Dailyhunt Logo
  • Light mode
    Follow system
    Dark mode
    • Play Story
    • App Story
ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ

ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ

ಒಂದು ಸಾಲಿನಲ್ಲಿಬ್ರಿಟನ್‌ನ ಪೀಟರ್‌ಬರೋದಲ್ಲಿರುವ 40 ವರ್ಷಗಳ ಹಳೆಯ ಹಿಂದೂ ದೇವಾಲಯವನ್ನು ಕೌನ್ಸಿಲ್ ಮಾರಾಟ ಮಾಡಲು ಮುಂದಾಗಿರುವುದು ಕಾನೂನು ಸಮರಕ್ಕೆ ಮತ್ತು ಸಮುದಾಯದ ಕಳವಳಕ್ಕೆ ಕಾರಣವಾಗಿದೆ.

ಪ್ರಮುಖ ಪ್ರಶ್ನೋತ್ತರ

ಪೀಟರ್‌ಬರೋದಲ್ಲಿರುವ ರಾಮ ಮಂದಿರದ ವಿವಾದವೇನು?

ಪೀಟರ್‌ಬರೋ ಸಿಟಿ ಕೌನ್ಸಿಲ್, ಹಿಂದೂ ಸಮಾಜದ ದೇವಾಲಯವಿರುವ 'ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್' ಆಸ್ತಿಯನ್ನು 'ಯುಕೆಐಎಂ' ಸಂಸ್ಥೆಗೆ ಮಾರಾಟ ಮಾಡಲು ನಿರ್ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ದೇವಾಲಯ ಹಿಂದೂ ಸಮುದಾಯಕ್ಕೆ ಏಕೆ ಮುಖ್ಯ?

1986ರಲ್ಲಿ ಸ್ಥಾಪನೆಯಾದ ಈ ದೇವಾಲಯವು ಕೇವಲ ಪೂಜಾ ಸ್ಥಳವಲ್ಲದೆ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಮುದಾಯ ಸೇವೆಗಳ ಕೇಂದ್ರವಾಗಿ ಸುಮಾರು 14 ಸಾವಿರ ಭಕ್ತರಿಗೆ ಆಸರೆಯಾಗಿದೆ.

ಆಸ್ತಿ ಮಾರಾಟದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಏನಾಯಿತು?

ಭಾರತ್ ಹಿಂದೂ ಸಮಾಜವು 1.3 ಮಿಲಿಯನ್ ಪೌಂಡ್ ಬಿಡ್ ಸಲ್ಲಿಸಿದ್ದರೂ, ಯುನೈಟೆಡ್ ಕಿಂಗ್ಡಮ್ ಇಸ್ಲಾಮಿಕ್ ಮಿಷನ್ (ಯುಕೆಐಎಂ) ಶೇ 5ರಷ್ಟು ಹೆಚ್ಚು ಬಿಡ್ ಸಲ್ಲಿಸಿ ಹಕ್ಕು ಪಡೆದುಕೊಂಡಿತು.

ಪ್ರಕರಣ ಹೈಕೋರ್ಟ್ ತಲುಪಿದ್ದು ಹೇಗೆ?

ಕೌನ್ಸಿಲ್‌ನ ನಿರ್ಧಾರದಲ್ಲಿ ಲೋಪಗಳಿವೆಯೆಂದು ದೇವಾಲಯ ಸಮಿತಿ ಆರೋಪಿಸಿದ್ದು, ಮಾರಾಟ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಈ ವ್ಯಾಜ್ಯವನ್ನು ಹೈಕೋರ್ಟ್‌ಗೆ ಕೊಂಡೊಯ್ದಿದೆ.

ಯುಕೆಐಎಂ ಸಂಸ್ಥೆಯ ಮುಂದಿನ ಯೋಜನೆಗಳೇನು?

ಈ ಸ್ಥಳದಲ್ಲಿ ಯುಕೆಐಎಂ 'ಪೀಟರ್‌ಬರೋ ಯೂನಿಟಿ ಸೆಂಟರ್' ಸ್ಥಾಪಿಸಲು ಉದ್ದೇಶಿಸಿದ್ದು, ಅಲ್ಲಿ ಪ್ರಾರ್ಥನಾ ಸೌಲಭ್ಯಗಳು, ಯುವ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವೆಗಳನ್ನು ಒದಗಿಸಲು ಯೋಜಿಸಿದೆ.

