ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಒಬ್ಬ ಸ್ವಯಂಸೇವಕ ಎಂಬುದನ್ನು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಬಾಲ್ಯ ಸ್ವಯಂಸೇವಕ. ಅಂದರೆ, ಬಾಲ್ಯಾವಸ್ಥೆಯಲ್ಲೇ ಸಂಘದ ಶಾಖೆಗೆ ಹೋಗಲು ಪ್ರಾರಂಭಿಸಿದೆ. ಅದು ಬಿಡಿಸಲಾಗದ ಬಂಧ. ನನ್ನ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಸಂಘದ ಪ್ರಭಾವ ಅಗಾಧ.
ಸಂಘದ ಶಾಖೆಯ ಮೂಲಕ ಅನೇಕ ಉನ್ನತ ಚಿಂತನೆಯ ವ್ಯಕ್ತಿಗಳ ಸಹವಾಸ ಸಿಕ್ಕಿದ್ದು ನನ್ನ ಸುಕೃತ; ಸಂಘದ ಮೂಲಕವೇ ಸಮಾಜದ ವಿವಿಧ ಸ್ತರಗಳ ಜನರ ಸಂಪರ್ಕ, ಸಂವಾದದ ಮೂಲಕ ಎಲ್ಲರೊಡನೆ ಸಂಬಂಧ ಪ್ರಾಪ್ತಿಯಾಗಿದೆ. ತುರ್ತುಪರಿಸ್ಥಿತಿಯಲ್ಲಿ ಸಂಘದ ಮೇಲೆ ಎರಡನೇ ಬಾರಿ ನಿಷೇಧಾಜ್ಞೆ ಹೇರಿದಾಗ, ಅದರ ವಿರುದ್ಧ ಹೋರಾಡಿ ಪೊಲೀಸರ ಆತಿಥ್ಯವನ್ನು ಚೆನ್ನಾಗಿಯೇ ಅನುಭವಿಸಿದೆ.
ಕಳೆದ ಹಲವಾರು ತಿಂಗಳುಗಳಿಂದ ನಮ್ಮ ರಾಜ್ಯದಲ್ಲಿ ಸಂಘದ ಬಗ್ಗೆ ಪ್ರಚಾರ ಜೋರಾಗಿಯೇ ನಡೆದಿದೆ. ಸಂಘದಲ್ಲಿ ನಾವು ಪ್ರತಿವರ್ಷ ಆರು ಉತ್ಸವಗಳನ್ನು ನಡೆಸಿಕೊಂಡು ಬರುತ್ತೇವೆ. ಅದರಲ್ಲಿ ಒಂದು 'ವಿಜಯದಶಮಿ ಉತ್ಸವ'. ಸಂಘದ ಸ್ವಯಂಸೇವಕರಿಗೆ ವಿಜಯದಶಮಿಯ ವಿಶೇಷ ಮಹತ್ವವೆಂದರೆ, 1925ರ ವಿಜಯದಶಮಿ ದಿನ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಸ್ಥಾಪನೆಗೊಂಡದ್ದು. ಕಳೆದ ವರ್ಷ 2025ರ ವಿಜಯದಶಮಿಗೆ ಸಂಘ ನೂರು ವರ್ಷದ ಮೈಲಿಗಲ್ಲು ದಾಟಿದೆ.
