ನವದೆಹಲಿ : ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸಿರುವ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾನುವಾರ ನಡೆದ 'ನೀಟ್-ಯುಜಿ' ಮರುಪರೀಕ್ಷೆಗೆ ಹಾಜರಾದರು.
ದೇಶದಾದ್ಯಂತ 551 ನಗರಗಳು ಮತ್ತು ಪಟ್ಟಣಗಳ 5,440 ಕೇಂದ್ರಗಳು ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿ ಮರುಪರೀಕ್ಷೆಯು ಬಿಗಿ ಭದ್ರತೆಯಲ್ಲಿ ನಡೆಯಿತು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಮೇ 3ರಂದು ನಡೆಸಿದ್ದ 'ನೀಟ್-ಯುಜಿ' ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಕಾರಣದಿಂದ ರದ್ದುಪಡಿಸಲಾಗಿತ್ತು. ಮರುಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎನ್‌ಟಿಎ ಸಕಲ ಸಿದ್ಧತೆ ನಡೆಸಿತ್ತು.
ಪರೀಕ್ಷೆಯ ಸಮಯವನ್ನು ಮಧ್ಯಾಹ್ನ 2ರಿಂದ ಸಂಜೆ 5.15ವರೆಗೆ ನಿಗದಿಪಡಿಸಲಾಗಿತ್ತು. ಅಂಗವಿಕಲ ಅಭ್ಯರ್ಥಿಗಳಿಗೆ (ಪಿಡಬ್ಲ್ಯುಡಿ/ಪಿಡಬ್ಲ್ಯುಬಿಡಿ) ಸಂಜೆ 6.20ರವರೆಗೆ ಪರೀಕ್ಷೆ ಬರೆಯಲು ಅವಕಾಶವಿತ್ತು. ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಯಿತು. 22.79 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೆಹಲಿಯ ಓಖ್ಲಾದಲ್ಲಿರುವ ಎನ್‌ಟಿಎ ಪ್ರಧಾನ ಕಚೇರಿಗೆ ಭೇಟಿ ನೀಡಿ, ಮರುಪರೀಕ್ಷೆ ಸುಗಮವಾಗಿ ನಡೆಸಲು ಕೈಗೊಂಡಿದ್ದ ವ್ಯವಸ್ಥೆಗಳನ್ನು ಪರಿಶೀಲಿಸಿದರು. 'ಪರೀಕ್ಷೆಯನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ತೆಗೆದುಕೊಂಡ ಕ್ರಮಗಳನ್ನು ಎನ್‌ಟಿಎಯು ಸಚಿವರಿಗೆ ವಿವರಿಸಿತು' ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಪರೀಕ್ಷಾ ಕಾರ್ಯಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 1.38 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಣ್ಗಾವಲಿಗೆ ಬಳಸಲಾಗಿತ್ತು. ಅಲ್ಲದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಅಕ್ರಮ ಎಸಗುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳ ಬಳಿ 51,311 ಜಾಮರ್‌ಗಳನ್ನು ಅಳವಡಿಸಲಾಗಿತ್ತು.
'ಅಧಿಕಾರಿಗಳು, ಪೊಲೀಸರು, ವೀಕ್ಷಕರು ಮತ್ತು ಪರೀಕ್ಷಾ ಸಿಬ್ಬಂದಿ ಸೇರಿ ಸುಮಾರು 7 ಲಕ್ಷ ಅಧಿಕಾರಿಗಳ ಸಹಕಾರದಿಂದ ಅಲ್ಪ ಅವಧಿಯಲ್ಲೇ ಮರುಪರೀಕ್ಷೆ ನಡೆಸಲು ಸಾಧ್ಯವಾಗಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ನೆರವಾದ ದೇಶದ ವಿವಿಧ ರಾಜ್ಯಗಳ ಶಿಕ್ಷಣ ತಜ್ಞರಿಗೆ ಎನ್‌ಟಿಎ ವಿಶೇಷ ಕೃತಜ್ಞತೆ ಸಲ್ಲಿಸುತ್ತದೆ' ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ವಿವಿಧ ನಗರಗಳಲ್ಲಿ ಅಭ್ಯರ್ಥಿಗಳು ಯಾವುದೇ ಅಡೆತಡೆಯಿಲ್ಲದಂತೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅಧಿಕಾರಿಗಳು ಎಲ್ಲ ಪ್ರಯತ್ನ ಮಾಡಿದ್ದರು. ಆದರೂ, ಪರೀಕ್ಷಾ ಕೇಂದ್ರಕ್ಕೆ ಪ್ರಯಾಣಿಸುವಾಗ ಸಂಚಾರ ದಟ್ಟಣೆ ಸೇರಿದಂತೆ ಅಡೆತಡೆ ಎದುರಿಸಿದ್ದಾಗಿ ಕೆಲವು ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ದೂರಿದರು.
