ಬೀದರ್: ಬಿಹಾರದಲ್ಲಿ ಬಂಧನಕ್ಕೆ ಒಳಗಾಗಿರುವ ದರೋಡೆ ಪ್ರಕರಣದ ಆರೋಪಿಗಳನ್ನು ಕೃತ್ಯ ಎಸಗಿದ ನಗರದ ಎಸ್‌ಬಿಐ ಮುಖ್ಯ ಶಾಖೆ ಎದುರಿನ ಎಟಿಎಂ ಇರುವ ಜಾಗಕ್ಕೆ ಕರೆತಂದ ಬೀದರ್ ಜಿಲ್ಲಾ ಪೊಲೀಸರು ಶುಕ್ರವಾರ ಅಲ್ಲಿ ಪಂಚನಾಮೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ನ್ಯಾಯಾಲಯದ ಮಧ್ಯ ಭಾಗದಲ್ಲಿರುವ ಸ್ಥಳಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ದರೋಡೆ ಪ್ರಕರಣದ ಆರೋಪಿಗಳಾದ ಅಮನ್ ಕುಮಾರ್ ಸಿಂಗ್ ಹಾಗೂ ಅಲೋಕ್ ಕುಮಾರ್ ಅವರನ್ನು ಕರೆತಂದರು.
ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಂದ ವಿವರಣೆ ಪಡೆದು, ದಾಖಲಿಸಿದರು. ಈ ವೇಳೆ ಮುಖ್ಯರಸ್ತೆಯಲ್ಲಿ ಕೆಲಸಮಯ ಸಾರ್ವಜನಿಕ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. ವಿಷಯ ತಿಳಿದು ಅಪಾರ ಸಂಖ್ಯೆಯ ಜನ ಸ್ಥಳದಲ್ಲಿ ನೆರೆದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸಮ್ಮುಖದಲ್ಲಿ ಪಂಚನಾಮೆ ನಡೆಯಿತು. ಎಸ್‌ಬಿಐ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಪಿಗಳಿಬ್ಬರೂ ದರೋಡೆ ನಡೆಸಿ, ಅವರು ಕ್ರಮಿಸಿದ ತಾಲ್ಲೂಕಿನ ಸುಲ್ತಾನಪುರ ಗ್ರಾಮ ಸೇರಿದಂತೆ ಇತರೆ ಕಡೆಗಳಿಗೆ ತೆರಳಿ ಪಂಚನಾಮೆ ಮಾಡಿದರು.
ಅಮನ್ ಕುಮಾರ್ ಸಿಂಗ್ ಮತ್ತು ಅಲೋಕ್ ಕುಮಾರ್ ಎಂಬುವರು 2025ರ ಜನವರಿ 16ರಂದು ಬೀದರ್‌ನ ಎಸ್‌ಬಿಐ ಎಟಿಎಂ ಎದುರು ದರೋಡೆ ನಡೆಸಿ, ₹83 ಲಕ್ಷ ನಗದು ಇರಿಸಿದ್ದ ಟ್ರಂಕ್ ಹೊತ್ತುಕೊಂಡು ಪರಾರಿಯಾಗಿದ್ದರು.
ಘಟನೆಯಲ್ಲಿ ಸಿಎಂಎಸ್ ಕಂಪನಿಯ ಒಬ್ಬ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೃತಪಟ್ಟು, ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದರು. ಈ ಇಬ್ಬರನ್ನೂ ಆಗಸ್ಟ್ 12ರಂದು ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬಂಧಿಸಿರುವ ಜಿಲ್ಲಾ ಪೊಲೀಸರು, ಆ. 13ರಂದು ಬೀದರ್‌ಗೆ ಕರೆತಂದಿದ್ದು, ಜಿಲ್ಲಾ ನ್ಯಾಯಾಲಯವು ಆ. 27ರ ವರೆಗೆ ಇವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

