Dailyhunt Logo
  • Light mode
    Follow system
    Dark mode
    • Play Story
    • App Story
ಬೋನಸ್ ಹಣದಲ್ಲಿ ಕಮಿಷನ್ | ಕ್ರಿಮಿನಲ್ ಕೇಸ್: ಜಿಬಿಎ ಮುಖ್ಯ ಆಯುಕ್ತ

ಬೋನಸ್ ಹಣದಲ್ಲಿ ಕಮಿಷನ್ | ಕ್ರಿಮಿನಲ್ ಕೇಸ್: ಜಿಬಿಎ ಮುಖ್ಯ ಆಯುಕ್ತ

ಬೆಂಗಳೂರು: ಬೋನಸ್ ಹಣದಲ್ಲಿ ಕಮಿಷನ್‌ಗೆ ಬೇಡಿಕೆ ಇಡುವುದು ಅಥವಾ ವಸೂಲಿ ಮಾಡುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಈ ಕುರಿತು ಜಿಬಿಎ ಜಂಟಿ ಆಯುಕ್ತರು (ಆಡಳಿತ) ಸುತ್ತೋಲೆ ಹೊರಡಿಸಿದ್ದು, 'ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನದ ಪ್ರಯುಕ್ತ, ರಾಜ್ಯ ಸರ್ಕಾರವು ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಎಲ್ಲ ಪೌರಕಾರ್ಮಿಕರು ಹಾಗೂ 'ಡಿ' ಗ್ರೂಪ್ ನೌಕರರ ಬ್ಯಾಂಕ್ ಖಾತೆಗಳಿಗೆ ಬೋನಸ್ ರೂಪದಲ್ಲಿ ತಲಾ ₹22 ಸಾವಿರ ಜಮೆ ಮಾಡಲು ಆದೇಶಿಸಿತ್ತು. ಆದರೆ, ಈ ಬೋನಸ್ ಅನ್ನು ತಾವೇ ಮಂಜೂರು ಮಾಡಿಸಿಕೊಟ್ಟಿರುವುದಾಗಿ ಕೆಲ ಸಂಘ-ಸಂಸ್ಥೆಗಳು ಹಾಗೂ ನಾಯಕರೆಂದು ಹೇಳಿಕೊಳ್ಳುವವರು ಪೌರಕಾರ್ಮಿಕರನ್ನು ನಂಬಿಸಿ, ಕಮಿಷನ್ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 'ಬಟವಾಡೆ ಅಧಿಕಾರಿಗಳು' ಈ ಬಗ್ಗೆ ಪರಿಶೀಲಿಸಿ, ಯಾವುದೇ ಸಂಘ-ಸಂಸ್ಥೆಗಳ ನಾಯಕರು, ವ್ಯಕ್ತಿಗಳಿಗೆ ಬೋನಸ್ ಹಣದಲ್ಲಿ ಕಮಿಷನ್ ಅಥವಾ ಪಾಲು ನೀಡದಂತೆ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

'ಪ್ರತಿಭಾ ಪುರಸ್ಕಾರ': ಜಿಬಿಎ ಅರ್ಜಿ ಆಹ್ವಾನ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿರುವ ಎಲ್ಲ ಶಾಲಾ/ ಕಾಲೇಜುಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ 'ಪ್ರತಿಭಾ ಪುರಸ್ಕರ' ನೀಡಲು ಜಿಬಿಎ ಅರ್ಜಿ ಆಹ್ವಾನಿಸಿದೆ.

ನಗರ ಜಿಲ್ಲೆಯಲ್ಲಿರುವ, ಸರ್ಕಾರಿ, ಅನುದಾನಿತ, ಅನುದಾನ ರಹಿತ, ವಸತಿ ಶಿಕ್ಷಣ ಸಂಸ್ಥೆ, ಸಿಬಿಎಸ್‌ಇ, ಐಸಿಎಸ್‌ಇ, ಜವಾಹರಲಾಲ್‌ ನೆಹರೂ ವಿದ್ಯಾಲಯ, ಜಿಬಿಎ ಶಾಲಾ/ಕಾಲೇಜುಗಳಲ್ಲಿ 2025-2026ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99 ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ 99 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಜಿಬಿಎ ನೀಡಿರುವ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸಂಬಂಧಪಟ್ಟ ಶಾಲಾ/ಕಾಲೇಜು ಮುಖ್ಯಸ್ಥರ ದೃಢೀಕರಣ ಪಡೆದು ವಿದ್ಯಾರ್ಥಿಗಳು/ಪೋಷಕರು ಆಗಸ್ಟ್‌ 25ರೊಳಗೆ, ಹಿರಿಯ ಸಹಾಯಕ ನಿರ್ದೇಶಕರು (ಶಿಕ್ಷಣ), ಜಿಬಿಎ ಕೇಂದ್ರ ಕಚೇರಿ, ಎನ್.ಆರ್. ಚೌಕ, ಬೆಂಗಳೂರು-2. ಅನೆಕ್ಸ್-3ನೇ ಕಟ್ಟಡ, 3ನೇ ಮಹಡಿಯಲ್ಲಿ ಖುದ್ದಾಗಿ ಅಥವಾ email: greaterbengaluruauth@gmail.comಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani