Dailyhunt Logo
  • Light mode
    Follow system
    Dark mode
    • Play Story
    • App Story
ಚರ್ಚೆ | ಆರ್‌ಎಸ್‌ಎಸ್‌ನ ಪಲಾಯನವಾದ

ಚರ್ಚೆ | ಆರ್‌ಎಸ್‌ಎಸ್‌ನ ಪಲಾಯನವಾದ

ಪ್ರಧಾನಿ ನರೇಂದ್ರ ಮೋದಿ ಸ್ವತಃ ನಾಗ್ಪುರದ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ; ಬಿಜೆಪಿ ತನ್ನದೇ ಅಧಿಕೃತ ಖಾತೆಯಲ್ಲಿ ತಾನು ಸಂಘದ ರಾಜಕೀಯ ಅಂಗ ಎಂದು ಬಿಂಬಿಸಿಕೊಂಡಿದೆ; ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ದೇಶದ ವಿದೇಶಾಂಗ ನೀತಿಯಲ್ಲಿ ಸಂಘದ ದೃಷ್ಟಿಕೋನವಿದೆ ಎಂದಿದ್ದಾರೆ; ಬಿಜೆಪಿಯ ಯಶಸ್ಸಿನ ಹಿಂದೆ ಸಂಘದ ಶ್ರಮವಿದೆ ಎಂದೂ ಭಾಗವತ್ ಹೇಳಿದ್ದಾರೆ.
ಆಳುವ ಪಕ್ಷವನ್ನೂ, ದೇಶದ ನೀತಿಯನ್ನೂ ರೂಪಿಸುವ ಶಕ್ತಿ ತನಗಿದೆ ಎನ್ನುತ್ತಲೇ, ತಾನು ಬರೀ ಬೆಳಗಿನ ಕಸರತ್ತು-ಪ್ರಾರ್ಥನೆಯ ಸಂಸ್ಥೆ, ಲೆಕ್ಕ ಕೊಡುವಷ್ಟು ರಾಜಕೀಯವೂ ಅಲ್ಲ, ಸಾರ್ವಜನಿಕವೂ ಅಲ್ಲ ಎಂದು ಹೇಳುವುದು ಸಾಧ್ಯವಿಲ್ಲ..

ಶತಮಾನದ ಇತಿಹಾಸವನ್ನು ಹೊಂದಿರುವ ಸಂಘಟನೆ ಎಂದು ತನ್ನನ್ನು ತಾನು ವೈಭವೀಕರಿಸಿಕೊಳ್ಳುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಬಹಿರಂಗ ಪತ್ರಕ್ಕೆ ತಲ್ಲಣಗೊಂಡು, ತನ್ನ 35 ಅಂಗ ಸಂಸ್ಥೆಗಳ ಕೂಗುಮಾರಿಗಳ ಹತಾಶ ಹೇಳಿಕೆಗಳ ಮೂಲಕ ಸ್ವಯಂ ಸಮರ್ಥನೆಗೆ ಪ್ರಯತ್ನಿಸುತ್ತಾ ತನಗೆ ತಾನೇ ಮಸಿ ಬಳಿದುಕೊಳ್ಳುತ್ತಿದೆ.