ಆ ಸಂದರ್ಭದಲ್ಲಿ ರಾಜ್ಯದ ಎಲ್ಲೆಡೆ ಪ್ರತಿವರ್ಷ ನಡೆಸುವಂತೆ ಪಥಸಂಚಲನ ಕಾರ್ಯಕ್ರಮಗಳು ನಡೆದವು. ಎಲ್ಲ ಕಡೆಯೂ ಪಥಸಂಚಲನದ ಸ್ವರೂಪ, ಅದು ಹಾದು ಹೋಗುವ ರಸ್ತೆಗಳು ಮತ್ತು ತೆಗೆದುಕೊಳ್ಳುವ ಅವಧಿ ಈ ಎಲ್ಲದರ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಅನುಮತಿ ಪಡೆದುಕೊಂಡೇ ನಮ್ಮ ಪಥಸಂಚಲನ ಕಾರ್ಯಕ್ರಮ ನಡೆಯುವುದು.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲೂ ನಮ್ಮ ಪಥಸಂಚಲನ ಪ್ರತಿವರ್ಷದ ಸಾಮಾನ್ಯ ಕಾರ್ಯಕ್ರಮದಂತೆ ನಡೆದು ಹೋಗಿಬಿಡುತ್ತಿತ್ತು. ಪ್ರಸ್ತುತ ರಾಜ್ಯದ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಅಪೂರ್ವ ಸಹಕಾರದಿಂದ ಚಿತ್ತಾಪುರದ ಆರ್‌ಎಸ್‌ಎಸ್ ಪಥಸಂಚಲನ ಇಡೀ ರಾಜ್ಯದ ಗಮನ ಸೆಳೆಯಿತು. ಸಾಮಾನ್ಯವಾಗಿ ಸೇರುವ ಸಂಖ್ಯೆಗಿಂತ ಚಿತ್ತಾಪುರದಲ್ಲಿನ ಪಥಸಂಚಲನ ಹಲವು ಪಟ್ಟು ಹೆಚ್ಚು ಸ್ವಯಂಸೇವಕರನ್ನು ಆಕರ್ಷಿಸಿತ್ತು.
ಇದೀಗ ಆರ್‌ಎಸ್‌ಎಸ್ ನೋಂದಣಿಯಾಗಬೇಕು ಎಂದು ಹೇಳುತ್ತಾ, ನೋಂದಣಿಯಾಗದೆ ಸಂಘ ಚಟುವಟಿಕೆ ನಡೆಸುವುದರ ಔಚಿತ್ಯ ಕುರಿತು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಮುಂದೆ ನಿಂತು ನೋಂದಣಿ ಮಾಡಿಸುವುದಾಗಿ ಘೋಷಿಸಿದ್ದಾರೆ.
ಕಳೆದ ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ನಾನು ಪ್ರಿಯಾಂಕ್ ಖರ್ಗೆ ಅವರ ಪಕ್ಕ ಕುಳಿತು ಅವರಿಗೆ ಸಂಘದ ಬಗ್ಗೆ ಇರುವ ಅಸಮಾಧಾನ ಅಥವಾ ತೀವ್ರ ಕೋಪದ ಕಾರಣ ಏನು ಎಂದು ಕೇಳಿದ್ದೆ. ಅವರು ನನಗೆ ಉತ್ತರ ನೀಡುತ್ತಿರುವ ಸಮಯದಲ್ಲಿಯೇ ಯಾರೋ ಮಧ್ಯಪ್ರವೇಶಿಸಿದಾಗ ನಮ್ಮಿಬ್ಬರ ಸಂಭಾಷಣೆ ಅಲ್ಲಿಗೆ ನಿಂತು ಹೋಯಿತು. ಇದೀಗ ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆ ಅಲ್ಲ ಎಂಬ ನೆಪವೊಡ್ಡಿ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಅನುಭವದ ಮತ್ತು ಅಧ್ಯಯನದ ಕೆಲವು ಅನಿಸಿಕೆಗಳನ್ನು ಮುಂದಿಡಲು ಬಯಸುತ್ತೇನೆ.
