆ ಹಾರಿಸಲಾಗಿತ್ತು
ದೂರದರ್ಶಕದ ಹೆಗ್ಗಳಿಕೆ
* 2,000ಕ್ಕೂ ಹೆಚ್ಚು ಗಾಮಾ ಕಿರಣ ಸ್ಫೋಟ, 1,400ಕ್ಕೂ ಹೆಚ್ಚು ಸೂಪರ್ನೋವಾ ಸ್ಫೋಟ, ಹಲವು ನಕ್ಷತ್ರಗಳು ಕಪ್ಪುಕುಳಿಯಾಗುವುದನ್ನು ಈ ದೂರದರ್ಶಕ ದಾಖಲಿಸಿದೆ. ಈ ದೂರದರ್ಶಕದ ದತ್ತಾಂಶಗಳ ಆಧಾರದಲ್ಲಿ 7,000ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಗಿದೆ
* ಇದು 15 ಲಕ್ಷ ಫೋಟೊಗಳನ್ನು ಕಳುಹಿಸಿದೆ. ಗಾಮಾ ಕಿರಣಗಳ ಸ್ಫೋಟಗಳನ್ನು ಅತಿ ವೇಗವಾಗಿ ಸೆರೆ ಹಿಡಿದಿರುವುದು ಇದರ ಹೆಗ್ಗಳಿಕೆ
* 600 ಎಚ್ಡಿ ಸಿನಿಮಾಗಳನ್ನು ಸಂಗ್ರಹಿಸಿ ಇಡಬಹುದಾದಷ್ಟು ದತ್ತಾಂಶವನ್ನು ಈ ದೂರದರ್ಶಕ ಭೂಮಿಗೆ ಕಳುಹಿಸಿದೆ
261104-51-2110512201

