ಚಾಮರಾಜನಗರ: ಸಾರ್ವಜನಿಕರ ತೀವ್ರ ವಿರೋಧ ಹಾಗೂ ಸುಪ್ರೀಂ ಕೋರ್ಟ್ ಆದೇಶಕ್ಕೆ ಮಣಿದ ನಗರಸಭೆ ಕೊನೆಗೂ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವಿಗೆ ಮುಂದಾಗಿದೆ.
ಕಾರ್ಯಾಚರಣೆಯ ಮೊದಲ ಭಾಗವಾಗಿ, ನಗರಸಭೆ ಪೌರಾಯುಕ್ತ ಪರಶುರಾಮ್ ಎಂ.ಛಲವಾದಿ ನೇತೃತ್ವದ ಅಧಿಕಾರಿಗಳ ತಂಡ ನಗರದ ಜಿಲ್ಲಾ ನ್ಯಾಯಾಲಯ ರಸ್ತೆ ಬದಿಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ಭಾನುವಾರ ತೆರವುಗೊಳಿಸಿತು.
ಜೆಎಸ್‌ಎಸ್ ಆಸ್ಪತ್ರೆಯ ಕಾಂಪೌಂಡ್ ಹಾಗೂ ಸರ್ಕಾರಿ ಕಚೇರಿಗಳ ಗೋಡೆಗೆ ಹೊಂದಿಕೊಂಡಂತಿದ್ದ ಹಲವು ಫಾಸ್ಟ್‌ಫುಡ್ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಪಾದಚಾರಿ ಮಾರ್ಗದಲ್ಲಿ ಕೆಲವು ವ್ಯಾಪಾರಿಗಳು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಮಳಿಗೆಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ.
ತೆರವು ಕಾರ್ಯಾಚರಣೆಗೂ ಮುನ್ನ, ನಗರಸಭೆ ಆಡಳಿತ ಮೂರು ದಿನಗಳಿಂದ ನಗರದ ಪ್ರಮುಖ ವೃತ್ತ ಹಾಗೂ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ಧ್ವನಿ ವರ್ಧಕಗಳ ಮೂಲಕ ತೆರವು ಕಾರ್ಯಾಚರಣೆಯ ಬಗ್ಗೆ ಸೂಚನೆ ನೀಡಿತ್ತು. ಫುಟ್‌ಪಾತ್ ಒತ್ತುವರಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ರಸ್ತೆಯ ಮೇಲೆ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, ನ್ಯಾಯಾಲಯ ಕೂಡ ಫುಟ್‌ಪಾತ್‌ಗಳ ತೆರವಿಗೆ ಆದೇಶ ನೀಡಿರುವುದರಿಂದ, ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಪ್ರಚಾರ ಮಾಡಲಾಗಿತ್ತು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.
ಎಲ್ಲೆಲ್ಲಿ ಕಾರ್ಯಾಚರಣೆ: ಜಿಲ್ಲಾ ನ್ಯಾಯಾಲಯ ರಸ್ತೆಯ ಫುಟ್‌ಪಾತ್ ತೆರವು ಪೂರ್ಣಗೊಂಡ ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿಗಿರುವ ರಸ್ತೆ, ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತ, ಗುಂಡ್ಲುಪೇಟೆ ಸರ್ಕಲ್ ಸೇರಿ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗುವುದು ಎಂದು ನಗರಸಭೆಯ ಪರಿಸರ ವಿಭಾಗದ ಎಂಜಿನಿಯರ್ ರೂಪಾ ಮಾಹಿತಿ ನೀಡಿದರು.
ಬೀದಿಬದಿ ವ್ಯಾಪಾರ ಮಾಡಲು 1,000ಕ್ಕೂ ಹೆಚ್ಚು ವ್ಯಾಪಾರಿಗಳು ನಗರಸಭೆಯಿಂದ ಗುರುತಿನ ಚೀಟಿ ಪಡೆದಿದ್ದಾರೆ. ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವರ ಸಂಖ್ಯೆ ಬಹಳಷ್ಟಿದ್ದು ಪರಿಶೀಲನೆ ನಡೆಯುತ್ತಿದೆ. ಬೀದಿಬದಿ ವ್ಯಾಪಾರ ಮಾಡಲು ಗುರುತಿನ ಚೀಟಿ ಪಡೆದಿದ್ದರೂ ಫುಟ್‌ಪಾತ್ ಮೇಲೆ ಯಾರೂ ವ್ಯಾಪಾರ ಮಾಡುವಂತಿಲ್ಲ. ರಸ್ತೆಯ ಬದಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗದಂತೆ ಶುಚಿತ್ವ ಕಾಪಾಡಿಕೊಂಡು ವ್ಯಾಪಾರ ಮಾಡಬಹುದು.
ಜಿಲ್ಲಾ ನ್ಯಾಯಾಲಯ ರಸ್ತೆಯ ಒಂದು ಭಾಗದಲ್ಲಿ ಫುಡ್ ಜೋನ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಜಾಗ ಗುರುತಿಸಿಕೊಟ್ಟಿದ್ದು ಅಲ್ಲಿ ಮಾತ್ರ ವ್ಯಾಪಾರ ಮಾಡಬಹುದು. ಮಹದೇಶ್ವರ ಬಡಾವಣೆ ಸೇರಿ ನಗರದ ಹಲವೆಡೆ ಜಾಗ ಗುರುತಿಸಲಾಗುವುದು ಎಂದು ರೂಪಾ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-37-2141325186