ಸಂಘದ ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದನ್ನು ಸೇರಲು ಯಾರನ್ನೂ ಬಲವಂತಪಡಿಸುವುದಿಲ್ಲ. ಸ್ವಯಂಪ್ರೇರಣೆಯಿಂದ, ಸ್ವಯಂಸ್ಫೂರ್ತಿಯಿಂದ ಸಂಘಕ್ಕೆ ಸದಸ್ಯರಾಗಬಹುದು, ನಂತರ ಕಾರ್ಯಕರ್ತರಾಗಿ ಬೆಳೆಯಬಹುದು. ಸಂಘ ಸೇರಲು ಪ್ರವೇಶ ಶುಲ್ಕವಿಲ್ಲ. ಹೀಗಾಗಿ ಹೆಸರು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
ಸಂಘದಲ್ಲಿ ನಮ್ಮೆಲ್ಲರ ಗುರುವನ್ನಾಗಿ ಸ್ವೀಕರಿಸಿರುವುದು ಹಿಂದೂ ಧರ್ಮದಲ್ಲಿ ವಿಶಿಷ್ಟ ಗೌರವದಿಂದ ಸ್ಥಾನ ಪಡೆದಿರುವ ಭಗವಾ ಧ್ವಜವನ್ನು. ಸಂಘದ ಶಾಖೆಯಲ್ಲಿ ಭಗವಾ ಧ್ವಜಕ್ಕೆ ಪ್ರಣಾಮ ಸಲ್ಲಿಸುವುದರ ಮೂಲಕ ಭಾರತಾಂಬೆಗೆ, ಭಾರತ ದೇಶಕ್ಕೆ ನಮ್ಮ ಗೌರವ ಸಲ್ಲಿಸುವುದು ಆರಂಭದಿಂದಲೂ ಬೆಳೆದು ಬಂದಿರುವ ಪದ್ಧತಿ. ಸಂಘದಲ್ಲಿ ನಾನು ಬಾಲ್ಯದಿಂದ ಕಂಡಂತೆ ಕಥೆಗಳು, ಆಟಗಳ ಮೂಲಕ ದೇಶಪ್ರೇಮವನ್ನು ಬಿತ್ತುವ ಕಾರ್ಯ ನಿರಂತರವಾಗಿ ನಡೆಯುತ್ತದೆ. ಮಾತೃಭೂಮಿಗೆ ನಮಸ್ಕರಿಸುವ ಮೂಲಕ ಪ್ರಾರಂಭವಾಗುವ ಸಂಘದ ಪ್ರಾರ್ಥನೆ 'ಭಾರತ್ ಮಾತಾ ಕೀ ಜೈ'ನೊಂದಿಗೆ ಕೊನೆಗೊಳ್ಳುತ್ತದೆ.
ಸಂಘದ ಯಾವುದೇ ಶಾಖೆಯಲ್ಲಿ ಯಾವುದೇ ವ್ಯಾವಹಾರಿಕ ಕಾರ್ಯ ನಡೆಯುವುದಿಲ್ಲ. ಸಂಘದ ಶಾಖೆಗಳ ಮೂಲಕ ದೇಶದ ವಿವಿಧ ಆಯಾಮಗಳಲ್ಲಿ ಸದ್ಭಾವನೆಯಿಂದ ಕೆಲಸ ಮಾಡಲು ಬೇಕಾದ ವ್ಯಕ್ತಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೀತಿ ದೇಶದ ಬಗ್ಗೆ ಸದಾ ಒಳ್ಳೆಯದನ್ನು ಚಿಂತಿಸುವ, ಒಳ್ಳೆಯ ಕಾರ್ಯ ಮಾಡುವ ವ್ಯಕ್ತಿಗಳ ಸಮೂಹ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂತಹ ಕಾರ್ಯ ಮಾಡುವುದಕ್ಕೆ ನೋಂದಣಿಯ ಅಗತ್ಯವೇನು ಎನ್ನುವುದು ಇದುವರೆವಿಗೂ ಯಾರಿಗೂ ತಿಳಿದುಬಂದಿಲ್ಲ.
ಸಂಘವನ್ನು ಯಾವ ಇಲಾಖೆಯಡಿ ನೋಂದಣಿ ಮಾಡಿಕೊಳ್ಳಬೇಕು?
ಸಹಕಾರ ಇಲಾಖೆಯಡಿ ಎಂದರೆ, ಆರ್‌ಎಸ್‌ಎಸ್ ಒಂದು ಸಹಕಾರಿ ಸಂಘ ಅಲ್ಲ, ಸಹಕಾರಿ ಬ್ಯಾಂಕೂ ಅಲ್ಲ. ವಸತಿ ಇಲಾಖೆಯಡಿ ನೋಂದಣಿ ಮಾಡಿಕೊಳ್ಳಬೇಕೆಂದರೆ, ನಮ್ಮದು ವಸತಿ ನಿರ್ಮಾಣ ಸೊಸೈಟಿ ಅಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಗಳಿಗೆ ಸರ್ಕಾರದಿಂದ ಏನಾದರೂ ಅನುದಾನ ಪಡೆಯುವಂತಿದ್ದರೆ ನೋಂದಣಿಗೊಂದು ಅರ್ಥವಿರುತ್ತಿತ್ತು. ಸಂಘವು ಕೇಂದ್ರ ಸರ್ಕಾರದಿಂದಾಗಲಿ ಅಥವಾ ಯಾವುದೇ ರಾಜ್ಯ ಸರ್ಕಾರದಿಂದಾಗಲಿ ಅನುದಾನವನ್ನು ಪಡೆಯುತ್ತಿಲ್ಲ.