ಪ್ರಮುಖ ಅಂಕಿಅಂಶಗಳು

1986ದೇವಾಲಯ ಸ್ಥಾಪನೆಯಾದ ವರ್ಷ14 ಸಾವಿರದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ1.3 ಮಿಲಿಯನ್ ಪೌಂಡ್ದೇವಾಲಯದ ಬಿಡ್ ಮೊತ್ತಶೇ 5ಬಿಡ್ಡಿಂಗ್ ಅಂತರ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬ್ರಿಟನ್‌ನ ಪೀಟರ್‌ಬರೋ ನಗರದಲ್ಲಿರುವ 'ರಾಮ ಮಂದಿರ'ದ ಆಸ್ತಿ ವಿವಾದ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲಿರುವ ಹಿಂದೂ ಸಮಾಜದ ಕಳವಳಕ್ಕೂ ಕಾರಣವಾಗಿದೆ.

ಪೀಟರ್‌ಬರೋದಲ್ಲಿರುವ 'ಭಾರತ್ ಹಿಂದೂ ಸಮಾಜ'ದ ವತಿಯಿಂದ ನಡೆಯುತ್ತಿರುವ ಈ ದೇಗುಲ ಸ್ಥಾಪನೆಯಾಗಿದ್ದು 1986ರಲ್ಲಿ. ಸುಮಾರು ನಾಲ್ಕು ದಶಕಗಳಿಂದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮುದಾಯ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿರುವ ಅದರ ಭವಿಷ್ಯ ಈ‌ಗ ಅತಂತ್ರವಾಗಿದೆ.

ದೇವಾಲಯವಿರುವ 'ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್' ಆಸ್ತಿಯನ್ನು ನಗರದಲ್ಲಿ 'ಖದೀಜಾ ಮಸೀದಿ'ಯನ್ನು ನಡೆಸುತ್ತಿರುವ 'ಯುನೈಟೆಡ್ ಕಿಂಗ್ಡಮ್ ಇಸ್ಲಾಮಿಕ್ ಮಿಷನ್' (ಯುಕೆಐಎಂ) ಸಂಸ್ಥೆಗೆ ಮಾರಾಟ ಮಾಡಲು 'ಪೀಟರ್‌ಬರೋ ಸಿಟಿ ಕೌನ್ಸಿಲ್' ನಿರ್ಧರಿಸಿದೆ. ಕೌನ್ಸಿಲ್‌ನ ಈ ನಿರ್ಧಾರವನ್ನು ದೇವಾಲಯದ ಸಮಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಈ ವ್ಯಾಜ್ಯ ಈಗ ಹೈಕೋರ್ಟ್ ಮೆಟ್ಟಿಲೇರಿದೆ.

ದೇವಾಲಯ ಏಕೆ ಮುಖ್ಯ?

ಭಾರತ್ ಹಿಂದೂ ಸಮಾಜ ದೇವಾಲಯವು 1986ರಿಂದಲೂ ಹಿಂದೂ ಸಮುದಾಯಕ್ಕಾಗಿ ಕೆಲಸ ಮಾಡುತ್ತಿದೆ. ಪೀಟರ್‌ಬರೋ, ಕೇಂಬ್ರಿಡ್ಜ್‌ಶೈರ್, ನಾರ್ಫೋಕ್, ಲಿಂಕನ್‌ಶೈರ್ ಮತ್ತು ಲೆಸ್ಟರ್‌ಶೈರ್‌ನ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ಸುಮಾರು 14 ಸಾವಿರ ಮಂದಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ ಎನ್ನುವುದು ದೇವಾಲಯದ ಪ್ರತಿನಿಧಿಗಳು ಹೇಳುತ್ತಾರೆ.

ಇಷ್ಟು ವರ್ಷಗಳಲ್ಲಿ ಈ ದೇವಾಲಯವು ಕೇವಲ ಪೂಜಾ ಸ್ಥಳವಾಗಿರದೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಿರಿಯ ನಾಗರಿಕರಿಗಾಗಿ ಲಂಚ್ ಕ್ಲಬ್‌ಗಳು ಮತ್ತು ದಾನಧರ್ಮದ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದೆ. ಸಂಸ್ಥೆಯನ್ನು ನಿರ್ಮಿಸಲು ಮತ್ತು ಉಳಿಸಲು ತಲೆಮಾರು‌ಗಳು ತಮ್ಮ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ವ್ಯಯಿಸಿವೆ. ಅನೇಕ ಭಕ್ತರಿಗೆ ಇದು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ ಎನ್ನುತ್ತಾರೆ ದೇವಾಲಯದ ಮುಖಂಡರು.