ಜೂನ್ 13ರಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಅವರಿಗೆ ಬರೆದ ಪತ್ರದಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಕೇಳಿರುವುದು ಸಂಕೀರ್ಣವಾದ ಪ್ರಶ್ನೆಯೇನಲ್ಲ; ನಿಮ್ಮ ಕಾನೂನು ಸ್ಥಾನಮಾನವೇನು? ಆದಾಯ ಎಲ್ಲಿಂದ ಬರುತ್ತದೆ? ಆಸ್ತಿ ಎಷ್ಟು? ಲೆಕ್ಕಪತ್ರ ಎಲ್ಲಿದೆ? -ಇಷ್ಟನ್ನು ಜನರ ಮುಂದಿಡಿ ಎಂಬುದಷ್ಟೇ. ರಾಷ್ಟ್ರೀಯತೆ, ಶಿಸ್ತು, ಕರ್ತವ್ಯದ ಪಾಠವನ್ನು ಇಡೀ ದೇಶಕ್ಕೆ ಬೋಧಿಸುವ ಸಂಘಟನೆ ಆ ಮೌಲ್ಯಗಳನ್ನು ತಾನೇ ಮೊದಲು ಪಾಲಿಸಿ ತೋರಿಸಲಿ ಎಂಬುದು ಇದರ ಹೂರಣ. ಇದು ಬಲೆಯಲ್ಲ, ಬದಲಿಗೆ ದೇಶಭಕ್ತಿಯ ಪ್ರಮಾಣಪತ್ರ ನೀಡುವುದು ನಮ್ಮ ಅಬಾಧ್ಯ ಹಕ್ಕು ಎಂದು ಭಾವಿಸಿರುವವರಿಗೆ ಕನ್ನಡಿ ಹಿಡಿಯುವ ಪ್ರಯತ್ನ.

ಪ್ರಶ್ನೆಯ ತೂಕ ಅರ್ಥವಾಗಬೇಕಾದರೆ ಸಂಘದ ಗಾತ್ರವನ್ನು ಅದರ ಸ್ವಂತ ಲೆಕ್ಕದಲ್ಲೇ ನೋಡಬೇಕು. ಸಂಘದ ವಾರ್ಷಿಕ ವರದಿಯ ಪ್ರಕಾರ, ಪ್ರತಿದಿನ 88 ಸಾವಿರಕ್ಕೂ ಹೆಚ್ಚು ಶಾಖೆಗಳು ನಡೆಯುತ್ತವೆ. ಸಂಘದೊಂದಿಗೆ ತಳಕು ಹಾಕಿಕೊಂಡಿರುವ ಸಂಸ್ಥೆಗಳ ಸಂಖ್ಯೆ 2,500ಕ್ಕೂ ಹೆಚ್ಚು; ಅಮೆರಿಕ ಒಂದರಲ್ಲೇ 107. ಕಳೆದ ವರ್ಷ 'ಗೃಹ ಸಂಪರ್ಕ ಅಭಿಯಾನ'ದಲ್ಲಿ ತಾನು ಭೇಟಿ ನೀಡಿದ ಮನೆಗಳ ಸಂಖ್ಯೆ ಹತ್ತು ಕೋಟಿ ಎಂದು ಸಂಘ ಹೇಳಿಕೊಂಡಿದೆ; ಮಾರಿದ ಪುಸ್ತಕಗಳು 84 ಲಕ್ಷ; ಹಿಂದೂ ಸಮ್ಮೇಳನಗಳಿಗೆ ಸೇರಿದವರು ಮೂರೂವರೆ ಕೋಟಿ. ಕರ್ನಾಟಕದಲ್ಲೇ 4,000ಕ್ಕೂ ಹೆಚ್ಚು ದೈನಂದಿನ ಶಾಖೆಗಳು, 562 ಪಥಸಂಚಲನಗಳು, 2.21 ಲಕ್ಷ ಸಮವಸ್ತ್ರಧಾರಿ ಕಾರ್ಯಕರ್ತರು. ಇಷ್ಟು ದೊಡ್ಡ, ಇಷ್ಟು ವ್ಯಾಪಕ ಸಂಘಟನೆಗೆ ಸಂಘದ್ದೇ ಮಾತಿನ ಪ್ರಕಾರ ಪ್ಯಾನ್ ಇಲ್ಲ, ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ ಮಾಡುವುದಿಲ್ಲ, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಮತ್ತು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ವ್ಯಾಪ್ತಿಗೆ ಬರುವುದಿಲ್ಲ, ದೇಣಿಗೆ ನೀಡಿದವರ ವಿವರ ಬಹಿರಂಗಪಡಿಸುವ ಹೊಣೆ ಇಲ್ಲ. ಹೀಗಾಗಿ ಪ್ರಶ್ನೆಗಳು ತಾನಾಗಿಯೇ ಹುಟ್ಟಿಕೊಳ್ಳುತ್ತವೆ.

ಪ್ರಧಾನಿ ನರೇಂದ್ರ ಮೋದಿ ಸ್ವತಃ ನಾಗ್ಪುರದ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ; ಬಿಜೆಪಿ ತನ್ನದೇ ಅಧಿಕೃತ ಖಾತೆಯಲ್ಲಿ ತಾನು ಸಂಘದ ರಾಜಕೀಯ ಅಂಗ ಎಂದು ಬಿಂಬಿಸಿಕೊಂಡಿದೆ; ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ದೇಶದ ವಿದೇಶಾಂಗ ನೀತಿಯಲ್ಲಿ ಸಂಘದ ದೃಷ್ಟಿಕೋನವಿದೆ ಎಂದಿದ್ದಾರೆ; ಬಿಜೆಪಿಯ ಯಶಸ್ಸಿನ ಹಿಂದೆ ಸಂಘದ ಶ್ರಮವಿದೆ ಎಂದು ಭಾಗವತ್ ಅವರೇ ಹೇಳಿದ್ದಾರೆ. ಆಳುವ ಪಕ್ಷವನ್ನೂ, ದೇಶದ ನೀತಿಯನ್ನೂ ರೂಪಿಸುವ ಶಕ್ತಿ ತನಗಿದೆ ಎನ್ನುತ್ತಲೇ, ತಾನು ಬರೀ ಬೆಳಗಿನ ಕಸರತ್ತು-ಪ್ರಾರ್ಥನೆಯ ಸಂಸ್ಥೆ, ಲೆಕ್ಕ ಕೊಡುವಷ್ಟು ರಾಜಕೀಯವೂ ಅಲ್ಲ, ಸಾರ್ವಜನಿಕವೂ ಅಲ್ಲ ಎಂದು ಹೇಳುವುದು ಸಾಧ್ಯವಿಲ್ಲ.

ಸಂಘವನ್ನು ನಿಷೇಧಿಸಬೇಕು ಎಂದು ಯಾರೂ ಕೇಳಿಲ್ಲ; 'ನಿಮ್ಮ ಲೆಕ್ಕ ತೆರೆದಿಡಿ' ಎಂದಷ್ಟೇ ಕೇಳಿರುವುದು. ಆರ್‌ಎಸ್‌ಎಸ್‌ ತನಗೆ ಎದುರಾಗಿರುವ ಪ್ರಶ್ನೆಗಳಿಗೆ 'ಉತ್ತರಕ್ಕೆ ನಮ್ಮನ್ನು ಒತ್ತಾಯಿಸಲಾಗದು' ಎನ್ನುತ್ತಿದೆ; ಜನರು ಕೇಳುತ್ತಿರುವುದು 'ನೀವೇಕೆ ಮುಚ್ಚಿಡುತ್ತಿದ್ದೀರಿ' ಎಂದು. 'ನೋಂದಣಿ' ಎಂಬ ಪದವನ್ನೇ ಮುಂದಿಟ್ಟು, ತಮಗೆ ಅನುಕೂಲಕರವಾದ ನೆಲದಲ್ಲಿ ಹೋರಾಡುವ ತಂತ್ರ ಇದು. ಆತ್ಮವಿಶ್ವಾಸವಿದ್ದವರು ಒಂದೇ ಸಾಲಿನಲ್ಲಿ ಉತ್ತರಿಸುತ್ತಾರೆ; ಮುಜುಗರಕ್ಕೊಳಗಾದವರು ವಿಷಯ ಬದಲಿಸುತ್ತಾರೆ ಮತ್ತು ಪ್ರಶ್ನಿಸಿದವರ ಮೇಲೆಯೇ ಮುಗಿಬೀಳುತ್ತಾರೆ.

