ಚನ್ನರಾಯಪಟ್ಟಣ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಪ್ರಸನ್ನ ಗಣಪತಿ ಅಮೃತ ಮಹೋತ್ಸವದ ಅಂಗವಾಗಿ ಅಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಲಾತಂಡಗಳು ನಾಡಿನ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಬಿಂಬಿಸಿದವು.
ಕಲಾವಿದ ರವೀಂದ್ರ, ತಯಾರಿಸಿದ ಮಂತ್ರಾಲಯದ ಬೃಂದಾವನದ ಮಾದರಿಯ ಮಂಟಪದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಯಿತು. ಮುಂಭಾಗದಲ್ಲಿ 74 ಗಣಪತಿಯನ್ನು ಇಡಲಾಗಿತ್ತು. 50 ದಿನಗಳಿಂದ ಪ್ರತಿಷ್ಠಾಪಿಸಿದ್ದ ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಸೋಮವಾರ ಬೆಳಿಗ್ಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.
ಮಂಗಳವಾರ ತೆಪ್ಪೋತ್ಸವದ ನಂತರ ಅಮಾನಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. 1951 ರಿಂದ ಪಟ್ಟಣದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಮೈಸೂರಿನಿಂದ ಆಗಮಿಸುವ 7 ವಿದ್ವಾಂಸರು ಮಂಗಳವಾರ ಸಂಜೆ ಪೂಜೆ ಸಲ್ಲಿಸಿ ಗಂಗಾರತಿ ನೆರವೇರಿಸಿದ ಬಳಿಕ ಕ್ರೈನ್ ಮೂಲಕ ಅಮಾನಿಕೆರೆಯಲ್ಲಿ ಗಣಪತಿಯನ್ನು ವಿಸರ್ಜಿಸಲಾಗುವುದು ಎಂದು ಪ್ರಸನ್ನಗಣಪತಿಸೇವಾಸಮಿತಿಯ ಅಧ್ಯಕ್ಷ ಸಿ.ಎನ್.ಅಶೋಕ್ ತಿಳಿಸಿದರು.
ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್, ಗೌರವಾಧ್ಯಕ್ಷ ಸಿ.ಕೆ. ಕೃಷ್ಣ, ಉಪಾಧ್ಯಕ್ಷ ನಂಜುಂಡ ಮೈಮ್, ಕಾರ್ಯದರ್ಶಿ ಸಿ.ವೈ. ಸತ್ಯನಾರಾಯಣ, ಖಜಾಂಚಿ ಸಿ.ಎಸ್. ಮನೋಹರ್, ಸಹಕಾರ್ಯದರ್ಶಿ ಮಹದೇವ್, ಸದಸ್ಯರಾದ ಸಿ.ಕೆ. ಸುಬ್ರಹ್ಮಣ್ಯ, ಸಿ.ಟಿ. ಕುಮಾರಸ್ವಾಮಿ, ಎಸ್.ಎ. ಗಣೇಶ್, ಸಿ.ಎಂ. ಅರ್ಪಿತಾ, ಸಿ.ಡಿ. ರಾಜಶೇಖರ್, ಸಿ.ಬಿ. ಗಂಗಾಧರ್, ಎ.ವಿ. ಜಯಪಾಲ್, ಪುರಿಮಂಜು ಸೇರಿ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅನಾವರಣ: ಗಣಪತಿ ಮಹೋತ್ಸವದ ಅಂಗವಾಗಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯಕ ರೇವಣ್ಣಸಿದ್ದಪ್ಪ ಫುಲಾರಿ, ಕೀರ್ತನಾ, ಚಂದು, ಪುಟ್ಟಗಾಯಕಿ ಸಾನಿಧ್ಯ ಹಾಡಿದರೆ, ಸ್ವಾತಿಕ್ ಶೆಟ್ಟಿನೃತ್ಯ ಮಾಡಿದರು. ಚಲನಚಿತ್ರಕಲಾವಿದರಾದ ರಕ್ಷಕ್ ಬುಲೆಟ್, ಅಮೃತಾರಾಜ್, ಪ್ರೇಮದ ಊರಲ್ಲಿ ಚಿತ್ರದ ನಾಯಕನಟ ಶ್ರೀರಾಮು, ನಿರ್ದೇಶಕ ಮನೋಜ್‍ಕುಮಾರ್, ವಸ್ತ್ರ ವಿನ್ಯಾಸಕ ನಾಗರಾಜು ಅವರನ್ನು ಸನ್ಮಾನಿಸಲಾಯಿತು. ನಂತರ ಧಾರವಾಡ ತಂಡದವರು ಮಲ್ಲಕಂಬ ಪ್ರದರ್ಶನ ನಡೆಸಿಕೊಟ್ಟರು. ಚಿತ್ತಾಕರ್ಷಕ ಪಟಾಕಿ ಪ್ರದರ್ಶನ ಗಮನಸೆಳೆಯಿತು. ಶಾಸಕ ಸಿ.ಎನ್. ಬಾಲಕೃಷ್ಣ, ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್, ಕಾಂಗ್ರೆಸ್ ಪಕ್ಷದ ನಾಯಕಿ ಗೀತಾಗೋಪಾಲಸ್ವಾಮಿ, ಪ್ರಸನ್ನ ಗಣಪತಿ ಸೇವಾಸಮಿತಿಯ ಅಧ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿದರು. ಇನ್‌ಸ್ಪೆಕ್ಟರ್ ಎಸ್.ಎಂ.ರಘುಪತಿ, ಮುಖ್ಯ ಅರ್ಚಕ ಬಾಲಕೃಷ್ಣ ಭಟ್, ಸಮಾಜಸೇವಕರಾದ ವೆಂಕಟೇಶ್, ದೇವರಾಜು, ಯೋಗೀಶ್ ಭಾಗವಹಿಸಿದ್ದರು.
261103-36-2030349238

