ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾದ ನಂತರ 15 ದಿನಗಳಲ್ಲಿ 2,308 ಪ್ರಕರಣಗಳು ದೃಢಪಟ್ಟಿವೆ. 13 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಪೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಸಾವಿನ ಪ್ರಕರಣ ವರದಿಯಾದ ನಂತರ, ಏಪ್ರಿಲ್ 10ರವರೆಗೆ ಜಿಲ್ಲೆಯಲ್ಲಿ ಕೋವಿಡ್ನಿಂದಾಗಿ ಯಾರೂ ಮೃತಪಟ್ಟಿರಲಿಲ್ಲ. ಆಗ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಯೂ ಕಡಿಮೆ ಇತ್ತು. ಮಾರ್ಚ್ ಅಂತ್ಯದಲ್ಲಿ ನಿಧಾನವಾಗಿ ಏರುತ್ತಾ ಹೋದ ಪ್ರಕರಣಗಳು ಏಪ್ರಿಲ್ ಮೊದಲ ವಾರದಿಂದ ದಿಢೀರ್ ಹೆಚ್ಚಾಯಿತು.
ಎರಡು ತಿಂಗಳ ಬಳಿಕ ಏಪ್ರಿಲ್ 10ರಂದು ಜಿಲ್ಲೆಯಲ್ಲಿ ಮೊದಲ ಸಾವಿನ ಪ್ರಕರಣ ವರದಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ, 15 ದಿನಗಳ ಅವಧಿಯಲ್ಲಿ 13 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಭಾನುವಾರ (ಏಪ್ರಿಲ್ 25) ಒಂದೇ ದಿನ ಮೂವರ ಸಾವಿನ ಪ್ರಕರಣಗಳು ವರದಿಯಾಗಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ರೂಪಾಂತರಗೊಂಡ ಕೊರೊನಾ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಗಂಟಲು ನೋವು, ಕೆರೆತ, ಕೆಮ್ಮು ನೆಗಡಿ, ಜ್ವರ ಇದರ ಪ್ರಮುಖ ರೋಗ ಲಕ್ಷಣಗಳಾಗಿದ್ದರೂ, ಈ ಬಾರಿ ಮೈಕೈ ನೋವು, ಸುಸ್ತು, ತೀವ್ರ ಬೆನ್ನುನೋವು ಕೂಡ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿದೆ.
ಜಿಲ್ಲೆಯ ಜನರು ಆರಂಭದಲ್ಲೇ ರೋಗ ಲಕ್ಷಣಗಳು ಕಂಡು ಬಂದಾಗ ಪರೀಕ್ಷಿಸದೆ, ಅನಾರೋಗ್ಯ ಹೆಚ್ಚಾಗಿ ತಡೆಯಲು ಆಗದೇ ಇದ್ದಾಗ ಆಸ್ಪತ್ರೆಗೆ ಬರುತ್ತಿದ್ದಾರೆ. ಇನ್ನೂ ಕೆಲವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ, ಖಾಸಗಿ ಕ್ಲಿನಿಕ್, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅದು ಗುಣವಾಗದೇ ಇದ್ದಾಗ, ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದರಿಂದಾಗಿಯೂ ಸೋಂಕಿತರು ಗಂಭೀರ ಸ್ಥಿತಿಗೆ ಹೋಗುವ ಪ್ರಮಾಣ ಹೆಚ್ಚುತ್ತದೆ ಎಂದು ಹೇಳುತ್ತಾರೆ ವೈದ್ಯರು.
'ಜನರು ರೋಗ ಲಕ್ಷಣ ಕಂಡು ಬಂದ ತಕ್ಷಣ ಕೋವಿಡ್ ಇರಬಹುದೇ ಎಂಬ ಭಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಸ್ಥಳೀಯವಾಗಿ ಇಲ್ಲವೇ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳಲ್ಲಿ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲೂ ಕಡಿಮೆಯಾಗದೇ ಇದ್ದಾಗ ನಮ್ಮ ಬಳಿ ಬರುತ್ತಿದ್ದಾರೆ. ಇದರಿಂದಾಗಿ ಸಮಸ್ಯೆಯಾಗುತ್ತಿದೆ' ಎಂದು ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ.ಮಹೇಶ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ಯುವಕ, ಮಧ್ಯವಯಸ್ಕರೇ ಹೆಚ್ಚು: ಮೃತಪಟ್ಟವರಲ್ಲಿ 30ರಿಂದ 45 ವರ್ಷ ವಯಸ್ಸಿನವರು ಹೆಚ್ಚಿದ್ದಾರೆ. 60 ವರ್ಷಕ್ಕಿಂತ ಮೇಲಿನವರು ಕಡಿಮೆ ಇದ್ದಾರೆ. ಕೋವಿಡ್ ಲಸಿಕೆ ಹಾಕಿಸಿಕೊಂಡ ಕಾರಣಕ್ಕೆ ಹಿರಿಯರಲ್ಲಿ ಸೋಂಕು ದೃಢಪಟ್ಟ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವೈದ್ಯರು.
ಅನಾರೋಗ್ಯ ಕಂಡು ಬಂದ ತಕ್ಷಣ ಪರೀಕ್ಷಿಸಿ: 'ಈ ಬಾರಿ ಸೋಂಕಿತರಲ್ಲಿ ಕಂಡು ಬರುತ್ತಿರುವ ರೋಗ ಲಕ್ಷಣಗಳಲ್ಲಿ ವ್ಯತ್ಯಾಸಗಳಿವೆ. ಹಾಗಾಗಿ, ಅನಾರೋಗ್ಯ ಕಂಡು ಬಂದ ತಕ್ಷಣ ಜನರು ಕೋವಿಡ್ ಪರೀಕ್ಷೆಗೆ ಒಳಪಡಬೇಕು. ದೃಢಪಟ್ಟರೆ ಭಯ ಪಡುವಂತಹದ್ದೇನಿಲ್ಲ. ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ಪಡೆದರೆ ಗುಣವಾಗುತ್ತದೆ. ಕೊನೆಯ ಹಂತದಲ್ಲಿ ಬಂದರೆ, ಸೋಂಕಿನ ತೀವ್ರತೆ ಹೆಚ್ಚಿರುವುದರಿಂದ ಗುಣವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ' ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

