ಬೆಂಗಳೂರು: ರಾಜ್ಯದ ವಿವಿಧೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ನಿಯಮ ಉಲ್ಲಂಘನೆ ಮತ್ತು ಮತದಾರರ ಗುಂಪು ಸೇರಿಸಿ ಗಣತಿ ನಮೂನೆಗಳನ್ನು ಸಾಮೂಹಿಕವಾಗಿ ವಿತರಿಸುತ್ತಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಕಡ್ಡಾಯವಾಗಿ ಮನೆಗಳಿಗೆ ತೆರಳಿ ಗಣತಿ ನಮೂನೆ ವಿತರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಯು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಎಲ್‌ಒಗಳು ಮನೆ ಮನೆಗಳಿಗೆ ಹೋಗದೆ ಮಸೀದಿ, ದೇವಸ್ಥಾನ, ಛತ್ರ, ಸಮುದಾಯ ಭವನಗಳಲ್ಲಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿಸುತ್ತಿರುವ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಜೆಡಿಎಸ್ ದೂರು ನೀಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು, 'ಬಿಎಲ್‌ಒಗಳು ಕಡ್ಡಾಯವಾಗಿ ಮತದಾರರ ಮನೆಗಳಿಗೆ ಹೋಗಿಯೇ ಗಣತಿ ನಮೂನೆಗಳನ್ನು ವಿತರಿಸಬೇಕು' ಎಂದು ಸೂಚಿಸಿದ್ದಾರೆ.
'ಬಿಎಲ್‌ಒಗಳು ಮನೆ-ಮನೆಗೆ ಹೋಗಿ ಗಣತಿ ನಮೂನೆಗಳನ್ನು ವಿತರಿಸದೇ ಇರುವ ಬಗ್ಗೆ ಹಲವು ದೂರುಗಳು ಬಂದಿವೆ. ಬಿಎಲ್‌ಒಗಳು ಮತದಾರರ ಮನೆಗೆ ಭೇಟಿ ನೀಡದೆ, ತಮ್ಮ ಕಚೇರಿಗಳಲ್ಲಿ ಕುಳಿತು ಗಣತಿ ನಮೂನೆಗಳನ್ನು ವಿತರಿಸುತ್ತಿರುವುದೂ ಗಮನಕ್ಕೆ ಬಂದಿದೆ' ಎಂದು ಅವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದ ಟಿಪ್ಪುನಗರ ವಾರ್ಡ್‌ನ ಸಮುದಾಯ ಭವನದಲ್ಲಿ ಬಿಎಲ್‌ಒಗಳು ಗಣತಿ ನಮೂನೆಗಳನ್ನು ವಿತರಣೆ ಮಾಡುತ್ತಿರುವ ಬಗ್ಗೆ ಜೆಡಿಎಸ್ ಕಾನೂನು ಘಟಕವು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಗುರುವಾರ ದೂರು ನೀಡಿತ್ತು.
ಭಾರತೀಯ ಚುನಾವಣಾ ಆಯೋಗವು ನೀಡಿರುವ ಎಸ್‌ಐಆರ್ ಮಾರ್ಗಸೂಚಿಯ ಅನ್ವಯವೇ ಎಲ್ಲರೂ ಕಾರ್ಯನಿರ್ವಹಿಸಬೇಕು. ಮನೆ- ಮನೆಗೆ ಹೋಗಿಯೇ ಗಣತಿ ನಮೂನೆಗಳನ್ನು ವಿತರಿಸಬೇಕು ಮತ್ತು ಎಸ್‌ಐಆರ್‌ನ ಎಲ್ಲ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ನಡೆಸಬೇಕು ಎಂದು ಬಿಎಲ್‌ಒಗಳಿಗೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಗಣತಿ ನಮೂನೆಗಳನ್ನು ಭರ್ತಿ ಮಾಡುವಲ್ಲಿ ತೊಂದರೆ ಅಥವಾ ಗೊಂದಲ ಎದುರಾದರೆ ಮತದಾರರು, 'ಮತದಾರರ ಸಹಾಯ ಕೇಂದ್ರ'ಕ್ಕೆ ಭೇಟಿ ನೀಡಬೇಕು. ಅಲ್ಲಿ ಸಹಾಯಕರು ಮತ್ತು ಬಿಎಲ್‌ಒಗಳ ನೆರವು ಪಡೆದು ನಮೂನೆಗಳನ್ನು ಭರ್ತಿ ಮಾಡಬೇಕು. ಈ ವಿಧಾನವನ್ನೇ ಅನುಸರಿಸಬೇಕು ಎಂದು ಸೂಚಿಸಿದ್ದಾರೆ.
