ಒಂದು ಕಾಲವಿತ್ತು, ಕನ್ನಡದಲ್ಲಿ ಅಂತರಜಾಲ ಅಥವಾ ವೆಬ್ಸೈಟ್ ತೆರೆದರೆ ಸಾಕು, ಕಂಪ್ಯೂಟರ್ ಪರದೆಯ ಮೇಲೆ ವಿಚಿತ್ರ ಅಕ್ಷರಗಳು (ಜಂಕ್ ಅಥವಾ ಬಾಕ್ಸ್) ಕಾಣಿಸಿಕೊಳ್ಳುತ್ತಿದ್ದವು. ಶ್ರೀಲಿಪಿ, ಬರಹ ಅಥವಾ ನುಡಿ ಮುಂತಾದ ಪ್ರೊಪ್ರೈಟರಿ ಫಾಂಟ್ಗಳ ಅವಲಂಬನೆಯಿಂದಾಗಿ, ಒಂದು ಕಂಪ್ಯೂಟರ್ನಲ್ಲಿ ಬರೆದ ಲೇಖನ ಮತ್ತೊಂದು ಕಂಪ್ಯೂಟರ್ನಲ್ಲಿ ಓದಲು ಸಿಗುತ್ತಿರಲಿಲ್ಲ.
ಓದುಗರಿಗೆ ಬೇಕಾದ ವಿಷಯ ಸಿಗದೆ, ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಅಕ್ಷರಗಳು ಮೂಲೆಗುಂಪಾಗುವ ಆತಂಕವಿತ್ತು.
ಆದರೆ, ಡಾಟ್ ಕಾಂ ಯುಗ ಎಂದೇ ಪರಿಗಣಿತವಾದ 1990ರ ದಶಕಾಂತ್ಯ ಮತ್ತು 2000ರ ದಶಕದ ಆರಂಭದಲ್ಲಿ ನಡೆದ ತಂತ್ರಜ್ಞಾನ ಕ್ರಾಂತಿ ಹಾಗೂ ತದನಂತರ ಬಂದ ಯುನಿಕೋಡ್ ತಂತ್ರಜ್ಞಾನವು ಕನ್ನಡ ವೆಬ್ ಜಗತ್ತಿನ ಚಿತ್ರಣವನ್ನೇ ಬದಲಾಯಿಸಿತು. ಅದರಲ್ಲೂ ವಿಶೇಷವಾಗಿ ಆರಂಭಿಕ ವೆಬ್ ಪೋರ್ಟಲ್ಗಳು ಮತ್ತು ಕನ್ನಡ ಬ್ಲಾಗ್ಗಳು ಡಿಜಿಟಲ್ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿಕೊಟ್ಟವು.
ಯುನಿಕೋಡ್ ಕ್ರಾಂತಿ
ಅಂತರಜಾಲದಲ್ಲಿ ಯಾವುದೇ ಭಾಷೆಯ ವಿಷಯಗಳು ಸಾರ್ವತ್ರಿಕವಾಗಿ ಲಭ್ಯವಾಗಲು ಅಥವಾ ಕಾಣಿಸಲು ಯುನಿಕೋಡ್ ಮಾನದಂಡವೇ ಪ್ರಮುಖ ಕಾರಣವಾಯಿತು. ಟಿಟಿಎಫ್ ಫಾಂಟ್ ಅಥವಾ ಅಕ್ಷರವಿನ್ಯಾಸಗಳ ಸ್ಥಾನದಲ್ಲಿ ಯುನಿಕೋಡ್ ಬಂದ ಬಳಿಕವಷ್ಟೇ ಭಾರತೀಯ ಭಾಷೆಗಳಾದ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ತಡವಾಗಿಯಾದರೂ ಕನ್ನಡದಲ್ಲಿ ನಿಜವಾದ ಭಾಷಾ ಪತ್ರಿಕೋದ್ಯಮ ಬೆಳೆಯಲು ಸಾಧ್ಯವಾಯಿತು. ಹಿಂದಿಯ ಮೊದಲ ಯುನಿಕೋಡ್ ವೆಬ್ತಾಣವಾಗಿ ವೆಬ್ದುನಿಯಾ ಇತಿಹಾಸ ಸೃಷ್ಟಿಸಿತು.