ಸಂಘದ ಚಟುವಟಿಕೆಗಳಿಗೆ ಅಗತ್ಯವಿರುವ ಆರ್ಥಿಕ ಬಲ ಎಲ್ಲಿಂದ ಬರುತ್ತದೆ?
ಪ್ರತಿ ವರ್ಷ ಸಂಘದ ಸ್ವಯಂಸೇವಕರು 'ಗುರುಪೂಜೆ' ಎಂಬ ಕಾರ್ಯಕ್ರಮದಡಿ ಭಗವಾ ಧ್ವಜಕ್ಕೆ ನಮಸ್ಕರಿಸಿ ಗುರುದಕ್ಷಿಣೆ ಅರ್ಪಿಸುತ್ತಾರೆ. ಇದು ದೇಶದಾದ್ಯಂತ ಎಲ್ಲಾ ಶಾಖೆಗಳಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಹೀಗೆ ಸಂಗ್ರಹವಾಗುವ ಗುರುದಕ್ಷಿಣೆ ಸಂಘದ ಎಲ್ಲಾ ಚಟುವಟಿಕೆಗಳಿಗೆ ಸಂಪನ್ಮೂಲ ನೀಡುತ್ತದೆ. ನಾನು ನನ್ನ ಗುರುವಿಗೆ ಗೌರವದಿಂದ ಅರ್ಪಿಸುವ ದಕ್ಷಿಣೆಯ ಮೇಲೆ ಯಾವ ರೀತಿ ತೆರಿಗೆ ಹೇರಲು ಸಾಧ್ಯ?
ಹೌದು; ಸಂಘಪ್ರೇರಿತವಾದ ಅಥವಾ ಸಂಘದ ವಿಚಾರಧಾರೆಯಿಂದ ಪ್ರೇರಣೆಗೊಂಡ ಬೇರೆ ಬೇರೆ ಸಂಘಟನೆಗಳು ನೋಂದಣಿಯಾಗಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಮಜ್ದೂರ್ ಸಂಘ, ವಿದ್ಯಾ ಭಾರತಿ, ಭಾರತೀಯ ಜನತಾ ಪಕ್ಷವು ನಿರ್ದಿಷ್ಟ ಇಲಾಖೆಗಳು ಅಥವಾ ಸಂಸ್ಥೆಗಳಡಿ ನೋಂದಣಿಗೊಂಡಿವೆ. ವ್ಯಕ್ತಿ ನಿರ್ಮಾಣ, ವ್ಯಕ್ತಿಗಳಲ್ಲಿ ಮೌಲ್ಯಗಳನ್ನು ತುಂಬಿ ಅವರು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಭಾಗಿಯಾಗುವಂತೆ ಮಾಡುವುದನ್ನು ಬಿಟ್ಟರೆ ಸಂಘ ಯಾವುದೇ ರೀತಿಯ ಉದ್ದಿಮೆ ಅಥವಾ ವ್ಯಾವಹಾರಿಕ ಚಟುವಟಿಕೆಗಳಲ್ಲಿ ತೊಡಗಿಲ್ಲ.
ಪ್ರಕೃತಿ ವಿಕೋಪದಿಂದ ಸಂಭವಿಸುವ ದುರ್ಘಟನೆಗಳಾಗಲಿ, ರೈಲು ದುರಂತ ಅಥವಾ ವಿಮಾನ ದುರಂತ, ಕೊಡಗಿನ ಭೂಕುಸಿತ... ಈ ಎಲ್ಲಾ ಸಂದರ್ಭಗಳಲ್ಲಿ ಧಾವಿಸಿ ಹೋಗುವ ಸಂಘದ ಸ್ವಯಂಸೇವಕರಿಗೆ ನೋಂದಣಿಯ ಅಗತ್ಯವೇ ಕಂಡುಬಂದಿಲ್ಲ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಭಾವನೆಯನ್ನು ಸರ್ವಸ್ಪರ್ಶಿ ಸರ್ವ ವ್ಯಾಪಿ ಮಾಡುವ ಮಹಾನ್ ಕಾರ್ಯಕ್ಕೆ ನೋಂದಣಿ ಅಗತ್ಯವಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಇದು ದೇಶದಲ್ಲಿ 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಸುಮಾರು ಎಂಟು ವರ್ಷಗಳವರೆಗೆ ಆಡಳಿತ ನಡೆಸಿರುವ ಬಿಜೆಪಿಯೇತರ ಸರ್ಕಾರಗಳಿಗೆ ಚೆನ್ನಾಗಿ ತಿಳಿದಿರುವ ಕಾರಣ ಯಾರೂ ಸಂಘದ ನೋಂದಣಿ ಕಡ್ಡಾಯವೆಂದು ತಿಳಿಸಿಲ್ಲ ಅಥವಾ ದೇಶದ ಯಾವುದೇ ನ್ಯಾಯಾಲಯ ಈ ರೀತಿ ನೋಂದಣಿ ಮಾಡಿಕೊಳ್ಳಬೇಕೆಂಬ ಆದೇಶ ನೀಡಿಲ್ಲ.