'ಮನೆ ಬದಲಿಸಿದ್ದರೆ, ಬಿಎಲ್‌ಒ ಸಂಪರ್ಕಿಸಿ'
'ಮತದಾರರು ಮನೆ ಬದಲಿಸಿದ್ದು ಮತದಾರರ ಚೀಟಿಯನ್ನು ಹೊಸ ವಿಳಾಸಕ್ಕೆ ಸ್ಥಳಾಂತರ ಮಾಡಿಸದೇ ಇದ್ದರೆ, ಹಳೆಯ ವಿಳಾಸದಲ್ಲಿಯೇ ಗಣತಿ ನಮೂನೆಗಳನ್ನು ವಿತರಿಸಲಾಗುತ್ತದೆ. ಅಲ್ಲಿ ಮತದಾರರು ಅಥವಾ ಮತದಾರರ ಪರವಾಗಿ ಯಾರೂ ಲಭ್ಯವಿಲ್ಲದಿದ್ದರೆ, ಬಿಎಲ್‌ಒಗಳು 'ಸ್ಥಳಾಂತರ' ಎಂದು ನಮೂದು ಮಾಡಿಕೊಳ್ಳುತ್ತಾರೆ. ಹೀಗಾದಲ್ಲಿ, ಕರಡು ಮತದಾರರ ಪಟ್ಟಿಯಲ್ಲಿ ಅಂಥವರ ಹೆಸರು ಬಿಟ್ಟುಹೋಗುತ್ತದೆ. ಹೀಗೆ ಆಗದೇ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸಿಕೊಳ್ಳುವ ಹೊಣೆಗಾರಿಕೆ ಮತದಾರರದ್ದು' ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದರು.
'ಮನೆ ಬದಲಿಸಿರುವ ಮತದಾರರು, ತಮ್ಮ ಮತಚೀಟಿ ಇರುವ ಭಾಗದ ಬಿಎಲ್‌ಒ ಅವರನ್ನು ಸಂಪರ್ಕಿಸಬೇಕು. ಬಿಎಲ್‌ಒ ಕಚೇರಿಗೆ ತೆರಳಿ ಗಣತಿ ನಮೂನೆಯನ್ನು ಪಡೆದುಕೊಳ್ಳಬೇಕು. ಆ ಮತಗಟ್ಟೆ ವ್ಯಾಪ್ತಿಯ ಮತದಾರರ ಸಹಾಯಕ ಕೇಂದ್ರಕ್ಕೆ ತೆರಳಿ ಸಹಾಯ ಪಡೆದು, ನಮೂನೆ ಭರ್ತಿ ಮಾಡಬೇಕು. ನಮೂನೆಯನ್ನು ಬಿಎಲ್‌ಒಗೆ ಸಲ್ಲಿಸಬೇಕು' ಎಂದು ಮಾಹಿತಿ ನೀಡಿದರು.

ದೂರು ಆರೋಪ
ಬಿಎಲ್‌ಒಗಳು ಮತದಾರರ ಮನೆಗೆ ಭೇಟಿ ನೀಡದೆಯೇ ಮಸೀದಿ ದೇವಾಲಯ ಶಾಲೆ ಸಮುದಾಯ ಭವನಗಳಲ್ಲಿ ಕೂತು ಗಣತಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಯಶವಂತಪುರ ಬೆಂಗಳೂರಿನ ದಕ್ಷಿಣ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ರೀತಿ ಆಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಎಸ್‌ಐಆರ್ ಪ್ರಕ್ರಿಯೆ ಮೇಲೆ ರಾಜ್ಯ ಸರ್ಕಾರವು ಪ್ರಭಾವ ಬೀರುತ್ತಿದೆ. ಎಸ್‌ಐಆರ್‌ನಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ಬದಲಿಸಿ ಬೇರೆ ರಾಜ್ಯದ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಎಲ್‌ಒ ಹೊಣೆಗಾರಿಕೆ ಕೈಪಿಡಿ ಹೇಳುವುದೇನು?
