ಬೀದರ್: ನಗರದ ಎಸ್‌ಬಿಐ ಎಟಿಎಂ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ದರೋಡೆಕೋರರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು 14 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ಬಿಹಾರದ ವೈಶಾಲಿ ಜಿಲ್ಲೆಯ ಅಮನ್‌ಕುಮಾರ್ ಸಿಂಗ್ ಮತ್ತು ಅಲೋಕ್ ಕುಮಾರ್ ಎಂಬುವರನ್ನು ಬುಧವಾರ (ಆ.
12) ಬಂಧಿಸಿದ್ದ ಬೀದರ್ ಜಿಲ್ಲಾ ಪೊಲೀಸರು, ಗುರುವಾರ (ಆ.13) ನಗರಕ್ಕೆ ಕರೆತಂದು, ರಾತ್ರಿ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯವು ಇಬ್ಬರನ್ನೂ ಆ. 27ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ ಎಂದು ಪೊಲೀಸ್ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
ಅಮನ್ ಕುಮಾರ್ ಸಿಂಗ್ ಮತ್ತು ಅಲೋಕ್ ಕುಮಾರ್ ಎಂಬುವರು 2025ರ ಜನವರಿ 16ರಂದು ಬೀದರ್‌ನ ಎಸ್‌ಬಿಐ ಎಟಿಎಂ ದರೋಡೆ ನಡೆಸಿ, ₹83 ಲಕ್ಷ ನಗದು ಇರಿಸಿದ್ದ ಟ್ರಂಕ್ ಹೊತ್ತುಕೊಂಡು ಪರಾರಿಯಾಗಿದ್ದರು. ಘಟನೆಯಲ್ಲಿ ಸಿಎಂಎಸ್ ಕಂಪನಿಯ ಒಬ್ಬ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೃತಪಟ್ಟು, ಇನ್ನೊಬ್ಬ ಸಿಬ್ಬಂದಿ ಗಾಯಗೊಂಡಿದ್ದರು.