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಮುದ್ರಣ ಮಾಧ್ಯಮದ ದೈತ್ಯರಾದ ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ ಮುಂತಾದವು ತಮ್ಮ ವೆಬ್ ಆವೃತ್ತಿಗಳನ್ನು ಆರಂಭಿಸಿದ್ದರೂ, ಫಾಂಟ್ ಸಮಸ್ಯೆಯಿಂದಾಗಿ ಅವು ಸಾಮಾನ್ಯ ಓದುಗರಿಗೆ ಸುಲಭವಾಗಿ ತಲುಪುತ್ತಿರಲಿಲ್ಲ. ಅವರು TTF ಫಾಂಟುಗಳನ್ನು ತಮ್ಮ ಕಂಪ್ಯೂಟರಿಗೆ ಡೌನ್ಲೋಡ್ ಮಾಡಿಕೊಂಡು ಅಳವಡಿಸಿ ಓದಬೇಕಾಗಿತ್ತು. ಹಾಗಾಗಿ ವೆಬ್ಸೈಟುಗಳಲ್ಲೇ ಓದುಗರಿಗೆ ಸೂಚನೆ ನೀಡಿ, ತಮ್ಮ ಕಂಪ್ಯೂಟರುಗಳಲ್ಲಿ ಫಾಂಟ್ ಅಳವಡಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಶ್ರೀಲಿಪಿ ಫಾಂಟುಗಳನ್ನೇ ಡೈನಮಿಕ್ ಆಗಿ ಬಳಸುವ ಮೂಲಕ ಅಂದರೆ ತಮ್ಮ ವೆಬ್ಸೈಟ್ಗಳಲ್ಲಿ ಎಂಬೆಡ್ ಮಾಡಿ, ಓದುಗರು ಪ್ರತ್ಯೇಕವಾಗಿ ಫಾಂಟ್ ಡೌನ್ಲೋಡ್ ಮಾಡದೆಯೇ ಓದಬಹುದಾಗಿತ್ತು.
ಈ ಹಂತದಲ್ಲಿ ಯುನಿಕೋಡ್ ಬಂದಿತು. ಅದುವರೆಗೂ ಇಂಗ್ಲಿಷ್ ಪ್ರಧಾನವಾಗಿದ್ದ ಪ್ರಾದೇಶಿಕ ಜಾಲತಾಣಗಳು ನಿಧಾನವಾಗಿ ಕನ್ನಡವನ್ನು ಅಳವಡಿಸಿಕೊಳ್ಳತೊಡಗಿದವು. ಈ ತಂತ್ರಜ್ಞಾನವನ್ನು ಸಮರ್ಥವಾಗಿ ಅಪ್ಪಿಕೊಂಡ ಪ್ರಮುಖ ಮಾಧ್ಯಮ ಜಾಲತಾಣಗಳಲ್ಲಿ ಅಂದಿನ ದಟ್ಸ್ಕನ್ನಡ (ಈಗಿನ ಒನ್ಇಂಡಿಯಾ ಕನ್ನಡ) ಪ್ರಧಾನವಾಗಿ ಗಮನ ಸೆಳೆದರೆ, ಮಾಧ್ಯಮ ಲೋಕದಲ್ಲಿ ಪ್ರಜಾವಾಣಿ (2005ರಲ್ಲಿ ಶ್ರೀಲಿಪಿ ttf ಫಾಂಟ್, ಬಳಿಕ ಡೈನಮಿಕ್ ಫಾಂಟ್, ನಂತರ ಯುನಿಕೋಡ್) ಮುಂಚೂಣಿಯಲ್ಲಿತ್ತು. ಇದಕ್ಕಿಂತ ಮೊದಲೇ ಪವನಜ ಅವರ ವಿಶ್ವಕನ್ನಡವೂ ಡಿಜಿಟಲ್ ಮ್ಯಾಗಜಿನ್ ಆಗಿ ಗಮನ ಸೆಳೆಯುತ್ತಿತು. ಒನ್ಇಂಡಿಯಾ ಕನ್ನಡವು 2002ರಲ್ಲಿ ಪೂರ್ಣ ಪ್ರಮಾಣದಲ್ಲಿ ಯುನಿಕೋಡ್ ಬಳಸಿ ಅಂತರ್ಜಾಲದಲ್ಲಿ ಹೊಸ ಸಂಚಲನ ಮೂಡಿಸಿತು.
*ಆರಂಭಿಕ ಕಾಲದ ಪ್ರಮುಖ ಕನ್ನಡ ವೆಬ್ಸೈಟ್ಗಳು*
•ವಿಶ್ವಕನ್ನಡ: ಡಾಟ್ ಕಾಂ ಯುಗದ ಆರಂಭಿಕ ದಿನಗಳಲ್ಲೇ ಕನ್ನಡವನ್ನು ಅಪ್ಪಿಕೊಂಡು ನಿಯತಕಾಲಿಕವಾಗಿ ಪ್ರಕಟಗೊಳ್ಳುತ್ತಿದ್ದ ವಿಶ್ವಕನ್ನಡವನ್ನು ಸ್ಥಾಪಿಸಿದವರು ಗಣಕತಜ್ಞ ಡಾ.ಯು.ಬಿ.ಪವನಜ. ನಂತರ ಡೈನಮಿಕ್ ಫಾಂಟ್ ಬಳಸಿ, ಪ್ರಸ್ತುತ ಯುನಿಕೋಡ್ನಲ್ಲಿ ಮುಂದುವರಿಯುತ್ತಿದೆ.
•ಇಂಡಿಯಾ ಇನ್ಫೋ/ದಟ್ಸ್ ಕನ್ನಡ: ಡಾಟ್ ಕಾಮ್ ಯುಗದ ಆರಂಭದಲ್ಲೇ 2000ರಲ್ಲಿ ಬಿ.ಜಿ.ಮಹೇಶ್ ಹಾಗೂ ರಾಜ್ ಕೊನೆರು ಅವರಿಂದ ಸ್ಥಾಪನೆಗೊಂಡು, ಹಣಕಾಸು, ಲೈಫ್ಸ್ಟೈಲ್ ಮತ್ತು ಸುದ್ದಿ ಒದಗಿಸುತ್ತಿದ್ದ ತಾಣ. ಬಳಿಕ ಇದು ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿದ ಫಲವಾಗಿ ದಟ್ಸ್ಕನ್ನಡ (ಈಗಿನ ಒನ್ಇಂಡಿಯಾ ಕನ್ನಡ) ಮೈದಳೆಯಿತು. 2000ರಲ್ಲಿ ಶ್ರೀಲಿಪಿ ಆಧಾರಿತ ಡೈನಮಿಕ್ ಫಾಂಟ್ ಬಳಸಿ ಆರಂಭವಾದ ಇದು, ಬಳಿಕ 2002ರ ಅಕ್ಟೋಬರ್ 15ರಂದು ಪೂರ್ಣಪ್ರಮಾಣದ ಯುನಿಕೋಡ್ಗೆ ಬದಲಾದ ಕನ್ನಡದ ಮೊದಲ ಸಮಗ್ರ ಡಿಜಿಟಲ್ ಪೋರ್ಟಲ್. ಸಂಸ್ಥಾಪಕ ಸಂಪಾದಕರು ದಿ.ಶಾಮ್ಸುಂದರ್.
•ಸಿಫಿ ಕನ್ನಡ (Sify Kannada - 2001/2002): 2000ರ ದಶಕದ ಆದಿಭಾಗದಲ್ಲಿ ಕನ್ನಡ ಓದುಗರಿಗೆ ಪ್ರಾದೇಶಿಕ ಭಾಷೆಯ ಇಂಟರ್ಫೇಸ್ ಮೂಲಕ ಸುದ್ದಿ ಹಾಗೂ ಕಂಟೆಂಟ್ ತಲುಪಿಸಿತು.
