ಚನ್ನಗಿರಿ: ಅಡಿಕೆ ನಾಡೆಂದು ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನಲ್ಲಿ ಐದಾರು ದಿನಗಳಿಂದ ಅಡಿಕೆ ಕೊಯ್ಲು ಭರದಿಂದ ಸಾಗಿದೆ. ಅಡಿಕೆ ದರವೂ ಕೊಂಚ ಏರಿಕೆ ಕಂಡಿದ್ದು, ಸಣ್ಣ ಹಿಡುವಳಿದಾರರು ಧಾವಂತದಿಂದ ಕೊಯ್ಲು ಶುರು ಮಾಡಿದ್ದಾರೆ. ಮುಂದಿನ ಮೂರು ತಿಂಗಳವರೆಗೆ ಅಡಿಕೆ ಕೊಯ್ಲು ಪ್ರಕ್ರಿಯೆ ನಡೆಯಲಿದೆ.
ಕೆಲ ದಿನಗಳಿಂದ ಮುಂಗಾರು ಮಳೆಯು ಅಡಿಕೆ ಕೊಯ್ಲಿಗೆ ಕೊಂಚ ಅಡ್ಡಿ ಉಂಟುಮಾಡಿತ್ತು. ಭಾನುವಾರದಿಂದ ವಿರಾಮ ನೀಡಿತ್ತು. ಆದರೆ ಮಂಗಳವಾರ, ಬುಧವಾರ ಮತ್ತೆ ಮಳೆ ಆವರಿಸಿದ್ದು, ಕೊಯ್ಲಿಗೆ ತಡೆಯಾಗಿದೆ. ಪ್ರಸ್ತುತ ಅಡಿಕೆ ಕ್ವಿಂಟಲ್‌ಗೆ ಕನಿಷ್ಠ ₹46,099 ಗರಿಷ್ಠ ₹54,299 ಹಾಗೂ ಸರಾಸರಿ ₹52,928ಗೆ ಮಾರಾಟವಾಗುತ್ತಿದೆ.
ಒಂದು ವಾರದಿಂದಲೂ ದರ ನಿಧಾನವಾಗಿ ಏರಿಕೆ ಕಾಣುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಉತ್ಸಾಹ ಮೂಡಿಸಿದೆ. ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿ ಕಾಯಿಗಳು ಉದುರಿದ್ದರಿಂದ ಒಂದಿಷ್ಟು ಇಳುವರಿ ಕುಸಿತವಾಗಿದೆ. ಆದರೂ ಎಕರೆಗೆ ಕನಿಷ್ಠ 8ರಿಂದ ಗರಿಷ್ಠ 12 ಕ್ವಿಂಟಲ್‌ವರೆಗೆ ಇಳುವರಿ ಬರುವ ನಿರೀಕ್ಷೆ ಇದೆ. ಈಗಿರುವ ದರ ಮುಂದಿನ ಒಂದೆರಡು ತಿಂಗಳು ಸ್ಥಿರವಾಗಿದ್ದರೆ ಹೆಚ್ಚಿನ ಆದಾಯ ಸಿಗಬಹುದು ಎನ್ನುತ್ತಾರೆ ಮಾವಿನಕಟ್ಟೆ ಗ್ರಾಮದ ಅಡಿಕೆ ಬೆಳೆಗಾರ ಪುನೀತ್.
15 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ 25,000 ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ ಈಗ 39,000 ಹೆಕ್ಟೇರ್‌ಗೆ ವಿಸ್ತರಣೆಗೊಂಡಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.
ಶ್ರೀಕಾಂತ್, ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದರಿಂದ ಅಡಿಕೆ ಇಳುವರಿ ಕಡಿಮೆಯಾಗಿದ್ದು, ಗರಿಷ್ಠ 12 ಕ್ವಿಂಟಲ್‌ವರೆಗೆ ಇಳುವರಿ ಬಂದಿದೆ. ಕಳೆದ ಸಾಲಿನಲ್ಲಿ 14 ಕ್ವಿಂಟಲ್‌ವರೆಗೆ ಸಿಕ್ಕಿತ್ತು. ಹದಿನೈದು ದಿನಗಳಿಂದ ಅಡಿಕೆ ಬೆಲೆ ಏರಿಕೆ ಕಾಣುತ್ತಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-43-1824405199