ಬೀದಿಬದಿ ವ್ಯಾಪಾರಿ, ಪೌರಕಾರ್ಮಿಕ, ಸಣ್ಣ ಸಂಘ-ಸಂಸ್ಥೆ, ದೇವಸ್ಥಾನ, ಗಣೇಶೋತ್ಸವದ ಸಮಿತಿ ಎಲ್ಲರೂ ನೋಂದಾಯಿಸುತ್ತಾರೆ, ಲೆಕ್ಕ ಸಲ್ಲಿಸುತ್ತಾರೆ, ತೆರಿಗೆ ಕಟ್ಟುತ್ತಾರೆ. ಸಂವಿಧಾನವು ಗಾತ್ರ, ಸಿದ್ಧಾಂತ ಅಥವಾ ಆಶ್ರಯದ ಆಧಾರದ ಮೇಲೆ ಯಾರಿಗೂ ವಿನಾಯಿತಿ ಕೊಡುವುದಿಲ್ಲ. ಇಡೀ ದೇಶಕ್ಕೆ ಶಿಸ್ತು ಮತ್ತು ಕರ್ತವ್ಯದ ಪಾಠ ಹೇಳುವ ಸಂಘಟನೆ, ತಾನು ಇದಕ್ಕೆ ಅಪವಾದವಾಗಬೇಕು ಎನ್ನುವುದು ದೇಶಭಕ್ತಿಯಲ್ಲ, ಅದು ವಿಶೇಷ ಸವಲತ್ತಿನ ಬೇಡಿಕೆ. ಆರ್‌ಎಸ್‌ಎಸ್‌ ನಾಯಕರು ಪ್ರಿಯಾಂಕ್‌ ಖರ್ಗೆ ಪತ್ರಕ್ಕೆ ಉತ್ತರಿಸದೇ, ಅದರ ಅಗತ್ಯವನ್ನು ಪ್ರಶ್ನಿಸಿದ್ದಷ್ಟೂ ಸಲ ಅದು ಜನರಲ್ಲಿ ಸೃಷ್ಟಿಯಾಗಿರುವ ಅನುಮಾನದ ಹುತ್ತಕ್ಕೆ ಮತ್ತೆ ಮತ್ತೆ ಹಾಲೆರೆದಂತೆ. ಆರ್‌ಎಸ್‌ಎಸ್‌ ಪ್ರಶ್ನಾತೀತ, ಅದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕರು ಹೇಳಿದಷ್ಟೂ ಅವರ ಅಹಂ ಪ್ರದರ್ಶಿಸಿದಂತೆ, ಪಲಾಯನ ಮಾಡಿದಂತೆ.

1925ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಥಾಪಿತವಾದ ಆರ್‌ಎಸ್‌ಎಸ್‌ ಬೇರೆ ಬೇರೆ ಕಾರಣಗಳಿಗೆ ಈ ನೆಲದ ಕಾನೂನಿಗೆ ಅನುಗುಣವಾಗಿ ನಮ್ಮ ದೇಶದಲ್ಲಿ ಮೂರು ಬಾರಿ ನಿಷೇಧಕ್ಕೆ ಒಳಗಾಗಿತ್ತು. ಪ್ರಮುಖವಾಗಿ ಮಹಾತ್ಮ ಗಾಂಧೀಜಿಯವರ ಹತ್ಯೆಯ ಸಂಬಂಧ 1948-49ರಲ್ಲಿ ನಿಷೇಧಕ್ಕೆ ಒಳಗಾಗಿದ್ದ ಆರ್‌ಎಸ್‌ಎಸ್‌, ತಾನು ದೇಶದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿ ಆಗುವುದಿಲ್ಲ ಎಂಬ ವಾಗ್ದಾನ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ನೀಡುವುದರ ಮೂಲಕ ನಿಷೇಧದಿಂದ ಮುಕ್ತವಾಗಿತ್ತು. ಶತಮಾನದ ಇತಿಹಾಸವನ್ನು ಹೇಳಿಕೊಳ್ಳುವ ಆರ್‌ಎಸ್‌ಎಸ್‌ನಲ್ಲಿ ಮುಕ್ತವಾಗಿ ಮತ್ತು ಕಾಲಕಾಲಕ್ಕೆ ಮುಖ್ಯಸ್ಥರನ್ನು ಆಯ್ಕೆ ಮಾಡಲೂ ಅವಕಾಶ ಇರುವುದಿಲ್ಲ. ಅದೇ ರೀತಿ ಸಂಘದಲ್ಲಿ ಸದಸ್ಯತ್ವವನ್ನೂ ನೀಡುವುದಿಲ್ಲ. ಸದಸ್ಯತ್ವಕ್ಕೆ ಅವಕಾಶವೇ ಇಲ್ಲದ ಒಂದು ಸಂಘಟನೆಯನ್ನು ಸಂಘವೆಂದು ಕರೆಯಲು ಸಾಧ್ಯವಿಲ್ಲ.

ನೋಂದಣಿ ಆಗದ ಯಾವುದೇ ಸಂಘ ಸಂಸ್ಥೆ ಸಾರ್ವಜನಿಕ ಅಥವಾ ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಚಟುವಟಿಕೆಯನ್ನು ಮಾಡಲು ಅವಕಾಶ ಇಲ್ಲ. ಯಾವುದೇ ಸಂಘ- ಸಂಸ್ಥೆ ವ್ಯಕ್ತಿಗಳಿಗೆ ಅಥವಾ ವ್ಯಕ್ತಿಗಳ ಗುಂಪಿಗೆ ಸದಸ್ಯತ್ವ ನೀಡದೇ ತಾನು ಒಂದು ಸಂಘವೆಂದು ಹೇಳಿಕೊಳ್ಳಲು ಬರುವುದಿಲ್ಲ. 2025ರ ಅ.4ರಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ನಿಯಂತ್ರಿಸಲು ಅಂದಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ತನ್ನನ್ನು ತಾನು ಪ್ರಪಂಚದ ದೊಡ್ಡ ಸಂಘಟನೆಯೆಂದು ಸಾರಿಕೊಳ್ಳುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸಂವಿಧಾನದ ಅಡಿಯಲ್ಲಿ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ತನ್ನನ್ನು ತಾನು ನೋಂದಾಯಿಸಿಕೊಳ್ಳಲು ಮುಂದಾಗದೆ ಇರುವುದು ಹಾಸ್ಯಾಸ್ಪದ.

ಆರ್‌ಎಸ್‌ಎಸ್‌ ಈ ದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕೀಯ ಸಂಘಟನೆಯೂ ಸೇರಿದಂತೆ ಸುಮಾರು 35 ವಿವಿಧ ಸಂಘಟನೆಗಳ ಹೆಸರಿನಲ್ಲಿ ಕೆಲಸ ಮಾಡುತ್ತಿದೆ. ಅನಿವಾರ್ಯ, ಮಾತು, ಅವಶ್ಯಕತೆಗೆ ಅನುಗುಣವಾಗಿ ಕೆಲವು ಸಂಘಟನೆಗಳು ನೋಂದಣಿಯಾಗಿವೆ. ಉಳಿದಂತೆ ಬಹುತೇಕ ಸಂಘಟನೆಗಳು ನೋಂದಣಿ ಆಗದೇ ಕೆಲಸ ಮಾಡುತ್ತಿವೆ. ಒಂದು ರಾಜಕೀಯ ಪಕ್ಷವಾಗಿ ನೋಂದಣಿ ಅವಶ್ಯಕತೆ ಇರುವುದರಿಂದ ಬಿಜೆಪಿಯನ್ನು ನೋಂದಾಯಿಸಲಾಗಿದೆ. ಇಲ್ಲದೇ ಇದ್ದಲ್ಲಿ ಅದು ಕೂಡ ನೋಂದಣಿ ಇಲ್ಲದೆ ಕಾರ್ಯ ಚಟುವಟಿಕೆಗೆ ಮುಂದಾಗುತ್ತಿತ್ತು. ನೋಂದಣಿ ಅವಶ್ಯಕತೆ ಇಲ್ಲವೆನ್ನುವುದು ಅವಕಾಶವಾದದ ಪರಮಾವಧಿಯ ಜೊತೆಗೆ ಸಂವಿಧಾನವನ್ನು ಧಿಕ್ಕರಿಸುವ ಪ್ರಕ್ರಿಯೆ.

ಕರ್ನಾಟಕದಲ್ಲಿ ಸಂಘಸಂಸ್ಥೆಗಳ ನೋಂದಣಿ ಕಾಯ್ದೆ ಜಾರಿಯಲ್ಲಿದೆ. ಈ ಕಾನೂನು ಸಂಘ ಸಂಸ್ಥೆಗಳು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ನೋಂದಣಿ ಕಡ್ಡಾಯವೆಂದು ಕಾಯ್ದೆಯಲ್ಲಿ ತಿಳಿಸದೇ ಇದ್ದರೂ, ಯಾವುದೇ ಸಂಘ ಸಂಸ್ಥೆ ಕಾರ್ಯ ಚಟುವಟಿಕೆಗಳು ನೋಂದಣಿ ಮೂಲಕ ಪಾರದರ್ಶಕವಾಗಿ ಮತ್ತು ಸಾರ್ವಜನಿಕವಾಗಿ ನಡೆಸಲು, ನಿಯಮಗಳ ಮೂಲಕ ಬೈಲಾ ರಚಿಸಲು, ಲೆಕ್ಕ ಪತ್ರ ನೀಡಲು, ಲೆಕ್ಕಪರಿಶೋಧನೆಗೆ ಒಳಪಡಿಸಲು ಅವಕಾಶ ನೀಡುತ್ತದೆ. ನೋಂದಾಯಿತ ಟ್ರಸ್ಟ್ ಮುಖಾಂತರವೂ ಸಾರ್ವಜನಿಕ ಉದ್ದೇಶಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ. ನೋಂದಣಿ ಇಲ್ಲದೆ ಯಾವುದೇ ಒಂದು ಸಂಘ ಸಂಸ್ಥೆ ಅಥವಾ ಟ್ರಸ್ಟ್ ಕೆಲಸ ಮಾಡುತ್ತಿದ್ದರೆ, ಇದು ಅನೇಕ ಅನುಮಾನಗಳಿಗೆ ಅವಕಾಶ ನೀಡುತ್ತದೆ. ಆರ್‌ಎಸ್‌ಎಸ್‌ ತನ್ನ ಅನುಕೂಲಕ್ಕೆ ಅನುಗುಣವಾಗಿ ಕಾನೂನನ್ನು ವ್ಯಾಖ್ಯಾನ ಮಾಡುವ ಮೂಲಕ ಸಾರ್ವಜನಿಕ ಜವಾಬ್ದಾರಿಯಿಂದ ಪಲಾಯನ ಮಾಡುತ್ತಿದೆ.

