ಚಾಮರಾಜನಗರ: ಮಾರುಕಟ್ಟೆಯಲ್ಲಿ ತರಕಾರಿ ದರಗಳು ಮತ್ತೆ ಗಗನಮುಖಿಯಾಗಿವೆ. ಬೀನ್ಸ್, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ದರ ಹೆಚ್ಚಾಗಿದ್ದು ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟಿದೆ.
ಬೀನ್ಸ್ ದುಬಾರಿ; ಕಳೆದ ವಾರ ಕೆ.ಜಿಗೆ ₹ 80 ಇದ್ದ ಬೀನ್ಸ್ ದರ ಪ್ರಸ್ತುತ ದಿಢೀರ್ ಏರಿಕೆ ಕಂಡಿದ್ದು ₹ 120ಕ್ಕೆ ತಲುಪಿದೆ.
ಸಾಲು ಹಬ್ಬಗಳು, ಧಾರ್ಮಿಕ ಉತ್ಸವ, ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಬೀನ್ಸ್‌ಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ದರ ಗಗನಕ್ಕೇರಿದೆ ಎನ್ನುತ್ತಾರೆ ನಗರದ ತರಕಾರಿ ವ್ಯಾಪಾರಿ ಕೃಷ್ಣ.
ಮಳೆ ಕೊರತೆ, ಇಳುವರಿ ಕುಸಿತದಿಂದಾಗಿ ಮಾರುಕಟ್ಟೆಗೆ ಬೇಡಿಕೆಯಷ್ಟು ಬೀನ್ಸ್ ಪೂರೈಕೆಯಾಗುತ್ತಿಲ್ಲ. ಇನ್ನೂ ಹೊಸ ಬೀನ್ಸ್ ಮಾರುಕಟ್ಟೆ ಪ್ರವೇಶಿಸದ ಹಿನ್ನೆಲೆಯಲ್ಲಿ ದುಬಾರಿಯಾಗಿದೆ. ದೀಪಾವಳಿ ಹೊತ್ತಿಗೆ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ಅವರು.
ಇಳಿಯದ ಈರುಳ್ಳಿ: ಮಾರುಕಟ್ಟೆಯಲ್ಲಿ ಹೆಚ್ಚಾಗಿರುವ ಈರುಳ್ಳಿ ದರವೂ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹60 ರಿಂದ 70ರವರೆಗೆ ಮಾರಾಟವಾಗುತ್ತಿದೆ. ಸಗಟು ರೂಪದಲ್ಲಿ ಖರೀದಿಸಿದರೆ ₹ 100 ಎರಡು ಕೆಜಿಯಷ್ಟು ದೊರೆಯುತ್ತಿದೆ. ಜಿಲ್ಲೆಯ ಅಗತ್ಯತೆಯ ಬಹುಪಾಲು ಈರುಳ್ಳಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿದ್ದು ಬೇಡಿಕೆಯಷ್ಟು ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಟೊಮೆಟೊ ದರ ಸ್ಥಿರ: ಕಳೆದ ಎರಡು ವಾರಗಳಿಂದ ಟೊಮೆಟೊ ದರ ಸ್ಥಿರವಾಗಿದ್ದು ಕೆ.ಜಿಗೆ ₹40 ರಿಂದ ₹50ವರೆಗೆ ಇದೆ. ಗೃಹ ಬಳಕೆ ಹಾಗೂ ಹೋಟೆಲ್‌ಗಳಿಂದ ಭಾರಿ ಬೇಡಿಕೆ ಇರುವುದರಿಂದ ಟೊಮೆಟೊ ದರ ಇಳಿಕೆಯಾಗುತ್ತಿಲ್ಲ. ಕುಸಿತ ಕಂಡಿದ್ದ ಆಲೂಗಡ್ಡೆ ಬೆಲೆಯೂ ಏರುಗತಿಯಲ್ಲಿದ್ದು ಕೆ.ಜಿಗೆ ₹40 ರಿಂದ ₹50ಕ್ಕೆ ಹೆಚ್ಚಾಗಿದೆ.
ಹೂವಿನ ದರ ಇಳಿಕೆ: ನವರಾತ್ರಿ ಸಂದರ್ಭ ಗಗನಕ್ಕೇರಿದ್ದ ಹೂವಿನ ದರ ಪಾತಾಳಕ್ಕೆ ಕುಸಿದಿದೆ. ಹಬ್ಬದಲ್ಲಿ ಕೆ.ಜಿಗೆ ₹80 ರಿಂದ ₹100 ಚೆಂಡು ಹೂ ಪ್ರಸ್ತುತ ₹10 ರಿಂದ 20ಕ್ಕೆ ಇಳಿದಿದೆ. ಸೇವಂತಿಗೆ ಕೆ.ಜಿಗೆ ₹20 ರಿಂದ ₹30, ಕನಕಾಂಬರ ₹600 ರಿಂದ ₹800 ಸಣ್ಣ ಮಲ್ಲಿಗೆ ₹200, ಮಲ್ಲಿಗೆ ₹400, ಗುಲಾಬಿ ₹100, ಸುಗಂಧರಾಜ ₹60 ರಿಂದ ₹80 ಇದೆ. ದೀಪಾವಳಿಯ ಹಬ್ಬದ ಸಂದರ್ಭ ಹೂಗಳ ದರ ಮತ್ತೆ ಹೆಚ್ಚಾಗಬಹುದು ಎನ್ನುತ್ತಾರೆ ಹೂವಿನ ವ್ಯಾಪಾರಿ ರವಿ.
ದೀಪಾವಳಿಗೆ ದರ ಹೆಚ್ಚಳ
ಮಾರುಕಟ್ಟೆಗೆ ಮೋಸಂಬಿ, ಕಿತ್ತಳೆ ಹಣ್ಣು ಹೆಚ್ಚಾಗಿ ಬಂದಿದ್ದು ಮೋಸಂಬಿ ಕೆ.ಜಿಗೆ ₹50, ಕಿತ್ತಳೆ ಕೆ.ಜಿಗೆ ₹60 ರಿಂದ ₹70 ದರ ಇದೆ. ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹90 ರಿಂದ ₹100, ಪಚ್ಚಬಾಳೆ ₹40 ರಿಂದ ₹50, ಸೇಬು ₹140 ರಿಂದ ₹160, ದಾಳಿಂಬೆ ₹160, ಸಪೋಟ ₹100 ಇದ್ದು ದೀಪಾವಳಿಗೆ ದರ ಹೆಚ್ಚಾಗಬಹುದು.
261103-37-38223016

