Dailyhunt Logo
  • Light mode
    Follow system
    Dark mode
    • Play Story
    • App Story
ಬ್ರಿಟನ್‌ ಪ್ರಧಾನಿ ರಾಜೀನಾಮೆ ಘೋಷಣೆ: ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ

ಬ್ರಿಟನ್‌ ಪ್ರಧಾನಿ ರಾಜೀನಾಮೆ ಘೋಷಣೆ: ಮುಂದಿನ ವಾರದಿಂದ ನೂತನ ಪ್ರಧಾನಿ ಆಯ್ಕೆ

ಲಂಡನ್‌: ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್ ಅವರು ಪ್ರಧಾನಿ ಹುದ್ದೆ ಮತ್ತು ಲೇಬರ್‌ ಪಕ್ಷದ ನಾಯಕನ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಘೋಷಿಸಿದರು.

ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಮುಂದಿನ ವಾರದಿಂದ ಆರಂಭವಾಗಲಿದೆ.

'ಆಡಳಿತಾರೂಢ ಲೇಬರ್‌ ಪಕ್ಷವು ನೂತನ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೆ ಹುದ್ದೆಯಲ್ಲಿ ಮುಂದು ವರಿಯುತ್ತೇನೆ' ಎಂದು ಅವರು ತಿಳಿಸಿದರು.

'ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಸುಗಮವಾಗಿ ನಡೆಯುವ ಸಲುವಾಗಿ, ನೂತನ ನಾಯಕನಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ' ಎಂದು ಅವರು ಘೋಷಿಸಿದರು. ಕಳೆದ ವಾರ ನಡೆದ ಉಪ ಚುನಾವಣೆಯಲ್ಲಿ ಪಕ್ಷದ ಆಯಂಡಿ ಬರ್ನ್‌ಹಮ್‌ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿ ಮುಂಚೂಣಿ
ಯಲ್ಲಿದ್ದಾರೆ.

ರಾಜೀನಾಮೆ ಘೋಷಣೆ ಬಳಿಕ ಮಾತನಾಡಿದ ಸ್ಟಾರ್ಮರ್‌ ಅವರು, 'ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ಪಕ್ಷ ಈಗ ಕೇಳುತ್ತಿದೆ' ಎಂದು ಹೇಳುತ್ತಾ ಭಾವುಕರಾದರು.

'ಈ ಪ್ರಶ್ನೆಗೆ ಸಂಸದರು ನೀಡಿದ ಉತ್ತರವನ್ನು ನಾನು ವಿನಮ್ರವಾಗಿ ಸ್ವೀಕರಿಸಿದ್ದೇನೆ. ನಾನು ತೆಗೆದುಕೊಂಡ ಪ್ರತಿ ನಿರ್ಧಾರವೂ ದೇಶದ ಮೇಲಿನ ನನ್ನ ಪ್ರೀತಿಯ ಸಂಕೇತವಾಗಿದೆ. ಹೀಗಾಗಿಯೇ ಲೇಬರ್‌ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ' ಎಂದರು.

'ರಾಜೀನಾಮೆ ನಿರ್ಧಾರದ ಬಗ್ಗೆ ಬ್ರಿಟನ್‌ ರಾಜ ಮೂರನೇ ಚಾರ್ಲ್ಸ್‌ ಅವರಿಗೆ ಮಾಹಿತಿ ನೀಡಿದ್ದೇನೆ. ಅವರು ನೂತನ ಪ್ರಧಾನಿ ಆಯ್ಕೆ ಸಂಬಂಧ ಪ್ರಕ್ರಿಯೆ ಆರಂಭಿಸಲು ಲೇಬರ್‌ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೂಚಿಸುವರು. ಜುಲೈ 9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಸಂಸತ್ ಅಧಿವೇಶನದ ಒಳಗಾಗಿ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ' ಎಂದರು.

'ದೇಶದ ಅತಿದೊಡ್ಡ ಜವಾಬ್ದಾರಿಯನ್ನು ತ್ಯಜಿಸಿದ ಸಂದರ್ಭದಲ್ಲಿ, ಜೀವನದ ಪ್ರಮುಖ ಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತೇನೆ. ಬದುಕಿನ ಕಷ್ಟ, ಸುಖ ಎರಡಕ್ಕೂ ಹೆಗಲಾದ ಪತ್ನಿಗೆ ಅತ್ಯುತ್ತಮ ಪತಿಯಾಗಿ ಮತ್ತು ನನ್ನ ಮಕ್ಕಳಿಗೆ ಅತ್ಯುತ್ತಮ ತಂದೆಯಾಗಿ ಸಮಯ ಕಳೆಯುತ್ತೇನೆ' ಎಂದು ಹೇಳುತ್ತಾ ಭಾವುಕರಾದರು.

ಸ್ಟಾರ್ಮರ್ ನೇತೃತ್ವದ ಲೇಬರ್‌ ಪಕ್ಷವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿತ್ತು. ಸ್ಟಾರ್ಮರ್‌ ಅವರು ಆರಂಭದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಆದರೆ ಇತ್ತೀಚೆಗೆ ತಮ್ಮ ವಿವಾದಾತ್ಮಕ ನಿರ್ಧಾರಗಳ ಕಾರಣದಿಂದ ಅವರ ಜನಪ್ರಿಯತೆ ಕುಗ್ಗಿತ್ತು.

ಆಯಂಡಿ ಬರ್ನ್‌ಹಮ್‌ ನೂತನ ಪ್ರಧಾನಿ?

ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್‌ ಆಯಂಡಿ ಬರ್ನ್‌ಹಮ್‌ ಅವರು ಬ್ರಿಟನ್‌ನ ನೂತನ ಪ್ರಧಾನಿಯಾಗುವ ಸಾಧ್ಯತೆ ಇದೆ. ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದ ಮಾಜಿ ಆರೋಗ್ಯ ಕಾರ್ಯದರ್ಶಿ ವೆಸ್‌ ಸ್ಟ್ರೀಟಿಂಗ್‌ ಅವರು ಆಯಂಡಿ ಬರ್ನ್‌ಹಮ್‌ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬರ್ನ್‌ಹಮ್‌ ಅವರೇ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

'ಸ್ಟಾರ್ಮರ್‌ ಅವರ ರಾಜೀನಾಮೆಯು ಪರಿವರ್ತನೆಯನ್ನು ಸೂಚಿಸುತ್ತದೆ. ಈ ಪ್ರಕ್ರಿಯೆಯು ಕ್ರಮಬದ್ಧವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಯುವುದು ಮುಖ್ಯ. ಉತ್ತರಾಧಿಕಾರಿ ಸ್ಪರ್ಧೆಯಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ' ಎಂದು ಬರ್ನ್‌ಹಮ್‌ ಅವರು 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ. 'ದೇಶವು ಸ್ಥಿರತೆ ಗಂಭೀರತೆ ಮತ್ತು ಪ್ರಮುಖ ವಿಷಯಗಳಿಗೆ ಹೆಚ್ಚಿನ ಗಮನವನ್ನು ನಿರೀಕ್ಷಿಸುತ್ತಿದೆ. ಜನರು ದೇಶದ ಆರ್ಥಿಕ ಬೆಳವಣಿಗೆಯನ್ನು ಬಯಸುತ್ತಿದ್ದಾರೆ. ಮುಂದಿನ ಪೀಳಿಗೆಯ ಅವಕಾಶಗಳತ್ತ ಎದುರು ನೋಡುತ್ತಿದ್ದಾರೆ. ರಾಜಕೀಯದಲ್ಲಿನ ಬದಲಾವಣೆಯು ಜನರ ಜೀವನವನ್ನು ಸುಧಾರಿಸುವ ಜವಾಬ್ದಾರಿಯಿಂದ ಸರ್ಕಾರವನ್ನು ವಿಮುಖಗೊಳಿಸಬಾರದು' ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani