Dailyhunt Logo
  • Light mode
    Follow system
    Dark mode
    • Play Story
    • App Story
ಬೀಜದ ಕಂಪನಿಗಳನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಲು ಒತ್ತಾಯ

ಬೀಜದ ಕಂಪನಿಗಳನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಲು ಒತ್ತಾಯ

ಕುಷ್ಟಗಿ: ರೈತರನ್ನು ಬೀಜೋತ್ಪಾದನೆ ಯಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಕಂಪನಿಗಳು, ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಮೂಲಕ ಕಂಪನಿಗಳನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗುವಂತೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಜೀರಸಾಬ್ ಮೂಲಿಮನಿ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹತ್ತಿ, ಪುಷ್ಪಕೃಷಿ, ತರಕಾರಿ, ವಿವಿಧ ಆಹಾರ ಧಾನ್ಯಗಳ ಬೀಜಗಳ ತಾಕುಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯನ್ನು ಒಂದು ರೀತಿಯಲ್ಲಿ ಬೀಜೋತ್ಪಾದನೆ ಹಬ್‌ ಎಂದೆ ಪರಿಗಣಿಸ ಬಹುದಾಗಿದೆ. ಪ್ರತಿವರ್ಷ ಸಹಸ್ರ ಸಂಖ್ಯೆಯಲ್ಲಿ ರೈತರು ವಿವಿಧ ಬೀಜಗಳನ್ನು ಉತ್ಪಾದಿಸುವಲ್ಲಿ ನಿರತರಾಗಿರುತ್ತಾರೆ. ಆದರೆ ಖಾಸಗಿ ಕಂಪನಿಗಳು ಮೊದಲು ಹೇಳುವುದೊಂದು ನಂತರ ಮತ್ತೊಂದು ಎಂಬಂತೆ ಮಾತು ಬದಲಿಸಿ ಕರಾರು ಒಪ್ಪಂದ ಇಲ್ಲದ ಕಾರಣ ರೈತರನ್ನು ಶೋಷಿಸುತ್ತಿರುವುದು ಕಂಡುಬಂದಿದೆ.

ರೈತರು ಬೆವರು ಸುರಿಸಿ ಪರಿಶ್ರಮದಿಂದ ಬೀಜೋತ್ಪಾದನೆ ನಡೆಸಿದರೂ ಅದರ ಹೆಚ್ಚಿನ ಫಲ ಮಾತ್ರ ಖಾಸಗಿ ಕಂಪನಿಗಳು ಮತ್ತು ಈ ಭಾಗದಲ್ಲಿ ರೈತರನ್ನು ಬೀಜೋತ್ಪಾದನೆಗೆ ಪುಸಲಾಯಿ ಸುತ್ತಿರುವ ಏಜೆಂಟರಿಗೆ ದಕ್ಕುತ್ತಿದೆ ಎಂದರು.

ಬೀಜದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಕಳೆದ ವರ್ಷದ ಆಗಸ್ಟ್‌ದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು, ಕಂಪನಿಗಳು ಮತ್ತು ರೈತರ ಮಧ್ಯೆ ಎದುರಾಗಿದ್ದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದರು. ಅಲ್ಲದೆ ರೈತರೊಂದಿಗೆ ಕಡ್ಡಾಯವಾಗಿ ಕರಾರು ಒಪ್ಪಂದ ಮಾಡಿಕೊಂಡೇ ಬೀಜೋತ್ಪಾದನೆಯಲ್ಲಿ ತೊಡಗುವಂತೆ ತಾಕೀತು ಮಾಡಿದ್ದರು. ಆದರೆ ಜಿಲ್ಲಾಧಿಕಾರಿಯ ಸೂಚನೆಯನ್ನು ಯಾವ ಕಂಪನಿಗಳೂ ಪಾಲಿಸಿಲ್ಲ ಎಂದರು.

ರೈತ ಸಂಘಟನೆ ಪ್ರಮುಖರಾದ ದೊಡ್ಡಪ್ಪ ಸಜ್ಜಲಗುಡ್ಡ, ಯಮನೂರ ಮಡಿವಾಳ, ಮುರ್ತುಜಾ ಕಲಾಲಬಂಡಿ, ರೈತ ಮಹಿಳೆ ಶೈನಾಜ್.ಬಿ.ಜಮಾದಾರ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-35-1663324969

Dailyhunt
Disclaimer: This content has not been generated, created or edited by Dailyhunt. Publisher: Prajavani