ಬೀದರ್: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.
ಸಂಜೆ ಏಳು ಗಂಟೆಗೆ ಶುರುವಾದ ಜಡಿ ಮಳೆ ರಾತ್ರಿ 10.45ರ ನಂತರವೂ ಮುಂದುವರೆದಿತ್ತು. ಸತತ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸಿದರು.
ವಾಹನ ಸಂಚಾರ ನಿಧಾನಗೊಂಡಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ದಿನವಿಡೀ ಬಿಟ್ಟು ಬಿಟ್ಟು ಮಳೆಯಾಯಿತು. ಸಂಜೆ ಏಳು ಗಂಟೆಗೆ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯುತ್ತಿದೆ. ಬೀದರ್ ಸೇರಿದಂತೆ ಔರಾದ್, ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿಯ ಕೆಲವೆಡೆ ಮಳೆಯಾಗಿದೆ.
ಮಳೆಗಾಲ ಆರಂಭಗೊಂಡ ನಂತರ ಇದೇ ಮೊದಲ ಬಾರಿಗೆ ಉತ್ತಮ ಮಳೆಯಾಗುತ್ತಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ಜೂನ್, ಜುಲೈನಲ್ಲಿ ಉತ್ತಮ ಮಳೆಯಾಗದ ಕಾರಣ ಬಿತ್ತನೆ ಮಾಡಿದ ರೈತರು ಚಿಂತಕ್ರಾಂತರಾಗಿದ್ದರು.

