Dailyhunt Logo
  • Light mode
    Follow system
    Dark mode
    • Play Story
    • App Story
ಚನ್ನಪಟ್ಟಣ: ತಹಶೀಲ್ದಾರ್‌ ಮೇಲೆ ಹಲ್ಲೆ, ₹10 ಲಕ್ಷಕ್ಕೆ ಬ್ಲ್ಯಾಕ್‌ಮೇಲ್

ಚನ್ನಪಟ್ಟಣ: ತಹಶೀಲ್ದಾರ್‌ ಮೇಲೆ ಹಲ್ಲೆ, ₹10 ಲಕ್ಷಕ್ಕೆ ಬ್ಲ್ಯಾಕ್‌ಮೇಲ್

ನ್ನಪಟ್ಟಣ (ರಾಮನಗರ): ಇಲ್ಲಿನ ಕುವೆಂಪು ನಗರದಲ್ಲಿರುವ ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರ ಸರ್ಕಾರಿ ವಸತಿ ಗೃಹಕ್ಕೆ ವಿಡಿಯೊ ನೆಪದಲ್ಲಿ ರಾತ್ರಿ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದಿದ್ದ ರೌಡಿ ಶೀಟರ್‌, ತಹಶೀಲ್ದಾರ್‌ ಪ್ರಜ್ಞೆ ತಪ್ಪಿಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾನೆ.

ಬಳಿಕ ಬೆತ್ತಲೆ ವಿಡಿಯೊ ಚಿತ್ರೀಕರಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ಜೂನ್ 28ರಂದು ನಡೆದಿರುವ ಘಟನೆ ಕುರಿತು ಗಿರೀಶ್ ಅವರು ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಗೆ ಜುಲೈ 1ರಂದು ದೂರು ಕೊಟ್ಟಿದ್ದಾರೆ. ಆ ಮೇರೆಗೆ ಬೆಂಗಳೂರಿನ ಅನುಷ್ ಅಲಿಯಾಸ್ ಅನುಷ್ ಶಿವಪ್ಪ, ಶೋಭರಾಜ್ ಹಾಗೂ ನವೀನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅನುಷ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಡೆದಿದ್ದೇನು?: ಗಿರೀಶ್ ಅವರು ಮೈಸೂರಿನಲ್ಲಿ ತಹಶೀಲ್ದಾರ್ ಆಗಿದ್ದಾಗ ಅನುಷ್ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ. ತಾನು ರಾಷ್ಟ್ರೀಯ ಶಿವಶಕ್ತಿ ಸೇನಾ ಪಡೆ ನಡೆಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಚನ್ನಪಟ್ಟಣಕ್ಕೆ ವರ್ಗಾವಣೆಯಾದ ಬಳಿಕ ಮನೆಗೆ ಬಂದಿದ್ದ ಆತ, ತಮ್ಮ ಸಮಾಜಮುಖಿ ಕೆಲಸಗಳ ಕುರಿತು ಒಂದು ವಿಡಿಯೊ ಮಾಡಿಕೊಡುವಂತೆ ಕೇಳಿದ್ದ.

ಜೂನ್ 28ರಂದು ರಾತ್ರಿ 11 ಗಂಟೆಗೆ ಗಿರೀಶ್ ಅವರಿಗೆ ಸುಮಾರಿಗೆ ಕರೆ ಮಾಡಿದ್ದ ಅನುಷ್, ಮೈಸೂರಿನಿಂದ 'ಬೆಂಗಳೂರಿಗೆ ಹೋಗುತ್ತಿರುವ ನಾನು ನಿಮ್ಮನ್ನು ಭೇಟಿಯಾಗುವೆ. ಈ ವೇಳೆ ವಿಡಿಯೊ ಮಾಡಿಕೊಡಬೇಕು' ಎಂದಿದ್ದ. ರಾತ್ರಿ 2 ಗಂಟೆ ಸುಮಾರಿಗೆ ಸಹಚರರಾದ ಶೋಭರಾಜ್ ಹಾಗೂ ನವೀನ್ ಜೊತೆ ಮನೆಗೆ ಬಂದಿದ್ದ.