1950ರಲ್ಲಿ ಸಂಘದ ಮೇಲಿನ ನಿಷೇಧಾಜ್ಞೆ ತೆರವುಗೊಳಿಸಿದ ಸಂದರ್ಭದಲ್ಲಿ ಸರ್ಕಾರ ಅಪೇಕ್ಷಿಸಿದ್ದಂತೆ ಸಂಘವು ತನ್ನ ಸಂಘಟನೆಯ ಲಿಖಿತ ಸಂವಿಧಾನವನ್ನು ರಚಿಸಿ ಪ್ರಕಟಿಸಿತ್ತು. ಭಾರತದ ಗೃಹ ಇಲಾಖೆಗೂ ಸಲ್ಲಿಸಿತ್ತು. ಆ ಮೂಲಕ ಸಂಘದ ಅಧಿಕೃತ ಕಾರ್ಯಗಳನ್ನು ದೇಶದ ಆಳುವ ವ್ಯವಸ್ಥೆಗೆ ತಿಳಿಯಪಡಿಸಲಾಗಿತ್ತು.
ಒಟ್ಟು ಪರಿಸ್ಥಿತಿ ಹೀಗಿರುವಾಗ ತನ್ನದೇ ಆದ ಕಾರಣಗಳಿಗಾಗಿ, ತನ್ನಲ್ಲಿ ಇರುವ ದುರುದ್ದೇಶಗಳಿಗಾಗಿ ನೂರು ವರ್ಷಗಳ ಇತಿಹಾಸವುಳ್ಳ, ಪ್ರತಿದಿನ ಎಲ್ಲರಿಗೂ ಕಾಣುವಂತೆ ಮುಕ್ತ ಬಯಲು ಪ್ರದೇಶದಲ್ಲಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೋಂದಣಿ ಅಗತ್ಯವೆಂದು ಹೇಳುವುದು ವಿಕೃತ ಮನಸ್ಸಿನ ಸಂಕೇತ ಎಂದು ಹೇಳದೇ ಬೇರೆ ದಾರಿ ಇಲ್ಲ.
ನಿಷೇಧವಾಗಿದ್ದಾಗಲೂ ಇರಲಿಲ್ಲ ಸೂಚನೆ
ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗ (1948-49ರಲ್ಲಿ) ಮತ್ತು ಅವರ ಸುಪುತ್ರಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ (1975-77ರ ಅವಧಿಯಲ್ಲಿ) ಹಾಗೂ ಬಾಬರಿ ಮಸೀದಿ ಧ್ವಂಸದ ಘಟನೆ ನಡೆದಾಗ (1992ರ ಡಿಸೆಂಬರ್ 6 ರಂದು)- ಮೂರು ಬಾರಿ ಸಂಘವನ್ನು ನಿಷೇಧಿಸಲಾಗಿತ್ತು.
ಆ ನಿಷೇಧದ ಆಜ್ಞೆಯನ್ನು ಸವಾಲಾಗಿ ಸ್ವೀಕರಿಸಿ, ನಿಷೇಧ ತೆರವುಗೊಳಿಸಿದ ಮೇಲೆ ಸಂಘ ಇನ್ನಷ್ಟು ಪ್ರವರ್ಧಮಾನವಾಗಿ ಬೆಳೆದಿದೆ. ಆದರೆ ಆ ಸಂದರ್ಭಗಳಲ್ಲಿಯೂ ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕೆಂದು ಯಾವ ಸರ್ಕಾರವೂ ಆದೇಶ ನೀಡಿರಲಿಲ್ಲ.
ಲೇಖಕ: ಬಿಜೆಪಿ ಶಾಸಕ