ಈ ಪ್ರದೇಶದಲ್ಲಿ ನೂರಾರು ಚರ್ಚ್‌ಗಳು ಮತ್ತು ಹಲವು ಮಸೀದಿಗಳು ಅಥವಾ ಮುಸ್ಲಿಂ ಸಮುದಾಯ ಕೇಂದ್ರಗಳಿದ್ದರೂ, ಈ ಪ್ರದೇಶದಲ್ಲಿ ಇರುವ ಏಕೈಕ ಹಿಂದೂ ದೇಗುಲ ಇದೊಂದೇ. ಹೀಗಾಗಿ ಇದನ್ನು ಉಳಿಸಿಕೊಳ್ಳುವುದು ಹಿಂದೂ ಸಮಾಜಕ್ಕೆ ಮುಖ್ಯವಾಗಿದೆ. ಅಲ್ಲದೆ ಇದೇ ವಾದವನ್ನೂ ಸಮಿತಿ ಮುಖಂಡರು ಕೌನ್ಸಿಲ್ ಮುಂದೆಯೂ ಇಟ್ಟಿದ್ದರು.

ವಿವಾದ ಪ್ರಾರಂಭವಾಗಿದ್ದು ಹೇಗೆ?

ದೇಗುಲವನ್ನು ಉಳಿಸಿಕೊಳ್ಳಲು ಕೌನ್ಸಿಲ್‌ ಸುಪರ್ದಿಯಲ್ಲಿರುವ ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು 2011ರಿಂದಲೇ ಪೀಟರ್‌ಬರೋ ಸಿಟಿ ಕೌನ್ಸಿಲ್‌ನೊಂದಿಗೆ ದೇವಾಲಯದ ಪ್ರತಿನಿಧಿಗಳು ಮಾತುಕತೆ ನಡೆಸುತ್ತಾ ಬಂದಿದ್ದರು. ಅಲ್ಲದೆ ಅದಕ್ಕೆ ಬೇಕಾದ ಹಣವನ್ನೂ ಸಂಗ್ರಹಿಸಿದ್ದರು.

ಈ ನಡುವೆ ಸಾಲದ ಪ್ರಮಾಣ ಹೆಚ್ಚಾಗಿ ಕೌನ್ಸಿಲ್ ದಿವಾಳಿಯಾಯಿತು. ತನ್ನ ಮಾಲೀಕತ್ವದಲ್ಲಿರುವ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಿ ಸಾಲದ ಹೊರೆಯನ್ನು ಕಡಿಮೆ ಮಾಡಲು ಕೌನ್ಸಿಲ್ ಈ ಜಾಗವನ್ನು ಮಾರಾಟ ಮಾಡಲು ನಿರ್ಧರಿಸಿತು. ವಿವಾದಕ್ಕೆ ಮುನ್ನುಡಿ ಬರೆದಿದ್ದೇ ಇದು. ಸದ್ಯ ಆಸ್ತಿಯಲ್ಲಿ ನೆಲಸಿರುವವರಿಗೆ ನೇರವಾಗಿ ಮಾರಾಟ ಮಾಡುವ ಬದಲು, ಕೌನ್ಸಿಲ್ ಸ್ಪರ್ಧಾತ್ಮಕ ಬಿಡ್‌ಗಳನ್ನು ಆಹ್ವಾನಿಸಿತು.

ಬಿಡ್ಡಿಂಗ್‌ನಲ್ಲಿ ಪ್ರಕ್ರಿಯೆಯಲ್ಲಿ ಏನಾಯಿತು?

'ಭಾರತ್ ಹಿಂದೂ ಸಮಾಜ'ವು ಆಸ್ತಿಗಾಗಿ ಸುಮಾರು 1.3 ಮಿಲಿಯನ್ ಪೌಂಡ್ ಬಿಡ್ ಸಲ್ಲಿಸಿತು. ಪೀಟರ್‌ಬರೋದಲ್ಲಿ ಖದೀಜಾ ಮಸೀದಿಯನ್ನು ನಡೆಸುತ್ತಿರುವ ಯುನೈಟೆಡ್ ಕಿಂಗ್ಡಮ್ ಇಸ್ಲಾಮಿಕ್ ಮಿಷನ್ (ಯುಕೆಐಎಂ) ಇತರರಿಗಿಂತ ಶೇ 5ರಷ್ಟು ಹೆಚ್ಚು ಬಿಡ್ ಸಲ್ಲಿಸಿತು. ಹೀಗಾಗಿ ಆ ಬಿಡ್ ಯುಕೆಐಎಂ ಪಾಲಾಯಿತು.

ಮಂದಿರದಲ್ಲಿರುವ ಮೂರ್ತಿಗಳು

ಇದು ಹಿಂದೂ-ಮುಸ್ಲಿಂ ವಿವಾದವೇ?

'ಇದು ಹಿಂದೂ-ಮುಸ್ಲಿಂ ವಿವಾದವಲ್ಲ. ನಮ್ಮ ಹೋರಾಟ ಮಸೀದಿಯೊಂದಿಗಲ್ಲ; ನಮ್ಮ ಹೋರಾಟ ಕೌನ್ಸಿಲ್ ವಿರುದ್ಧವಾಗಿದೆ' ಎಂದು ದೇವಾಲಯದ ಪ್ರತಿನಿಧಿಗಳು ಹೇಳುತ್ತಾರೆ. ಬಿಡ್ ಪ್ರಕ್ರಿಯೆ ಬಗ್ಗೆ ನಮಗೆ ಆಕ್ಷೇಪಣೆಗಳಿವೆಯೇ ಹೊರತು, ಬಿಡ್ ಗೆದ್ದವರ ಬಗ್ಗೆ ಅಲ್ಲ ಎಂದು ಅವರು ಹೇಳುತ್ತಾರೆ. ಜನರು ಒಗ್ಗಟ್ಟಾಗಿರಬೇಕು ಎಂದು ಯುಕೆಐಎಂ ಕೂಡ ಹೇಳಿದೆ.

ಮಾರಾಟಕ್ಕೆ ವಿರೋಧ ಏಕೆ?

ಹಲವು ಕೌಂಟಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಿಂದೂ ಸಮುದಾಯಕ್ಕೆ ಈ ದೇಗುಲ ಮಾತ್ರವಿದ್ದು, ಸಮೀಪದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲ ಎನ್ನುವುದು ದೇಗುಲ ಸಮಿತಿಯ ವಾದ. ಅಲ್ಲದೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಈ ಸಂಸ್ಥೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿಲ್ಲ, ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಗೆ ಮುಂದಾದಾಗ ಕೌನ್ಸಿಲ್ ನಮ್ಮ ಮಾತುಕತೆಯನ್ನು ಸಂಪೂರ್ಣವಾಗಿ ಬದಿಗೊತ್ತಿತು ಎನ್ನುವುದು ಸದಸ್ಯರ ಆಕ್ಷೇಪ.

ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರವು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು, ಈ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿತ್ತು ಎಂದು ದೇವಾಲಯದ ಮುಖಂಡರು ವಾದಿಸುತ್ತಾರೆ.

ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ: ಡಿ.ಕೆ. ಶಿವಕುಮಾರ್

ಕೌನ್ಸಿಲ್ ಹೇಳುವುದೇನು?

ದೇಗುಲ ಸಮಿತಿಯ ಎಲ್ಲಾ ಆರೋಪಗಳನ್ನು ಪೀಟರ್‌ಬರೋ ಸಿಟಿ ಕೌನ್ಸಿಲ್ ನಿರಾಕರಿಸಿದೆ. ಮಾರಾಟ ಪ್ರಕ್ರಿಯೆಯು ಕಾನೂನುಬದ್ಧ, ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಹಣಕಾಸು ಮತ್ತು ಸಾಮಾಜಿಕ ಎರಡೂ ವಿಚಾರಗಳನ್ನು ಮೌಲ್ಯಮಾಪನ ಮಾಡಲಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಹಿಂದೂ ಸಮುದಾಯಕ್ಕೆ ಈ ಆಸ್ತಿಯ ಮಹತ್ವ ಏನೆಂಬುದು ತನಗೆ ಅರ್ಥವಾಗಿದೆ. ಹಲವು ವರ್ಷಗಳಿಂದ ದೇವಾಲಯದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಅಗತ್ಯವಿದ್ದರೆ ದೇವಾಲಯ ಮತ್ತು ಸಂಕೀರ್ಣದೊಳಗೆ ಇರುವ ಇತರರಿಗೆ ಪರ್ಯಾಯ ವಸತಿ ಹುಡುಕಲು ಸಹಾಯ ಮಾಡಲು ಸಿದ್ಧವಿರುವುದಾಗಿ ಕೌನ್ಸಿಲ್ ಹೇಳಿದೆ.

ಈ ಜಾಗದಲ್ಲಿ ಯುಕೆಐಎಂ ಏನು ಮಾಡಲು ಯೋಜಿಸಿದೆ?

ಈ ಸ್ಥಳದಲ್ಲಿ 'ಪೀಟರ್‌ಬರೋ ಯೂನಿಟಿ ಸೆಂಟರ್' ಎನ್ನುವ ಯೋಜನೆಯನ್ನು 2026ರ ಮಾರ್ಚ್‌ನಲ್ಲಿ ಯುಕೆಐಎಂ ಅನಾವರಣಗೊಳಿಸಿತು. ಪ್ರಸ್ತಾವಿತ ಯೋಜನೆಯಲ್ಲಿ ಪ್ರಾರ್ಥನಾ ಸೌಲಭ್ಯಗಳು, ಯುವ ಕಾರ್ಯಕ್ರಮಗಳು, ಕೌನ್ಸೆಲಿಂಗ್ ಸೇವೆಗಳು, ಸಮುದಾಯ ಅಡುಗೆಮನೆಗಳು, ಫುಡ್-ಬ್ಯಾಂಕ್ ಕಾರ್ಯಾಚರಣೆಗಳು ಮತ್ತು ಸಭಾಂಗಣ ಇರಲಿದೆ.

ಈ ಯೋಜನೆಯು ಸಮುದಾಯಕ್ಕೆ ಸೇವೆ ಸಲ್ಲಿಸುವ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಯುಕೆಐಎಂ ಹೇಳಿದೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ವಿವಾದದ ಕುರಿತು ವ್ಯಾಪಕವಾಗಿ ಪ್ರತಿಕ್ರಿಯಿಸಲು ಸಂಸ್ಥೆಯು ನಿರಾಕರಿಸಿದೆ.

ಪೀಟರ್‌ಬರೊ ರಾಮ ಮಂದಿರ

ಪ್ರಕರಣ ಹೈಕೋರ್ಟ್ ತಲುಪಿದ್ದು ಹೇಗೆ?

2025ರ ಡಿಸೆಂಬರ್‌ನಲ್ಲಿ ಕೌನ್ಸಿಲ್ ಬಿಡ್‌ದಾರರನ್ನು ಆಯ್ಕೆ ಮಾಡಿದ ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತು. 2026ರ ಜನವರಿಯಲ್ಲಿ ಬಿಡ್ ಅಂತಿಮಗೊಳಿಸುವ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲಾ ಮಾಹಿತಿಗಳನ್ನು ಪರಿಗಣಿಸಿಲ್ಲ ಎನ್ನುವ ಅಭಿ‍ಪ್ರಾಯ ವ್ಯಕ್ತವಾಯಿತು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೆಲವು ಕೌನ್ಸಿಲರ್‌ಗಳು ಒತ್ತಾಯಿಸಿದರು. ಹೀಗಾಗಿ ಅದನ್ನು ಪರಿಶೀಲನಾ ಸಮಿತಿಗೆ ಕಳುಹಿಸಲಾಯಿತು.

ಬಿಡ್ಡಿಂಗ್ ವೇಳೆ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಲಾಗಿಲ್ಲ ಎಂದ ಪರಿಶೀಲನಾ ಸಮಿತಿಯು, ಈ ವಿಷಯವನ್ನು ಮತ್ತೆ ಕ್ಯಾಬಿನೆಟ್‌ಗೆ ಮರಳಿ ಕಳುಹಿಸಿತು. 2026 ಫೆಬ್ರುವರಿಯಲ್ಲಿ ಈ ವಿಷಯವನ್ನು ಮರುಪರಿಶೀಲಿಸಿದ ಕ್ಯಾಬಿನೆಟ್, ಮಾರಾಟಕ್ಕೆ ಮತ್ತೊಮ್ಮೆ ಅನುಮೋದನೆ ನೀಡಿತು.

ಇದರ ಬೆನ್ನಲ್ಲೇ ದೇವಾಲಯವು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿತು. 2026ರ ಮಾರ್ಚ್‌ನಲ್ಲಿ ಮಾರಾಟ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತು.

ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾಗಿರುವುದು ಏನು?

ಆಸ್ತಿಯು ದೇವಾಲಯಕ್ಕೆ ಸೇರಬೇಕೇ ಅಥವಾ ಯುಕೆಐಎಂಗೆ ಸೇರಬೇಕೇ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತಿಲ್ಲ. ಬದಲಾಗಿ, ಪೀಟರ್‌ಬರೋ ಸಿಟಿ ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುವಾಗ ಕಾನೂನುಬದ್ಧವಾಗಿ ನಡೆದುಕೊಂಡಿದೆಯೇ ಎಂಬುದನ್ನು ಅದು ಪರಿಶೀಲಿಸುತ್ತಿದೆ.

ಕೌನ್ಸಿಲ್‌ನ ಪ್ರಕ್ರಿಯೆಯಲ್ಲಿ ದೊಡ್ಡ ಲೋಪದೋಷಗಳಿವೆ. ಈ ನಿರ್ಧಾರವು ಹಿಂದೂ ಸಮುದಾಯದ ಮೇಲೆ ಬೀರುವ ಪರಿಣಾಮವನ್ನು ಅದು ಸರಿಯಾಗಿ ಪರಿಗಣಿಸಿಲ್ಲ ಎಂದು ದೇವಾಲಯವನ್ನು ಪ್ರತಿನಿಧಿಸುವ ವಕೀಲರು ವಾದಿಸುತ್ತಾರೆ.

ಆದರೆ ಎಲ್ಲವನ್ನೂ ಕೂಲಂಕಶವಾಗಿ ಪರಿಶೀಲಿಸಿಯೇ ನಿರ್ಧಾರಕ್ಕೆ ಬರಲಾಗಿದೆ ಎಂದು ಕೌನ್ಸಿಲ್ ಸಮರ್ಥಿಸಿಕೊಳ್ಳುತ್ತದೆ.

ಇದರ ಫಲಿತಾಂಶವು ಮಾರಾಟ ಪ್ರಕ್ರಿಯೆ ಮುಂದುವರಿಯಬಹುದೇ ಅಥವಾ ನಿರ್ಧಾರವನ್ನು ಮರುಪರಿಶೀಲಿಸಬೇಕೇ ಎಂಬುದನ್ನು ನಿರ್ಧರಿಸುತ್ತದೆ.

ಈಗಿನ ಸ್ಥಿತಿ ಏನು?

ಸದ್ಯಕ್ಕೆ, ಕೋರ್ಟ್ ಆದೇಶದ ಮೇರೆಗೆ ಮಾರಾಟ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್‌ನಿಂದಲೇ ದೇವಾಲ ಕಾರ್ಯನಿರ್ವಹಿಸುತ್ತಿದೆ. ಕೋರ್ಟ್‌ನ ಮುಂದಿನ ಆದೇಶದವರೆಗೂ ಯಥಾಸ್ಥಿತಿ ಮುಂದುವರಿಯಲಿದೆ.

ಈ ಪ್ರಕರಣ ಏಕೆ ಮುಖ್ಯ?

ಪೀಟರ್‌ಬರೋದಲ್ಲಿನ ಈ ವಿವಾದ ಕೇವಲ ಒಂದು ಕಟ್ಟಡದ ಮಾಲೀಕತ್ವದ ಪ್ರಶ್ನೆಯಲ್ಲ. ಒಂದು ಧಾರ್ಮಿಕ ಸಮುದಾಯವು ಸುಮಾರು 40 ವರ್ಷಗಳಿಂದ ಕಟ್ಟಿಕೊಂಡು ಬಂದಿರುವ ಸಂಸ್ಥೆಯ ಭವಿಷ್ಯದ ಪ್ರಶ್ನೆಯಾಗಿದೆ. ಅದೇ ಸಮಯದಲ್ಲಿ, ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವಾಗ ಆರ್ಥಿಕ ಲಾಭ ಮತ್ತು ಸಮುದಾಯದ ಮೌಲ್ಯಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸಬೇಕು ಎಂಬ ದೊಡ್ಡ ಚರ್ಚೆಯನ್ನೂ ಇದು ಹುಟ್ಟುಹಾಕಿದೆ.

ಆಧಾರ: ಬಿಬಿಸಿ ವರದಿಗಳು ಹಾಗೂ ಸ್ಥಳೀಯ ಅನಿವಾಸಿ ಕನ್ನಡಿಗರು ನೀಡಿದ ಮಾಹಿತಿ ಹಾಗೂ ದಾಖಲೆಗಳು

ಪ್ರವಾಸ | ಸಿಡ್ನಿ: ಕಡಲತೀರದ ಕಾಲ್ನಡಿಗೆ ಶಿಲ್ಪ ಕಲಾಕೃತಿಗಳ ಅಭಿವ್ಯಕ್ತಿ
Dailyhunt
Disclaimer: This content has not been generated, created or edited by Dailyhunt. Publisher: Prajavani