ಭೋಪಾಲ್‌ನಲ್ಲಿ, ತಡವಾಗಿ ಬಂದ ಕಾರಣ ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಯಿತು. 'ಪರೀಕ್ಷಾ ಕೇಂದ್ರಕ್ಕೆ ಬರುವ ದಾರಿಯಲ್ಲಿ ಅಪಘಾತ ಸಂಭವಿಸಿದೆ. ಒಬ್ಬ ಅಭ್ಯರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಬರುವಾಗ ಸ್ವಲ್ಪ ತಡವಾಯಿತು. ನಮಗೆ ಪ್ರವೇಶ ನಿರಾಕರಿಸಲಾಗಿದೆ' ಎಂದು ಅಭ್ಯರ್ಥಿಯ ಜತೆ ಬಂದಿದ್ದ ಅಮೀರ್ ಖಾದ್ರಿ ಅಳಲು ತೋಡಿಕೊಂಡರು.
ರಾಜಸ್ಥಾನದ ಅಜ್ಮೀರ್‌ನ ಕೇಂದ್ರವೊಂದರಲ್ಲಿ ಬುರ್ಖಾ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ನಿರಾಕರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 'ವಿದ್ಯಾರ್ಥಿನಿಗೆ ಕೇಂದ್ರಕ್ಕೆ ತೆರಳಲು ಅವಕಾಶ ನೀಡಲಾಯಿತು' ಎಂದು ಎನ್‌ಟಿಎ ಆ ಬಳಿಕ ಸ್ಪಷ್ಟನೆ ನೀಡಿದೆ.
ಅಹಮದಾಬಾದ್‌ನ ಕೇಂದ್ರವೊಂದರಲ್ಲಿ ಕೆಲವು ಅಭ್ಯರ್ಥಿಗಳಲ್ಲಿ ಪವಿತ್ರ ದಾರ 'ಕಂಠಿ'ಯನ್ನು ತೆಗೆಯಲು ಸೂಚಿಸಿದ್ದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಪರೀಕ್ಷಾ ಕೇಂದ್ರದ ಹೊರಗೆ ಕೆಲಕಾಲ ಗದ್ದಲ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ವಸ್ತ್ರ ಸಂಹಿತೆ ಮತ್ತು ಎನ್‌ಟಿಎಯ ಮಾರ್ಗಸೂಚಿಗಳನ್ನು ಪೋಷಕರಿಗೆ ಮನವರಿಕೆ ಮಾಡಿದ ಬಳಿಕ ವಿವಾದ ಬಗೆಹರಿದಿದೆ.
ಹಿಂದಿನ ಪರೀಕ್ಷೆಗಿಂತಲೂ ಈ ಬಾರಿ ಭದ್ರತಾ ವ್ಯವಸ್ಥೆ ಮತ್ತು ತಪಾಸಣೆಯು ಬಿಗಿಯಾಗಿದ್ದವು ಎಂದು ಪರೀಕ್ಷೆ ಬರೆದ ಬಹುತೇಕ ಅಭ್ಯರ್ಥಿಗಳು ಅಭಿಪ್ರಾಯಪಟ್ಟರು.
'ಪರೀಕ್ಷಾ ಕೇಂದ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಭದ್ರತೆ ಬಿಗಿಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಸಾಧ್ಯವಾದಷ್ಟು ತಯಾರಿ ನಡೆಸಿದ್ದೇನೆ. ಪರೀಕ್ಷೆಯು ಪಾರದರ್ಶಕವಾಗಿ ನಡೆಯುವ ವಿಶ್ವಾಸ ಇದೆ' ಎಂದು ದೆಹಲಿಯ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಕಿಶನ್ ಎಂಬ ಅಭ್ಯರ್ಥಿ ಪ್ರತಿಕ್ರಿಯಿಸಿದರು.
ಅಭಿಷೇಕ್ ಸಿಂಗ್, ಎನ್‌ಟಿಎ ಮಹಾನಿರ್ದೇಶಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು ಸೇರಿದಂತೆ ಕೇವಲ 37 ದಿನಗಳಲ್ಲಿ ಮರುಪರೀಕ್ಷೆ ನಡೆಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆಪ್ರಮುಖ ಅಂಶಗಳು
l ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ (ಬೆಸ್ಟ್) ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ನೀಟ್ ಅಭ್ಯರ್ಥಿಗಳಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಯಿತು
l ವಾರಾಣಸಿಯಲ್ಲಿ ಅಭ್ಯರ್ಥಿಯೊಬ್ಬರ ಒಳಉಡುಪಿನಲ್ಲಿ ಸಿಮ್ ಕಾರ್ಡ್ ಹಾಗೂ ಹಳೆಯ ಪ್ರಶ್ನೆ ಪತ್ರಿಕೆ ಪತ್ತೆಯಾದ್ದರಿಂದ, ಪೊಲೀಸರು ಅವರನ್ನು ಬಂಧಿಸಿದ್ದಾರೆ
l ಕೋಲ್ಕತ್ತದಲ್ಲಿ ಭಾನುವಾರ ಭಾರಿ ಮಳೆ ಸುರಿದ ಕಾರಣ ಹಲವು ಕಡೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ಹರಸಾಹಸಪಟ್ಟರು
l ಜೂನ್ 14ರಂದು ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಸೃಷ್ಟಿ ದುಬೆ ಎಂಬ ಅಭ್ಯರ್ಥಿಗೆ ಕೋಲ್ಕತ್ತದ ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಹಾಗೂ ವೈದ್ಯಕೀಯ ನೆರವಿನೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು
l ನವದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ ಅಭ್ಯರ್ಥಿಗಳ ಜತೆ ಬಂದವರಿಗಾಗಿ ಪರೀಕ್ಷಾ ಕೇಂದ್ರಗಳ ಹೊರಗೆ ಉಚಿತವಾಗಿ ಕುಡಿಯವ ನೀರು ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಯಿತು

ಪ್ರಯಾಣ ತಡಮಾಡಿದ ಪ್ರಧಾನಿ
ಕೋಲ್ಕತ್ತದಿಂದ ಭಾನುವಾರ ಮಧ್ಯಾಹ್ನ ನವದೆಹಲಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದಿಂದ ತಮ್ಮ ನಿವಾಸದೆಡೆಗಿನ ಪ್ರಯಾಣವನ್ನು ಅಲ್ಪ ವಿಳಂಬಗೊಳಿಸಿದರು. ನೀಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಸಂಚಾರ ನಿರ್ಬಂಧದಿಂದಾಗಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ಅವರು ಈ ನಿರ್ಧಾರ ತೆಗೆದುಕೊಂಡರು.
'ಪ್ರಧಾನಿ ಅವರು ಮಧ್ಯಾಹ್ನ 1.15ರ ಸುಮಾರಿಗೆ ಐಜಿಐ ವಿಮಾನ ನಿಲ್ದಾಣ ತಲುಪಿದರು. ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ತಕ್ಷಣವೇ ತೆರಳುವ ಬದಲು ನಿಲ್ದಾಣದಲ್ಲೇ ಕೆಲಹೊತ್ತು ಕಾಯಲು ಬಯಸಿದರು' ಎಂದು ಮೂಲಗಳು ಹೇಳಿವೆ. ಪರೀಕ್ಷೆ ಆರಂಭವಾದ (ಮಧ್ಯಾಹ್ನ 2) ಬಳಿಕವೇ ಅವರು ನಿವಾಸದತ್ತ ಪ್ರಯಾಣ ಬೆಳೆಸಿದರು.
ನೀಟ್ ಆಕಾಂಕ್ಷಿ ಆತ್ಮಹತ್ಯೆ
ಹೈದರಾಬಾದ್: 'ನೀಟ್-ಯುಜಿ' ಪರೀಕ್ಷಾ ಆಕಾಂಕ್ಷಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 19 ವರ್ಷದ ಯುವತಿ ಇಲ್ಲಿನ ಮಿಯಾಪುರದಲ್ಲಿ ತನ್ನ ಸಹೋದರಿ ಜತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಯುವತಿ ಬರೆದಿದ್ದಾರೆ ಎನ್ನಲಾದ 'ಮರಣ ಪತ್ರ'ವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ 'ನನ್ನ ಸಾವಿಗೆ ಯಾರೂ ಕಾರಣರಲ್ಲ' ಎಂದು ಬರೆಯಲಾಗಿದೆ. 'ನೀಟ್-ಯುಜಿ ಮರುಪರೀಕ್ಷೆಯ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ' ಎಂದು ಪೊಲೀಸರು ಹೇಳಿದ್ದಾರೆ.
ಮೈಮೇಲಿನ ದಾರಗಳಿಗೆ ಕತ್ತರಿ
ದಾವಣಗೆರೆ: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿನ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಪರೀಕ್ಷಾರ್ಥಿಗಳನ್ನು ಸಿಬ್ಬಂದಿ ಮೂರು ಹಂತಗಳಲ್ಲಿ ತಪಾಸಣೆಗೆ ಒಳಪಡಿಸಿದರು. ಉಡುದಾರವನ್ನು ತೆಗೆದು ಬುಟ್ಟಿಯೊಂದಕ್ಕೆ ಹಾಕಿದರು. ಜನಿವಾರ ಮತ್ತು ಶಿವದಾರವನ್ನು ಕತ್ತರಿಸಿ ಕೈಗೆ ಇಟ್ಟರು. ರುದ್ರಾಕ್ಷಿ, ಬೆಲ್ಟ್, ಉಂಗುರ, ಸರಗಳನ್ನು ತೆಗೆಸಲಾಯಿತು. ತುಂಬು ತೋಳಿನ ಅಂಗಿ ಧರಿಸಿದವರಿಗೆ ಪ್ರವೇಶ ನೀಡಲಿಲ್ಲ. ಬುರ್ಖಾ ತೆಗೆಸಿ ಪರೀಕ್ಷೆಗೆ ಅವಕಾಶ ಕಲ್ಪಿಸಿದರು.
ತಡವಾಗಿದ್ದಕ್ಕೆ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿನಿ
ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನೀಟ್ ಮರು ಪರೀಕ್ಷೆಗೆ ತಡವಾಗಿ ಬಂದ ಗಂಗಾವತಿಯ ಬೀಬಿ ಫಾತಿಮಾ ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯುವುದರಿಂದ ವಂಚಿತಳಾದಳು.
ಇದರಿಂದ ಅಸಮಾಧಾನಗೊಂಡ ಪೋಷಕರು ಪೊಲೀಸರು ಹಾಗೂ ಪರೀಕ್ಷಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. 'ವಾಹನ ಕೈಕೊಟ್ಟಿದ್ದರಿಂದ ತಡವಾಯಿತು. ಅಷ್ಟಕ್ಕೂ 1.45ಕ್ಕೆ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಲ್ಲಿದ್ದಾಳೆ. ನಾವು ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರಿಸಲಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.
ನಗರದ ಗವಿಸಿದ್ಧೇಶ್ವರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ
ವಿದ್ಯಾರ್ಥಿನಿಯರಿಗೆ ಮೂಗುತಿ ತೆಗೆಯುವಂತೆ ಸೂಚಿಸಿದ ಸಿಬ್ಬಂದಿಯೊಂದಿಗೆ ಪೋಷಕರು ವಾಗ್ವಾದ ನಡೆಸಿದರು.

