Dailyhunt Logo
  • Light mode
    Follow system
    Dark mode
    • Play Story
    • App Story
ಬೀದರ್ | ದುರಸ್ತಿ ಬೇಡಿಕೆಗೆ ಸಿಗದ ಸ್ಪಂದನೆ, ಹದಗೆಟ್ಟ ರಸ್ತೆಗಳಿಂದ ಸವಾರರ ಯಾತನ

ಬೀದರ್ | ದುರಸ್ತಿ ಬೇಡಿಕೆಗೆ ಸಿಗದ ಸ್ಪಂದನೆ, ಹದಗೆಟ್ಟ ರಸ್ತೆಗಳಿಂದ ಸವಾರರ ಯಾತನ

ನವಾಡ: ಬೀದರ್ ತಾಲ್ಲೂಕಿನ ಅನೇಕ ರಸ್ತೆಗಳು ಹದಗೆಟ್ಟ ಕಾರಣ ಪ್ರಯಾಣಿಕರು ಯಾತನೆ ಅನುಭವಿಸುವಂತಾಗಿದೆ. ರಸ್ತೆಗಳು ಹಾಳಾಗಿ ವರ್ಷಗಳೇ ಕಳೆದರೂ ಆಡಳಿತ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಾಹನ ಸಂಚಾರ ಪ್ರಯಾಸಕರವಾಗಿದೆ.

ಅಲಿಯಂಬರ್- ಸಿದ್ಧಾಪುರ ಕ್ರಾಸ್ (ವಯಾ ಯರನಳ್ಳಿ), ರಾಜನಾಳ- ಅಲಿಯಂಬರ್, ಚಿಟ್ಟಾ- ಘೋಡಂಪಳ್ಳಿ, ಅಮಲಾಪುರ-ನಾಗೋರಾ, ಸಂಗೋಳಗಿ (ಎ) ತಾಂಡಾ-ಆಣದೂರುವಾಡಿ, ಸಂಗೋಳಗಿ(ಎ) ತಾಂಡಾ-ಶಮಶೇರನಗರ ತಾಂಡಾ, ಬಗದಲ್-ಕಾಶೆಂಪುರ (ಸಿ) ರಸ್ತೆಗಳು ದುರಸ್ತಿಗಾಗಿ ಕಾಯುತ್ತಿವೆ.

ಕೆಲ ರಸ್ತೆಗಳ ಮಧ್ಯೆ ತಗ್ಗು- ದಿನ್ನೆಗಳು ಸೃಷ್ಟಿಯಾಗಿದ್ದರೆ, ಇನ್ನು ಕೆಲ ರಸ್ತೆಗಳ ಡಾಂಬರು ಕಿತ್ತುಕೊಂಡು ಹೋಗಿದೆ. ವಾಹನ ಸವಾರರು ಅನ್ಯ ಮಾರ್ಗವಿಲ್ಲದೆ ಸಂಚರಿಸಬೇಕಾಗಿದೆ.

ರಾಜನಾಳದಿಂದ ಅಲಿಯಂಬರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಎರಡು ವರ್ಷದಿಂದ ಹಾಳಾಗಿದೆ. ಆದರೂ, ಸಂಬಂಧಪಟ್ಟವರು ದುರಸ್ತಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರುತ್ತಾರೆ ರಾಜನಾಳದ ಪ್ರಕಾಶ ಮಾಲೆ.

ಸಂಗೋಳಗಿ (ಎ) ತಾಂಡಾದಿಂದ ಆಣದೂರುವಾಡಿ ವರೆಗಿನ 3 ಕಿ.ಮೀ. ರಸ್ತೆ ತೀವ್ರವಾಗಿ ಹದಗೆಟ್ಟಿದೆ. ಅನೇಕ ವಾಹನ ಸವಾರರು ರಸ್ತೆ ಬದಿಯಲ್ಲಿನ ಕಾಲುದಾರಿಯಲ್ಲಿ ವಾಹನ ಓಡಿಸುತ್ತಿದ್ದಾರೆ ಎಂದು ಸಂಗೋಳಗಿ(ಎ) ತಾಂಡಾದ ನಿವಾಸಿ ಶಾಂತಾಬಾಯಿ ರಾಠೋಡ್ ಹೇಳುತ್ತಾರೆ.

ಕಾಶೆಂಪುರ(ಸಿ) ಗ್ರಾಮದಿಂದ ಬಗದಲ್ ವರೆಗಿನ 4 ಕಿ.ಮೀ. ಕಚ್ಚಾ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ. ಸಂಬಂಧಪಟ್ಟವರು ಸ್ಪಂದಿಸಿಲ್ಲ ಎಂದು ತಿಳಿಸುತ್ತಾರೆ ಬಗದಲ್ ಗ್ರಾಮದ ಮುಖಂಡ ಸಂತೋಷ್ ವಗ್ಗೆ.

ಅಮಲಾಪುರ-ನಾಗೋರಾ ನಡುವಿನ ಮುಖ್ಯ ರಸ್ತೆಯಲ್ಲಿನ ಡಾಂಬರು ಕಿತ್ತುಕೊಂಡು ಹೋಗಿದೆ. ಡಾಂಬರೀಕರಣ ಮಾಡುತ್ತಿಲ್ಲ ಎಂದು ಯಾಕತಪುರದ ಸುರೇಶ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

ಸಂಬಂಧಪಟ್ಟವರು ಗ್ರಾಮೀಣ ಸಂಪರ್ಕ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಬೀದರ್ ತಾಲ್ಲೂಕಿನಲ್ಲಿ 26.77 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯ ಬೀದರ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಕಾಂತ ಚಿಮಕೋಡೆ ತಿಳಿಸುತ್ತಾರೆ.

ಚಿಟ್ಟಾ-ಘೋಡಂಪಳ್ಳಿ ರಸ್ತೆ ಮಂಜೂರಾಗಿದೆ. ಸಂಗೋಳಗಿ(ಎ) ತಾಂಡಾ-ಆಣದೂರುವಾಡಿ ರಸ್ತೆ ಸುಧಾರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅಮಲಾಪುರ-ನಾಗೋರಾ ರಸ್ತೆ ಅಭಿವೃದ್ಧಿಗೆ ಸಿಆರ್‍ಎಫ್ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದಿಂದ ಮಂಜೂರಾತಿ ದೊರೆತಿದೆ ಎಂದು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-33-1366585108

Dailyhunt
Disclaimer: This content has not been generated, created or edited by Dailyhunt. Publisher: Prajavani