ಕೈಪಿಡಿಯಲ್ಲಿರುವ ಪ್ರಮುಖಾಂಶಗಳು
ಬಿಎಲ್‌ಒಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿಯೊಂದು ಮನೆಗೂ ಕಡ್ಡಾಯವಾಗಿ ಭೇಟಿ ನೀಡಬೇಕು. ಆ ಮತಗಟ್ಟೆಯ ಪ್ರತಿಯೊಬ್ಬ ಮತದಾರರಿಗೆ, ಅವರ ಪೂರ್ವಮುದ್ರಿತ ಗಣತಿ ನಮೂನೆಯ (ಎನ್ಯೂಮರೇಷನ್ ಅರ್ಜಿ) ಎರಡು ಪ್ರತಿಗಳನ್ನು ವಿತರಿಸಬೇಕು
ಗಣತಿ ನಮೂನೆ ವಿತರಣೆಗೆಂದು ಬಿಎಲ್‌ಒಗಳು ಮನೆ ಭೇಟಿಗೆಂದು ಹೋದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅಥವಾ ಮನೆಗೆ ಬೀಗ ಹಾಕಿದ್ದರೆ, ಗಣತಿ ನಮೂನೆಗಳನ್ನು ಮನೆಯ ಬಾಗಿಲಿಗೆ ಸಿಕ್ಕಿಸಿ ಹೋಗಬೇಕು. ಆ ಮನೆಯಲ್ಲಿ ಒಬ್ಬ ಮತದಾರಿದ್ದರೂ ಅಥವಾ ಹಲವು ಮತದಾರರು ಇದ್ದರೂ ಇದೇ ವಿಧಾನ ಅನುಸರಿಸಬೇಕು
ಮತದಾರರು ಗಣತಿ ನಮೂನೆಯನ್ನು ಭರ್ತಿ ಮಾಡಲು ಎಸ್‌ಐಆರ್ ಮ್ಯಾಪಿಂಗ್ ವಿವರಗಳನ್ನು ಒದಗಿಸುವುದು ಮತ್ತು ನಮೂನೆ ಭರ್ತಿ ಮಾಡುವಲ್ಲಿ ಅಗತ್ಯ ನೆರವನ್ನು ನೀಡುವುದು ಬಿಎಲ್‌ಒ ಕರ್ತವ್ಯ
ಮತದಾರರು ಆನ್‌ಲೈನ್ ಮೂಲಕ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೆರವು ನೀಡುವುದು, ಅವುಗಳನ್ನು ದೃಢೀಕರಿಸುವುದು ಮತ್ತು ಮತ್ತೆ ಅಪ್‌ಲೋಡ್ ಮಾಡಲು ನೆರವು ನೀಡುವುದು ಬಿಎಲ್‌ಒಗಳ ಕೆಲಸ. ಜತೆಗೆ ಮತದಾರರನು ಉಲ್ಲೇಖಿಸಿರುವ ದಾಖಲೆ ಪತ್ರಗಳನ್ನು ಭೌತಿಕವಾಗಿ ಪರಿಶೀಲಿಸಿ, ಖಚಿತಪಡಿಸಿಕೊಳ್ಳಬೇಕು
ಮತದಾರರಿಗೆ ವಿತರಿಸಿದ ಗಣತಿ ನಮೂನೆಗಳನ್ನು ಸಂಗ್ರಹಿಸಲು ಬಿಎಲ್‌ಒಗಳು ಮತದಾರರ ಮನೆಗೆ ಭೇಟಿ ನೀಡಬೇಕು. ನಮೂನೆಗಳನ್ನು ಸಂಗ್ರಹಿಸಲು ಮೂರು ಬಾರಿ ಭೇಟಿ ನೀಡಲೇಬೇಕು. ಮತದಾರರು ಭರ್ತಿ ಮಾಡಿದ ನಮೂನೆಯ ಎರಡೂ ಪ್ರತಿಯ ಮೇಲೆ ಬಿಎಲ್‌ಒ ಮತ್ತು ಮತದಾರರು (ಮತದಾರರ ಪರವಾಗಿ ಕುಟುಂಬದವರು) ಸಹಿ ಮಾಡುವುದು ಕಡ್ಡಾಯ
ಮತದಾರರು ಭರ್ತಿ ಮಾಡಿ ಸಲ್ಲಿಸಿದ ಗಣತಿ ನಮೂನೆಯ ಒಂದು ಪ್ರತಿಯನ್ನು ಬಿಎಲ್‌ಒ ತಾವು ಇರಿಸಿಕೊಂಡು, ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಮತ್ತು ಡಿಜಿಟಲೀಕರಿಸಬೇಕು. ಇನ್ನೊಂದು ಪ್ರತಿಯನ್ನು ಮತದಾರರಿಗೆ ಹಿಂತಿರುಗಿಸಬೇಕು