ತಮ್ಮೊಂದಿಗೆ ಮದ್ಯದ ಬಾಟಲಿ ತಂದಿದ್ದ ಮೂವರು, ಮನೆಯಲ್ಲೇ ಮದ್ಯ ಸೇವಿಸಿ, ಗಿರೀಶ್ ಅವರಿಗೆ ಕಿತ್ತಳೆ ಹಣ್ಣಿನ ಜ್ಯೂಸ್ ಕೊಟ್ಟಿದ್ದರು. ಅದನ್ನು ಕುಡಿದ ಕೆಲ ಹೊತ್ತಿನಲ್ಲೇ ಗಿರೀಶ್ ಅವರಿಗೆ ತಲೆ ಸುತ್ತಿದಂತಾಗಿ ಪ್ರಜ್ಞೆ ತಪ್ಪಿದ್ದರು. ಬೆಳಿಗ್ಗೆ 5 ಗಂಟೆಗೆ ಅವರಿಗೆ ಎಚ್ಚರವಾದಾಗ ಮೈ ಮೇಲೆ ಬಟ್ಟೆಗಳಿರಲಿಲ್ಲ. ಇನ್ನೂ ನಿದ್ರೆ ಮಂಪರಿನಲ್ಲಿದ್ದ ಅವರ ಕೆನ್ನೆಗೆ ಅನುಷ್ ಹೊಡೆಯುತ್ತಿದ್ದ ಎಂದು ಗಿರೀಶ್ ದೂರಿನಲ್ಲಿ ತಿಳಿಸಿದ್ದಾರೆ.

ಚಿನ್ನ ಕಸಿದುಕೊಂಡರು: ಗಿರೀಶ್ ಅವರ ಬೆರಳಿನಲ್ಲಿದ್ದ 8 ಗ್ರಾಂ ಚಿನ್ನದ ಉಂಗುರು, ಕತ್ತಿನಲ್ಲಿದ್ದ 14 ಗ್ರಾಂ ಚಿನ್ನದ ಸರ ಹಾಗೂ ಸೊಂಟದಲ್ಲಿದ್ದ ಬೆಳ್ಳಿಯ ಉಡುದಾರವನ್ನು ಅರೋಪಿಗಳು ಕಸಿದುಕೊಂಡಿದ್ದರು. ಈ ವೇಳೆ ಅನುಷ್, ನನಗೆ ಚೀಟಿ ವ್ಯವಹಾರದಲ್ಲಿ ನಷ್ಟವಾಗಿದ್ದು ₹10 ಲಕ್ಷ ಬೇಕಿದೆ. ಮನೆಯ ಬೀರುವಿನ ಕೀ ಕೊಡು ಎಂದು ಬೆದರಿಸಿದ್ದ.

ಕೀಯನ್ನು ಮನೆಯವರು ತೆಗೆದುಕೊಂಡು ಹೋಗಿದ್ದಾರೆ ಎಂದು ಗಿರೀಶ್ ಹೇಳಿದಾಗ, ಮತ್ತೆ ಹಲ್ಲೆ ನಡೆಸಿದ್ದ. ಈ ವೇಳೆ ಶೋಭರಾಜ್ ಮತ್ತು ನವೀನ್ ಇಬ್ಬರೂ ಗಿರೀಶ್ ಅವರನ್ನು ಹಾಸಿಗೆ ಮೇಲೆ ಮಲಗಿಸಿಕೊಂಡು ಕೀ ಕೊಡೆದಿದ್ದರೆ ಕೊಲೆ ಮಾಡುತ್ತೇವೆ ಎಂದು ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸಲು ಯತ್ನಿಸಿದ್ದರು. ಅಲ್ಲದೆ ಗಿರೀಶ್ ಅವರ ನಗ್ನ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು.

ಬೆಳಿಗ್ಗೆ 6 ಗಂಟೆಯವರೆಗೆ ಗಿರೀಶ್ ಅವರನ್ನು ಗೃಹಬಂಧನದಲ್ಲಿಟ್ಟು ದೈಹಿಕ ಹಿಂಸೆ ನೀಡಿದ್ದ ಮೂವರೂ, ನಂತರ ನನ್ನ ಸಾವಿಗೆ ನಾನೇ ಕಾರಣ ಎಂದು ಗಿರೀಶ್ ಅವರಿಂದ ಪತ್ರ ಬರೆಯಿಸಿಕೊಂಡಿದ್ದರು. ನಾಳೆಯೊಳಗೆ ₹10 ಲಕ್ಷ ನೀಡದಿದ್ದರೆ ವಿಡಿಯೊಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದರು.

ಆರೋಪಿಗಳು ಹೋಗುವಾಗ ಗಿರೀಶ್ ಅವರಿಂದ ಬರೆಯಿಸಿಕೊಂಡಿದ್ದ ಪತ್ರವನ್ನು ಹೊರಗಡೆ ಹರಿದು ಹಾಕಿದ್ದರು. ಕೆಲ ಹೊತ್ತಿನ ನಂತರ ಕರೆ ಮಾಡಿ, ಹಣ ಕೊಡದಿದ್ದರೆ ವಿಡಿಯೊ ಬಹಿರಂಗಗೊಳಿಸುವುದಾಗಿ ಬೆದರಿಸಿದ್ದರು. ನಂತರ ನಾನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ, ಠಾಣೆಗೆ ಬಂದು ಮೂವರ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಗಿರೀಶ್ ದೂರಿನಲ್ಲಿ ತಿಳಿಸಿದ್ದಾರೆ.

ಜಿಮ್ ತರಬೇತುದಾರನಾಗಿದ್ದ ಆರೋಪಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾದ ಆರೋಪಿ ಅನುಷ್ ಜಿಮ್ ತರಬೇತುದಾರನಾಗಿದ್ದ. ಮೈಸೂರಿನಲ್ಲಿ ನೆಲೆಸಿದ್ದ 33 ವರ್ಷದ ಈತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿ ತೆರೆಯಲಾಗಿದೆ. ರಾಷ್ಟ್ರೀಯ ಶಿವಶಕ್ತಿ ಸೇನಾ ಪಡೆ ಸಂಸ್ಥಾಪಕ ರಾಜ್ಯಾಧ್ಯಕ್ಷನಾಗಿದ್ದ ಈತನ ವಿರುದ್ಧ ಹೊಡೆದಾಟ ಸೇರಿದಂತೆ ಕೆಲ ಪ್ರಕರಣಗಳು ದಾಖಲಾಗಿವೆ. ಮೈಸೂರಿನಲ್ಲಿ ಗಿರೀಶ್ ಅವರು ತಹಶೀಲ್ದಾರ್ ಆಗಿದ್ದಾಗ ಪರಿಚಯವಾಗಿದ್ದ. ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಈತ ತಹಶೀಲ್ದಾರ್ ಸ್ನೇಹದ ಸಲುಗೆಯನ್ನು ದುರುಪಯೋಗ ಮಾಡಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಮುಳುವಾಯತೆ ಜನಪ್ರಿಯತೆ?

2017ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾದ ಗಿರೀಶ್ ಅವರು ತಾವು ಕೆಲಸ ಮಾಡಿರುವ ಶಿವಮೊಗ್ಗ, ದಾವಣಗೆರೆ, ಮೈಸೂರು ಸೇರಿದಂತೆ ಈಗಿನ ಚನ್ನಪಟ್ಟಣದಲ್ಲೂ ತಮ್ಮ ಕರ್ತವ್ಯ ಮತ್ತು ಕರ್ತವ್ಯೇತರ ಸೇವಾ ಕಾರ್ಯಗಳಿಂದಾಗಿ ಜನಪ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ಅವರು ವಿಡಿಯೊ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ತಾಲ್ಲೂಕಿನಲ್ಲಿ ಅವರು ಆರಂಭಿಸಿದ ಸರ್ಕಾರಿ ಶಾಲೆಗೆ ಬಣ್ಣ ಬಳಿಯುವ ಅಭಿಯಾನ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನಡೆಸಿದ್ದ ಕಾರ್ಯಾಗಾರಗಳು ಗಮನ ಸೆಳೆದಿದ್ದವು. ಇದೇ ಕಾರಣಕ್ಕೆ ಅವರು ನಾಗರಿಕರು ಸೇರಿದಂತೆ ಸಂಘ-ಸಂಸ್ಥೆ, ಸಂಘಟನೆಗಳಿಗೂ ಹತ್ತಿರವಾಗಿದ್ದ ಅವರು, ಸಮಾಜಮುಖಿ ಕೆಲಸಗಳಿಂದಾಗಿ ಜನಪ್ರಿಯವಾಗಿದ್ದರು. ಸದ್ಯದ ಪ್ರಕರಣವು, ಗಿರೀಶ್ ಅವರಿಗೆ ಜನಪ್ರಿಯತೆಯೇ ಮುಳುವಾಗಿರುವಂತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani