Saturday, 23 Jan, 8.26 pm ಪ್ರಜಾವಾಣಿ

ಜಿಲ್ಲೆ
ಬೀದರ್‌ ದಕ್ಷಿಣದಲ್ಲಿ ₹100 ಕೋಟಿಯ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವೆ: ಅಶೋಕ ಖೇಣಿ

ಬೀದರ್‌: 'ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನರಿಗೆ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ 500 ಎಕರೆ ಪ್ರದೇಶದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ' ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.

'ಮೊದಲ ಹಂತದಲ್ಲಿ 500 ಟನ್‌ ಸಾಮರ್ಥ್ಯದ ಆಹಾರ ಸಂಸ್ಕೃರಣಾ ಘಟಕ ಆರಂಭಿಸಲಾಗುವುದು. ಅದರಲ್ಲಿ ಯಶ ಕಂಡು ಬಂದರೆ ಕ್ಷೇತ್ರದ ಮೂರು ಕಡೆ ವಿಸ್ತರಿಸಲಾಗುವುದು' ಎಂದು ನಗರದ ತಮ್ಮ ನಿವಾಸದಲ್ಲಿ ಶನಿವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

'ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಜಮೀನು ಬಳಸಿಕೊಂಡು ಅವರಿಗೆ ಲಾಭಾಂಶ ಕೊಡಲಾಗುವುದು. ಭೂ ಮಾಲೀಕರ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸಲಾಗುವುದು. ಉದ್ಯಮಿಗಳು, ರೈತರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಹೇಳಿದರು.

'ರಸ್ತೆ, ನೀರು, ವಿದ್ಯುತ್ ಈ ಮೂರು ಅಂಶಗಳನ್ನೊಳಗೊಂಡು ಮೂಲಸೌಕರ್ಯ ಇದ್ದರೆ ಉದ್ಯಮಗಳು ಬರುತ್ತವೆ. ನನ್ನ ಅವಧಿಯಲ್ಲಿ ಮೂಲಸೌಕರ್ಯ ಒದಗಿಸುವ ಕಾರ್ಯ ಮಾಡಿದ್ದೇನೆ. ಆದರೆ, ಅದನ್ನು ಮುಂದುವರಿಸಿಕೊಂಡು ಹೋಗುವ ಕನಿಷ್ಠ ಕಾರ್ಯವೂ ಆಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು.

'ಜವಳಿ ಉದ್ಯಮ ಆರಂಭಿಸಲು ಜಿಲ್ಲೆಯಲ್ಲಿ ವಿಪುಲ ಅವಕಾಶಗಳು ಇವೆ. ಜವಳಿ ಉದ್ಯಮ ಆರಂಭಿಸುವ ದಿಸೆಯಲ್ಲೂ ತನೆ ನಡೆಸಲಾಗುತ್ತಿದೆ. ಒಟ್ಟಾರೆ ಕ್ಷೇತ್ರದ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಬೀದರ್‌ ದಕ್ಷಿಣ ಕ್ಷೇತ್ರವನ್ನು ಕರ್ನಾಟಕದ ನಕ್ಷೆಯಲ್ಲಿ ನಕ್ಷತ್ರದಂತೆ ಮಿನುಗುವಂತೆ ಮಾಡುವುದು ನನ್ನ ಉದ್ದೇಶವಾಗಿದೆ' ಎಂದು ಹೇಳಿದರು.

'ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸೋತರೂ ಕ್ಷೇತ್ರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನನ್ನ ಅವಧಿಯಲ್ಲಿ ₹ 2,250 ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಪಡಿಸಿದ್ದೇನೆ. ಪ್ರಸ್ತುತ ಎಲ್ಲ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ' ಎಂದು ಬೇಸರ ವ್ಯಕ್ತಪಡಿಸಿದರು.

'ಎರಡು ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆ ಸಂಪೂರ್ಣ ಹಾಳಾಗಿದೆ. ನನ್ನ ಅವಧಿಯಲ್ಲಿನ ರಸ್ತೆಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿ ಇವೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ' ಎಂದು ಹೇಳಿದರು.

'ಬಂಡೆಪ್ಪ ಕಾಶೆಂಪೂರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಬಹಳ ಹತ್ತಿರವಾಗಿದ್ದರು. ಮನಸ್ಸು ಮಾಡಿದರೆ ಕ್ಷೇತ್ರದ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂಪಾಯಿ ತರಬಹುದಿತ್ತು. ಆದರೆ ಏನೂ ಮಾಡಲಿಲ್ಲ. ನಾನು ವಿರೋಧ ಪಕ್ಷದಲ್ಲಿದ್ದರೂ ಎಲ್ಲರ ಕೈಕಾಲು ಹಿಡಿದು ₹2,250 ಕೋಟಿ ತಂದಿದ್ದೆ' ಎಂದು ತಿಳಿಸಿದರು.

'ಹಿಂದೆ ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದರೂ ನಾನೇ ಹೆಚ್ಚಿನ ಅನುದಾನ ತಂದಿದ್ದೆ. ಕ್ಷೇತ್ರದ ಜನ ನನ್ನನ್ನು ಮರೆತಿಲ್ಲ. 28 ಗ್ರಾಮ ಪಂಚಾಯಿತಿಗಳ ಪೈಕಿ 23 ಗ್ರಾಮ ಪಂಚಾಯಿತಿಗಳಲ್ಲಿ ನನ್ನ ಬೆಂಬಲಿಗರೇ ಆಯ್ಕೆಯಾಗಿದ್ದಾರೆ. ಕೆಲವರು ಬೇರೆ ಪಕ್ಷದವರಿಂದ ಸನ್ಮಾನ ಮಾಡಿಸಿಕೊಂಡಿರಬಹುದು. ಆದರೆ, ಎಲ್ಲರೂ ನನ್ನೊಂದಿಗೆ ಇದ್ದಾರೆ' ಎಂದರು.

ಬೀದರ್‌ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ ಇದ್ದರು.

ಇನ್ನು ಕ್ಷೇತ್ರದಲ್ಲೇ ವಾಸ್ತವ್ಯ

ಬೀದರ್‌: 'ತಾಲ್ಲೂಕಿನ ರಂಜೋಳಖೇಣಿಯಲ್ಲಿ ನಮ್ಮ ಪೂರ್ವಜರು ಕಟ್ಟಿದ ದೊಡ್ಡದಾದ ಮನೆ ಇದೆ. ಸ್ಥಳೀಯ ವಾಸ್ತುಶಿಲ್ಪದ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಅದಕ್ಕೆ ಒಂದಿಷ್ಟು ಹೊಸ ಸ್ಪರ್ಶ ನೀಡಲಾಗುವುದು. ಇನ್ನು ಆ ಮನೆಯಲ್ಲಿಯೇ ಉಳಿದು ಸಾರ್ವಜನಿಕರಿಗೆ ಸೇವೆ ಕೊಡಲು ನಿರ್ಧರಿಸಿದ್ದೇನೆ' ಎಂದು ಮಾಜಿ ಶಾಸಕ ಅಶೋಕ ಖೇಣಿ ತಿಳಿಸಿದರು.

'ಪತ್ನಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಮಕ್ಕಳು ಅಮೆರಿಕದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಹಿಂದೆ ಜೆ.ಎಚ್‌.ಪಟೇಲ್‌ ಅವರು ಅಮೆರಿಕಕ್ಕೆ ಬಂದಾಗ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ. ನಾನು ಇನ್ನು ಬೀದರ್‌ ಜಿಲ್ಲೆಯಲ್ಲಿಯೇ ಉಳಿಯುವೆ' ಎಂದು ಹೇಳಿದರು.

'ಕೋವಿಡ್‌ ಕಾಣಿಸಿಕೊಂಡ ಅವಧಿಯಲ್ಲಿ ಅಮೆರಿಕದಲ್ಲಿ ಇದ್ದೆ. ಮೂರು ತಿಂಗಳು ವಿಮಾನ ಸಂಚಾರ ರದ್ದುಗೊಳಿಸಲಾಗಿತ್ತು. ಅಲ್ಲಿ ಇದ್ದರೂ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕ್ಷೇತ್ರದ ಮುಖಂಡರ ಸಂಪರ್ಕದಲ್ಲಿ ಇದ್ದೆ. ಜನರೊಂದಿಗೆ ಸಂಪರ್ಕ ಕಡಿದುಕೊಂಡಿಲ್ಲ' ಎಂದು ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top