•ವಿಕ್ರಾಂತ ಕರ್ನಾಟಕ: 2007ರ ಸುಮಾರಿಗೆ ವಿಕ್ರಾಂತ ಕರ್ನಾಟಕವು ಡಿಜಿಟಲ್ ಮ್ಯಾಗಜಿನ್ ಆಗಿ, ಯುನಿಕೋಡ್ನಲ್ಲೇ ಮೂಡಿಬಂದು ಕೆಲವು ಕಾಲ ನಡೆಯಿತು.
•ಎಂಎಸ್ಎನ್ ಕನ್ನಡ (23 ಸೆಪ್ಟೆಂಬರ್ 2006): ಮೈಕ್ರೋಸಾಫ್ಟ್ ಸಂಸ್ಥೆಯು ಭಾರತೀಯ ಭಾಷೆಗಳಿಗೆ ಒತ್ತು ನೀಡಿ ಸೆಪ್ಟೆಂಬರ್ 23, 2006ರಂದು ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಪೋರ್ಟಲ್ಗಳನ್ನು ಅಧಿಕೃತವಾಗಿ ಆರಂಭಿಸಿತು. ಇದು ಆರಂಭವಾದದ್ದು ವೆಬ್ದುನಿಯಾದ ಮೂಲಕ.
•ಯಾಹೂ! ಕನ್ನಡ (ನವೆಂಬರ್ 2006): ಜಾಗತಿಕ ದೈತ್ಯ ಯಾಹೂ ಸಂಸ್ಥೆಯು ನವೆಂಬರ್ 2006ರಲ್ಲಿ ಕನ್ನಡ ಪೋರ್ಟಲ್ ಆರಂಭಿಸಿ ಹವಾಮಾನ, ಸುದ್ದಿ ಹಾಗೂ ಮನರಂಜನೆಯನ್ನು ಒದಗಿಸಿತು. ಇದು ಕೂಡ ವೆಬ್ದುನಿಯಾ ಮೂಲಕವೇ ನಡೆಸಲ್ಪಡುತ್ತಿತ್ತು.
•ವೆಬ್ದುನಿಯಾ ಕನ್ನಡ (4 ಜೂನ್ 2007): ಹಿಂದಿ ತಾಣದ ಯಶಸ್ಸಿನ ಬಳಿಕ ಜೂನ್ 4, 2007ರಂದು ಕನ್ನಡ ವಿಭಾಗವನ್ನು ಆರಂಭಿಸಿ ಸಾಹಿತ್ಯ, ಸಿನಿಮಾ ಹಾಗೂ ಸುದ್ದಿ ಬಿತ್ತರಿಸಿತು. ವೆಬ್ದುನಿಯಾ ಅಡಿಯಲ್ಲಿ ಈ ಮೂರೂ ಜಾಲತಾಣಗಳ ಸಂಪಾದಕನಾಗಿ ಅವುಗಳನ್ನು ರೂಪಿಸುವಲ್ಲಿ ಲೇಖಕರ (ಅವಿನಾಶ್ ಬೈಪಾಡಿತ್ತಾಯ) ಪಾತ್ರ ಪ್ರಧಾನವಾದದ್ದು.
•ಡಿಜಿಕನ್ನಡ: 2006ರಲ್ಲಿ ಆರಂಭವಾಗಿದ್ದ ಬ್ಲಾಗ್ ಇಂದು ತಂತ್ರಜ್ಞಾನ, ಆರೋಗ್ಯಕ್ಕೆ ಮೀಸಲಾದ ಕನ್ನಡ ಜಾಲತಾಣವಾಗಿ ರೂಪುಗೊಂಡಿದೆ.

