ಹಿಂದಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ಸೀಸನ್ 20' ಶೀಘ್ರದಲ್ಲಿಯೇ ಆರಂಭವಾಗಲಿದೆ. ಇದಕ್ಕೂ ಮುನ್ನ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚುತ್ತಿದೆ. ಈ ನಡುವೆ ಅಮಿರ್ ಖಾನ್ ಅವರ ಕಿರಿಯ ಸಹೋದರ ಫೈಸಲ್ ಖಾನ್ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
'ವೆರೈಟಿ ಇಂಡಿಯಾ' ವರದಿಯ ಪ್ರಕಾರ, ಈಗಾಗಲೇ ಫೈಸಲ್ ಖಾನ್ ಅವರನ್ನು ಸಂಪರ್ಕಿಸಲಾಗಿದೆ. 2022ರಲ್ಲಿಯೂ ಅವರಿಗೆ ಬಿಗ್‌ಬಾಸ್ ಮನೆಗೆ ಪ್ರವೇಶಿಸುವ ಅವಕಾಶ ಬಂದಿತ್ತು. ಆದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದರು. ಮಾತ್ರವಲ್ಲದೆ, ಶೋನಲ್ಲಿ ಭಾಗವಹಿಸಲು ಆಸಕ್ತಿ ಇಲ್ಲ ಎಂಬುದಾಗಿ ಹೇಳಿಕೊಂಡಿದ್ದರು.
ಆದರೆ 'ಬಿಗ್‌ಬಾಸ್ ಸೀಸನ್ 20' ರಲ್ಲಿ ಫೈಸಲ್ ಖಾನ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ. ಈಗಾಗಲೇ ಹಲವು ಸ್ಪರ್ಧಿಗಳ ಹೆಸರುಗಳು ಕೇಳಿ ಬಂದಿದ್ದು, ಸೆಪ್ಟೆಂಬರ್ 6 ರಿಂದ 'ಬಿಗ್ ಬಾಸ್ ಸೀಸನ್ 20' ಆರಂಭವಾಗಲಿದೆ. ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡಲಿದ್ದಾರೆ.
2000 ನೇ ಇಸವಿಯಲ್ಲಿ ಬಿಡುಗಡೆಗೊಂಡಿದ್ದ 'ಕಲ್ಟ್-ಕ್ಲಾಸಿಕ್' ಸಿನಿಮಾ 'ಮೇಳ'ದಲ್ಲಿ ಅಮಿರ್ ಖಾನ್ ಜತೆಗೆ ಫೈಸಲ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 2021ರಲ್ಲಿ ಸ್ವತಃ ತಾವೇ ನಟಿಸಿ, ನಿರ್ದೇಶಿಸಿದ್ದ ಸೈಕಲಾಜಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ 'ಫ್ಯಾಕ್ಟರಿ' ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗುವ 20 ಸದಸ್ಯರ ಪೈಕಿ, ಫೈಸಲ್ ಖಾನ್ ಅವರು ವಿಭಿನ್ನ ವ್ಯಕ್ತಿತ್ವವುಳ್ಳವರಾಗಿರುತ್ತಾರೆ ಎಂಬ ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಆದರೆ, ಬಿಗ್‌ಬಾಸ್ ಈವರೆಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