ವಾರ್ಷಿಕ ವರದಿಯನ್ನು ಪ್ರಧಾನಿಯರ ಭಾವಚಿತ್ರದೊಂದಿಗೆ ಆರ್‌ಎಸ್‌ಎಸ್‌ ಪ್ರಕಟಿಸುತ್ತದೆ. ದೇಶ ವಿದೇಶಗಳಲ್ಲಿ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಸಂಘವು ಕರ್ನಾಟಕದ ಗೃಹ ಸಚಿವರ ಒಂದು ಬಹಿರಂಗ ಪತ್ರಕ್ಕೆ ಉತ್ತರಿಸದೆ ಪಲಾಯನ ಮಾಡುತ್ತಿರುವುದು ಅದರ ಇನ್ನೊಂದು ಮುಖವನ್ನು ತೋರಿಸುತ್ತದೆ. ರಾಜಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು ಸಂವಿಧಾನದ ಅಳವಡಿಕೆಯ ಮೂಲಕ ಪ್ರಜಾಪ್ರಭುತ್ವದ ಸರ್ಕಾರಕ್ಕೆ ಮುನ್ನುಡಿ ಬರೆದುಕೊಂಡಿರುವ ನಾವು ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಭಾರತ ನೆಲದಲ್ಲಿ ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕಾಗುತ್ತದೆ. ನೋಂದಣಿ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಬದಲು, ಶತಮಾನದ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆರವರ ಬಹಿರಂಗ ಪತ್ರಕ್ಕೆ ಆರ್‌ಎಸ್‌ಎಸ್‌ ಉತ್ತರಿಸಲಿ.

ಲೆಕ್ಕಾಚಾರದ ಮೌನ

ಆರ್‌ಎಸ್‌ಎಸ್‌ನಲ್ಲಿ ಇಂದು ಮನೆ ಮಾಡಿರುವ ಆತಂಕ ಎಂದರೆ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ತಾನು ಅಧಿಕೃತವಾಗಿ ಉತ್ತರ ನೀಡಿದರೆ ಸರ್ಕಾರಗಳಿಗೆ ಆ ಲೋಪಗಳನ್ನು ಸರಿಪಡಿಸುವ ನೂತನ ಕಾಯ್ದೆ ಜಾರಿಮಾಡುವ 'ನಿದರ್ಶನ'ವನ್ನು ಸೃಷ್ಟಿಸಿದಂತಾಗುತ್ತದೆ ಎನ್ನುವ ಅಂಶ. ಸಂಘ ಅಧಿಕೃತವಾಗಿ ಒಮ್ಮೆ ಉತ್ತರಿಸಿದರೆ, ಪಾರದರ್ಶಕತೆಯ ಒಂದು ಪೂರ್ವನಿದರ್ಶನ ಸೃಷ್ಟಿಯಾಗುತ್ತದೆ. ಒಮ್ಮೆ ಲೆಕ್ಕ ತೋರಿಸಿದರೆ ಪ್ರತಿ ವರ್ಷ ತೋರಿಸಬೇಕಾಗುತ್ತದೆ; ಒಮ್ಮೆ ಕಾನೂನಿಗೆ ತಲೆಬಾಗಿದರೆ ಮುಂದೆ ಪ್ರತಿ ಬಾರಿ ಬಾಗಬೇಕಾಗುತ್ತದೆ. ಹಾಗಾಗಿಯೇ ಸಂಘ ತನ್ನ ಬಾಯಿ ಮುಚ್ಚಿಟ್ಟುಕೊಂಡು, ಉತ್ತರಿಸುವ ಕೆಲಸವನ್ನು ಲೇಖನ ಬರೆಯುವ ಕೆಲವು ವಕೀಲರಿಗೆ ಹೊರಗುತ್ತಿಗೆ ನೀಡಿದೆ. ಈ ಮೌನ ಆಕಸ್ಮಿಕವಲ್ಲ; ಲೆಕ್ಕಾಚಾರದ್ದು.

ಲೇಖಕ: ಕಾಂಗ್ರೆಸ್‌ ವಕ್ತಾರ, ವಿಧಾನ ಪರಿಷತ್ ಸದಸ್ಯ

Dailyhunt
Disclaimer: This content has not been generated, created or edited by Dailyhunt. Publisher: Prajavani