ಕರುನಾಡೋತ್ಸವ
*ಕನ್ನಡ ಬ್ಲಾಗುಗಳ ಸುವರ್ಣಯುಗ*
ಅಧಿಕೃತ ವೆಬ್ಸೈಟ್ಗಳಷ್ಟೇ ಅಲ್ಲದೆ, 2005ರಿಂದ 2010ರವರೆಗಿನ ಕಾಲಘಟ್ಟವು ಕನ್ನಡ ಬ್ಲಾಗಿಂಗ್ನ ಸುವರ್ಣಯುಗವಾಗಿತ್ತು. ಬ್ಲಾಗ್ಸ್ಪಾಟ್ (ನಂತರ ಬ್ಲಾಗರ್ ಆಯಿತು) ಮತ್ತು ವರ್ಡ್ಪ್ರೆಸ್ ಪ್ಲಾಟ್ಫಾರ್ಮ್ಗಳು ಕನ್ನಡಿಗರಿಗೆ ತಮ್ಮದೇ ಆದ ಸ್ವಂತ ಬ್ಲಾಗ್ ತೆರೆಯುವ ಅವಕಾಶವನ್ನು ಯಾವುದೇ ತಾಂತ್ರಿಕ ಜ್ಞಾನವಿಲ್ಲದೆ ಸುಲಭವಾಗಿ ಕಲ್ಪಿಸಿಕೊಟ್ಟವು. ಇದು ಈಗಿನ ಕನ್ನಡ ಪತ್ರಿಕೋದ್ಯಮದ ಉದ್ಯೋಗಿಗಳಿಗೆ ಸಿಎಂಎಸ್ ಬಳಕೆಯನ್ನು ಸುಲಭ ಮಾಡಿಕೊಟ್ಟ ವೇದಿಕೆಯೂ ಹೌದು. ಅದರಲ್ಲೇ HTML ತಾಂತ್ರಿಕ ಭಾಷೆಯ ಮೂಲಕ ಹಲವು ರೀತಿಯಲ್ಲಿ ವೆಬ್ಸೈಟುಗಳ ವಿನ್ಯಾಸವನ್ನು ಬದಲಾಯಿಸುತ್ತಿದ್ದ ದಿನಗಳಿನ್ನೂ ಹಚ್ಚಹಸುರಾಗಿವೆ.
ಆ ಕಾಲದ ಅತ್ಯಂತ ಸಕ್ರಿಯ ಕನ್ನಡ ಬ್ಲಾಗ್ಗಳು:
1.ಪವನಜ ಬ್ಲಾಗ್: ಹಿರಿಯ ಗಣಕತಜ್ಞರಾದ ಇವರು ಪವನಜ ಬ್ಲಾಗ್ ಆರಂಭಿಸಿ, ತದನಂತರ pavanaja.com ಗೆ ಪರಿವರ್ತಿಸಿದರು. ಅದಾಗಲೇ ವಿಶ್ವಕನ್ನಡ ಜಾಲತಾಣದ ಮೂಲಕ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುತ್ತಿದ್ದರು.
2."ಬೊಗಳೆ ರಗಳೆ": 'ಅನ್ವೇಷಿ' ಎಂಬ ಹೆಸರಿನಿಂದ ಬರೆಯುತ್ತಿದ್ದ ಲೇಖಕರು 'ಬೊಗಳೂರು' ಎಂಬ ಕಾಲ್ಪನಿಕ ಊರನ್ನು ಇಟ್ಟುಕೊಂಡು ಪ್ರಚಲಿತ ವಿದ್ಯಮಾನಗಳು ಮತ್ತು ರಾಜಕೀಯ ಸಂಗತಿಗಳ ಮೇಲೆ ಹಾಸ್ಯ ಮತ್ತು ವ್ಯಂಗ್ಯದ ಚಾಟಿ ಬೀಸುತ್ತಿದ್ದರು. ಬ್ಲಾಗರ್ ಮೂಲಕ ನಡೆಯುತ್ತಿದ್ದ ಅದು ಬಳಿಕ Anveshi.net ಆಗಿ ಬದಲಾವಣೆಗೊಂಡು, ಈಗಲೂ ಸಕ್ರಿಯವಾಗಿದೆ.
3.ಸಂಪದ (Sampada.net): ಹರಿಪ್ರಸಾದ್ ನಾಡಿಗ್ ಮತ್ತು ತಂಡದವರು ಮುನ್ನಡೆಸಿದ ಸಂಪದ, ಕೇವಲ ಒಬ್ಬರ ಬ್ಲಾಗ್ ಆಗಿರದೆ ನೂರಾರು ಕನ್ನಡ ಬ್ಲಾಗಿಗರು ಒಂದೆಡೆ ಸೇರುವ ಡಿಜಿಟಲ್ ಕಟ್ಟೆಯಾಗಿತ್ತು.
4.ಲಿನಕ್ಸಾಯಣ (Linuxaayana): ಓಂಶಿವಪ್ರಕಾಶ್ ಅವರು ನಡೆಸುತ್ತಿದ್ದ ಈ ಬ್ಲಾಗ್, ಲಿನಕ್ಸ್, ಕನ್ನಡ ಯುನಿಕೋಡ್ ಬಳಕೆ ಮತ್ತು ಮುಕ್ತ ತಂತ್ರಾಂಶಗಳ (FOSS) ಕುರಿತು ಕನ್ನಡಿಗರಿಗೆ ಜಾಗೃತಿ ಮೂಡಿಸುತ್ತಿತ್ತು.
5.ಮಾವಿನಯನಸ: ಲಲಿತ ಪ್ರಬಂಧ ಹಾಗೂ ದೈನಂದಿನ ಜೀವನದ ಆಪ್ತ ಅನುಭವಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತಿದ್ದ ಪ್ರಮುಖ ಬ್ಲಾಗ್.
6.ಅಂತರಂಗ: ಶ್ರೀರಾಮ್ ಅವರು ನಡೆಸುತ್ತಿದ್ದ ಅಂತರಂಗದ ಅನಿಸಿಕೆಗಳು, ಪುಸ್ತಕ ಪರಾಮರ್ಶೆ ಮತ್ತು ಸಾಹಿತ್ಯಿಕ ಚರ್ಚೆ ಒಳಗೊಂಡ ಭಾರಿ ಜನಪ್ರಿಯ ಬ್ಲಾಗ್.
7.ಮಜಾವಾಣಿ: ಅನಾಮಿಕ ಹೆಸರಿನಲ್ಲಿ ನಿರಾಯಾಸ ಹಾಸ್ಯ, ತಲೆಹರಟೆ ಹಾಗೂ ಚುಟುಕಗಳ ಮೂಲಕ ಓದುಗರಿಗೆ ಪೂರ್ಣ ಮನರಂಜನೆ ನೀಡುತ್ತಿದ್ದ ಬ್ಲಾಗ್ ಇದು.
8. ಕೆಂಡಸಂಪಿಗೆ, ಬಹುರೂಪಿ: ಹಲವಾರು ಲೇಖಕರು ಈ ವೇದಿಕೆಯಲ್ಲಿ ರೂಪುಗೊಂಡರು. (ಆ ಕಾಲದ ಅತ್ಯಂತ ಸಕ್ರಿಯ ಕನ್ನಡ ಬ್ಲಾಗುಗಳು ಅಡಿಯಲ್ಲಿ)
ಫೇಸ್ಬುಕ್ ಅಥವಾ ವಾಟ್ಸಾಪ್ ಇಲ್ಲದ ಆ ಕಾಲದಲ್ಲಿ, ಕಾಮೆಂಟ್ ಬಾಕ್ಸ್ ಮತ್ತು ಬ್ಲಾಗ್ರೋಲ್ಗಳೇ ಸಂವಹನದ ಮೂಲ ಸೇತುವೆಯಾಗಿದ್ದವು. ಒಂದೇ ಪೋಸ್ಟ್ಗೆ 50-100 ಸುದೀರ್ಘ ಕಾಮೆಂಟ್ಗಳು ಬರುತ್ತಿದ್ದವು!
ಈ ಪ್ರಮುಖ ಬ್ಲಾಗ್ಗಳೊಂದಿಗೆ ಕಾಮೆಂಟ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಇತರ ಬ್ಲಾಗ್ಗಳೆಂದರೆ - ಚಿಂತನ, ಟೊಮೆಟೊ (ತೇಜಸ್ವಿ ಶರ್ಮಾ), ನೆನಪಿನ ದೋಣಿ, ಭಾವ ತರಂಗಿಣಿ, ಚುಕ್ಕಿಚಿತ್ತಾರ, ವಿಕಾಸ ನಾಯಕ್ ಅವರ ಬ್ಲಾಗ್, ನವಿಲುಗರಿ, ಸುಶ್ರುತ ಅವರ ಬ್ಲಾಗ್ ಹಾಗೂ ವಿವಿಧ ಅಪಾರ್ಥಕೋಶ-ತಲೆಹರಟೆ ಬ್ಲಾಗ್ಗಳು. 'ಕನ್ನಡ ಬ್ಲಾಗ್ ಲೋಕ'ದಂತಹ ಅಗ್ರಿಗೇಟರ್ಗಳು ಇವುಗಳನ್ನು ಒಂದೆಡೆ ಜೋಡಿಸುತ್ತಿದ್ದವು.
ಈ ಬ್ಲಾಗರ್ ಮತ್ತು ವರ್ಡ್ಪ್ರೆಸ್ಗೆ ಲೇಖನಗಳನ್ನು ಅಪ್ಲೋಡ್ ಮಾಡುವುದು ಅತ್ಯಂತ ಸುಲಭವಾಗಿತ್ತು. ತೀರಾ ತಾಂತ್ರಿಕ ಜ್ಞಾನವಿಲ್ಲದವರೂ ಸುಲಭವಾಗಿ ಮಾಡಬಹುದಿತ್ತು. ಅದರ ವಿನ್ಯಾಸ, ಬಣ್ಣ ಬದಲಾವಣೆ ಮುಂತಾದವುಗಳನ್ನು HTML ನ ಕೆಲವು ಮೂಲಭೂತ ಕಮಾಂಡ್ ಬಳಸಿ, ಹಲವು ಬ್ಲಾಗರ್ಗಳು ಸುಲಭವಾಗಿ ಬದಲಾಯಿಸುತ್ತಾ ಸಾಕಷ್ಟು ಕಸರತ್ತು ಮಾಡುತ್ತಿದ್ದರು ಎಂಬುದು ಉಲ್ಲೇಖಾರ್ಹ.
*SEO ಮತ್ತು ಟ್ರಾಫಿಕ್ ಗಿಮಿಕ್ಗಳು*
ಇಂದಿನಂತೆ ಕೃತಕ ಬುದ್ಧಿಮತ್ತೆ ಆಧಾರಿತ ಗೂಗಲ್ ಎಸ್ಇಒ (SEO) ವ್ಯವಸ್ಥೆ ಡಾಟ್ ಕಾಂ ಯುಗದ ಆರಂಭಿಕ ಅವಧಿಯಲ್ಲಿ ಇರಲಿಲ್ಲ. ಬದಲಿಗೆ ಅಂದಿನ ಎಸ್ಇಒ ಪ್ರಯೋಗಗಳು ತೀರಾ ಬಾಲಿಶವಾಗಿದ್ದವು.
•ಕೀವರ್ಡ್ ಸ್ಟಫಿಂಗ್: ಸರ್ಚ್ ಎಂಜಿನ್ನಲ್ಲಿ ಬ್ಲಾಗ್ ಸಿಗಲಿ (ಹೆಚ್ಚು ಹಿಟ್ಸ್ ಅಥವಾ ವ್ಯೂಸ್ ಬರಲಿ) ಎಂಬ ಕಾರಣಕ್ಕೆ ಲೇಖನದ ಕೊನೆಯಲ್ಲಿ ಇಲ್ಲವೇ ಮಧ್ಯೆಮಧ್ಯೆ ವಿಷಯಕ್ಕೆ ಸಂಬಂಧವಿಲ್ಲದ ಜನಪ್ರಿಯ ಪದಗಳು ಅಥವಾ ಸೆಲೆಬ್ರಿಟಿಗಳ ಹೆಸರುಗಳನ್ನು ಸರಣಿಯಾಗಿ ಪೇರಿಸಲಾಗುತ್ತಿತ್ತು.
•ಲಿಂಕ್ ಸ್ಪಾಮಿಂಗ್: ಓದುಗರನ್ನು ದಾರಿ ತಪ್ಪಿಸಲು ಅಥವಾ ಕ್ಲಿಕ್ಗಳನ್ನು ಕಸಿದುಕೊಳ್ಳಲು ಬರಹದ ನಡುವೆ ಸಿಕ್ಕಾಪಟ್ಟೆ ಲಿಂಕ್ಗಳನ್ನು ಹಾಕಲಾಗುತ್ತಿತ್ತು.
•ಮೆಟಾ ಟ್ಯಾಗ್ ಅತಿರೇಕ: ಸರ್ಚ್ ಇಂಜಿನ್ಗಳಿಗೆ ದಾರಿತಪ್ಪಿಸಿ, ತಮ್ಮ ಬ್ಲಾಗುಗಳತ್ತ ಹೆಚ್ಚು ವ್ಯೂಸ್ ಬರುವಂತಾಗಲು ನೂರಾರು irrelevant ಕೀವರ್ಡ್ಗಳನ್ನು ಕಾಪಿ-ಪೇಸ್ಟ್ ಮಾಡುವ ಗಿಮಿಕ್ಗಳೂ ನಡೆಯುತ್ತಿದ್ದವು.
ಹಾಗಿದ್ದರೂ, ಈ ಧನಾತ್ಮಕ ಹಾಗೂ ಋಣಾತ್ಮಕ ಪ್ರಯೋಗಗಳೇ ಮುಂದೆ ಅಲ್ಗಾರಿದಮ್ಗಳ ಸುಧಾರಣೆಗೆ ಕಾರಣವಾಗಿ, ಇಂದಿನ ಗುಣಮಟ್ಟದ ಡಿಜಿಟಲ್ ಮಾಧ್ಯಮ ವ್ಯವಸ್ಥೆಗೆ ಮತ್ತು ಅತ್ಯಂತ ಸೂಕ್ತವಾದ ಕಂಟೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ (ಸಿಎಂಎಸ್) ಅಭಿವೃದ್ಧಿಗೆ ಹಾದಿ ಮಾಡಿಕೊಟ್ಟವು. ಕನ್ನಡದಲ್ಲಿ ಡಿಜಿಟಲ್ ಪತ್ರಕರ್ತರು ಬೆಳೆಯುವುದಕ್ಕೂ ಈ ಬ್ಲಾಗ್ಗಳೇ ಮೂಲಾಧಾರ ಎಂದರೆ ತಪ್ಪಾಗದು.
ಆರಂಭಿಕ ಕಾಲದ ಆ ಬ್ಲಾಗ್ ಚಳವಳಿ, ಅಲ್ಲಿ ನಡೆದ ಜ್ಞಾನ ವಿನಿಮಯ ಮತ್ತು ಬ್ಲಾಗಿಗರು ತೋರಿದ ಉತ್ಸಾಹವೇ ಇಂದು ಕೋಟ್ಯಂತರ ಕನ್ನಡಿಗರ ಕೈಯಲ್ಲಿರುವ ಸ್ಮಾರ್ಟ್ಫೋನ್ಗಳಲ್ಲಿ ಕನ್ನಡ ಸುದ್ದಿ, ಸಾಹಿತ್ಯ ಮತ್ತು ಮಾಹಿತಿ ಸುಲಭವಾಗಿ ಸಿಗಲು ಮುಖ್ಯ ಕಾರಣ. ಅಂದು ಹವ್ಯಾಸವಾಗಿ ಆರಂಭವಾದ ಬ್ಲಾಗ್ ಬರಹಗಳು, ಇಂದು ಕನ್ನಡ ವೆಬ್ ಪತ್ರಿಕೋದ್ಯಮಕ್ಕೆ ದೃಢವಾದ ಮತ್ತು ಶಕ್ತಿಯುತವಾದ ಬುನಾದಿ ಹಾಕಿವೆ. ಈಗಲೂ ಕೆಲವು ಬ್ಲಾಗ್ಗಳು ಚಾಲ್ತಿಯಲ್ಲಿದ್ದರೆ, ಮತ್ತೆ ಕೆಲವು ತಮ್ಮದೇ ಡೊಮೇನ್ ಅಡಿಯಲ್ಲಿ ಮುಂದುವರಿಯುತ್ತಿವೆ.
ಲೇಖಕರ ಕುರಿತು: ಸಂಪಾದಕರು DiGiKannada.com

