ಬೀದರ್: 'ಸನಾತನ ಧರ್ಮದ ಮೌಲ್ಯ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕತೆಗೆ ಬ್ರಾಹ್ಮಣರ ಕೊಡುಗೆ ಬಹಳ ದೊಡ್ಡದಿದೆ' ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.
ಸನಾತನ ಕಲಾ ಮತ್ತು ಸಾಂಸ್ಕೃತಿಕ ವಿಪ್ರ ಸಂಗೀತ ಬಳಗದಿಂದ ಶನಿವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ 'ಸ್ವರ ವೈಭವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತನಾನ ಸಂಸ್ಕೃತಿ ಉಳಿಸಿ ಬೆಳೆಸುವುದು ಇಂದು ಅಗತ್ಯವಿದೆ. ಇದಕ್ಕೆ ಪೂರಕವಾಗಿ ಬ್ರಾಹ್ಮಣ ಸಮಾಜ ಸೇವೆ ಸಲ್ಲಿಸುತ್ತಿದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಬ್ರಾಹ್ಮಣ ಸಮಾಜ ಸದಾ ಶ್ರಮಿಸುತ್ತಿದೆ. ಯಾವಾಗಲೂ ರಾಷ್ಟ್ರಹಿತ, ಧರ್ಮಪರ, ಸಮಾಜ ಪರವಾಗಿ ಇನ್ನೊಬ್ಬರಿಗೆ ಒಳ್ಳೆಯ ಮಾರ್ಗದರ್ಶನ ಮಾಡುವ ಸಮಾಜ ಇದಾಗಿದೆ. ಇಲ್ಲಿ ಸನಾತನ ಹೆಸರಿನಲ್ಲಿ ವಿಪ್ರ ಸಂಗೀತ ಬಳಗ ಕಟ್ಟಿ ವಿವಿಧ ಚಟುವಟಿಕೆಗಳು ನಡೆಸುತ್ತಿರುವುದು ಶ್ಲಾಘನಾರ್ಹ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಮಹಾರಾಜ ಸಾನಿಧ್ಯ ವಹಿಸಿ, ಕಲಾವಿದರಿಗೆ ವಿಪ್ರ ಸಂಗೀತ ಬಳಗ ಸಾರ್ವಜನಿಕ ವೇದಿಕೆ ಒದಗಿಸಿರುವುದು ಉತ್ತಮ ಕೆಲಸ. ಎಲ್ಲರಲ್ಲೂ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ, ಹೊರಗೆ ತರುವ ಕೆಲಸ ದೊಡ್ಡದು ಎಂದು ಹೇಳಿದರು.
ವಿಪ್ರ ಸಂಗೀತ ಬಳಗದ ಅಧ್ಯಕ್ಷ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ, ಮನಸಲ್ಲೇ, ಮನೆಯಲ್ಲೇ ಹಾಡುವವರಿಗೆ ವೇದಿಕೆ ಕಲ್ಪಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಸುವ ಯೋಜನೆಗಳಿವೆ ಎಂದರು.
ಪತ್ರಕರ್ತ ಸದಾನಂದ ಜೋಶಿ, ದೇವಿದಾಸ ಜೋಶಿ, ಸುಧಾ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸರಸ್ವತಿ ಮಾತೆ, ಪರುಷರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ರಂಜಿಸಿದ ಗಾನಲಹರಿ...
ವಿಪ್ರ ಸಂಗೀತ ಬಳಗದ ಕಲಾವಿದರಾದ ಮಹೇಶ ಮೈಲೂರಕರ್, ಶಶಿಕಾಂತ ಜೋಶಿ, ರೇಖಾ ಮಕರಂದ ಕುಲಕರ್ಣಿ, ಗಿರೀಶ್ ಮೈಲೂರಕರ್, ರಮೇಶ ಕುಲಕರ್ಣಿ, ಸಂತೋಷಿ ಜೋಶಿ, ಕವಿತಾ ಉಪಾಧ್ಯೆ, ದೇವಿದಾಸ ಜೋಶಿ, ದಿಗಂಬರ ಜೋಶಿ, ವೀಣಾ ಜೋಶಿ, ಕಲ್ಯಾಣರಾವ್ ಕುಲಕರ್ಣಿ ಅವರು ಮೂರು ಗಂಟೆಗಳ ವರೆಗೆ ಕನ್ನಡ ಚಿತ್ರಗೀತೆಗಳ ಗಾನಲಹರಿ ಹರಿಸಿದರು.
260928-33-332908579

