Dailyhunt Logo
  • Light mode
    Follow system
    Dark mode
    • Play Story
    • App Story
ಚರ್ಮದ ಕಿರಿಕಿರಿಗಳು

ಚರ್ಮದ ಕಿರಿಕಿರಿಗಳು

ಡಾ. ವಿಜಯಲಕ್ಷ್ಮಿ ಪಿ.

ನಮ್ಮ ದೇಹದ ಅತ್ಯಂತ ದೊಡ್ಡ ಅಂಗವೆಂದರೆ ಚರ್ಮ. ಇದು ದೇಹವನ್ನು ರಕ್ಷಿಸುವ ಕವಚದಂತೆ ಕೆಲಸ ಮಾಡುತ್ತದೆ. ಅಲ್ಲದೆ, ದೇಹಕ್ಕೆ ಬೇಕಾಗುವಷ್ಟು ಆಮ್ಲಜನಕವನ್ನು ಸಮರ್ಪಕವಾಗಿ ಪೂರೈಸಲು ಇದರ ಪಾತ್ರ ದೊಡ್ಡದು. ಚರ್ಮ ರೋಮಕೂಪ ಮತ್ತು ಸ್ವೇದಗ್ರಂಥಿಗಳ ಮೂಲಕ ಈ ಕಾರ್ಯವನ್ನು ಮಾಡುತ್ತದೆ.

ಆದರೆ ದೂಳು, ಬಿಸಿಲು, ಬೆವರು, ರಾಸಾಯನಿಕ ವಸ್ತುಗಳು ಮತ್ತು ತಪ್ಪು ಜೀವನಶೈಲಿ, ವಿರುದ್ಧಾಹಾರಗಳ ಸೇವನೆಯಿಂದಾಗಿ ಚರ್ಮದ ಆರೋಗ್ಯ ಹಾಳಾಗುತ್ತದೆ.

ಚರ್ಮದಲ್ಲಿ ಆಗಾಗ್ಗೆ ಕಿರಿಕಿರಿಯಾಗುತ್ತಿದೆ ಎನ್ನುವುದಕ್ಕೆ ಈ ಲಕ್ಷಣಗಳನ್ನು ಪರಿಗಣಿಸಬಹುದು. ತುರಿಕೆ, ಕೆಂಪಾಗುವುದು, ಉರಿ, ಸಣ್ಣ ಗುಳ್ಳೆಗಳು, ಚರ್ಮ ಒಣಗುವುದು, ದಪ್ಪಗಾಗುವುದು. ಇದನ್ನು ಕೇವಲ ಸೌಂದರ್ಯ ಸಮಸ್ಯೆಯಾಗಿ ನೋಡದೆ, ದೇಹದ ಒಳಗಿನ ಆರೋಗ್ಯವು ಏರುಪೇರಾಗಿರುವ ಸಂಕೇತವೆಂದು ಅರಿಯಬೇಕು.

ಹೊಸ ಸಾಬೂನು, ಶ್ಯಾಂಪೂ, ಡಿಟರ್ಜೆಂಟ್, ಮುಖಕ್ಕೆ ಹಚ್ಚುವ ಕ್ರೀಮ್, ಹೇರ್ ಡೈ, ಅತಿ ತಂಪಾದ ವಾತಾವರಣ, ದೂಳು, ಕೆಲವು ಆಹಾರ ಪದಾರ್ಥಗಳು, ಚರ್ಮವ್ಯಾಧಿ ಇರುವವರ ಬಟ್ಟೆಗಳನ್ನು ಧರಿಸುವುದು, ಸಂಪೂರ್ಣ ಒಣಗದೇ ಇರುವ ಬಟ್ಟೆ ಧರಿಸುವುದು ಮತ್ತು ನಕಲಿ ಆಭರಣಗಳಲ್ಲಿರುವ ನಿಕ್ಕಲ್ ಲೋಹದಿಂದ ಅಲರ್ಜಿ ಬರುವುದು. ಈ ಅಲರ್ಜಿಯನ್ನು 'ಕಾಂಟ್ಯಾಕ್ಟ್‌ ಡರ್ಮಟೈಟಿಸ್‌'ಎನ್ನುತ್ತಾರೆ.

ಬೆಂಗಳೂರಿನಂತಹ ನಗರಗಳಲ್ಲಿ ದೂಳು ಮತ್ತು ವಾಯುಮಾಲಿನ್ಯ ಹೆಚ್ಚು. ನಿರಂತರ ಬಿಸಿಲಿನಲ್ಲಿ ಓಡಾಡುವುದರಿಂದ, ವಾತ-ಪಿತ್ತಗಳ ಪ್ರಕೋಪದಿಂದ ಕೆಂಪಾಗುವಿಕೆ ಮತ್ತು ಚರ್ಮ ಒಣಗುವಿಕೆಯೂ ಉಂಟಾಗಬಹುದು. ಮಳೆಗಾಲದ ತೇವಾಂಶದಿಂದ ಕಫದ ಅಂಶವು ಹೆಚ್ಚಾಗುವುದರಿಂದ ಚರ್ಮವು ಅತಿಜಿಡ್ಡಿನಿಂದ ಕೂಡಿರುವಂತೆ ಭಾಸವಾಗುತ್ತದೆ. ಚಳಿಗಾಲದಲ್ಲಿ ಅತಿಯಾದ ತಂಪಿನಿಂದ, ರಕ್ತಪರಿಚಲನೆ ಕಡಿಮೆಯಾಗಿ ಚರ್ಮವು ಒಣಗುತ್ತದೆ. ಶಿಲೀಂಧ್ರಗಳ ಸೋಂಕು (Fungal infection) ಬಂದು ತುರಿಕೆ ಉಂಟಾಗುತ್ತದೆ.

ಅತಿಯಾದ ಖಾರ, ರಾತ್ರಿ ಮೊಸರುಸೇವನೆ, ಸಮುದ್ರದ ಆಹಾರ, ಕಡಲೆಕಾಯಿ, ಅತಿ ತಂಪಾದ ಆಹಾರ, ಮಸಾಲೆ ಮತ್ತು ಜಿಡ್ಡು ಹೆಚ್ಚಿರುವ ಆಹಾರ, ಅತಿಯಾದ ಖಾರ, ಹುಳಿ ಮತ್ತು ಕ್ಷಾರಯುಕ್ತ ಪದಾರ್ಥ ಮತ್ತು ಪಾನೀಯಗಳ ಸೇವನೆಯಿಂದಾಗಿ ಕೆಲವರಲ್ಲಿ ಅಲರ್ಜಿ ಉಂಟಾಗುತ್ತದೆ.

ನಿದ್ರೆಯ ಕೊರತೆ, ಮಾನಸಿಕ ಒತ್ತಡ, ವ್ಯತ್ಯಾಸವಾದ ಔಷಧ ಸೇವನೆ, ಹಾರ್ಮೋನ್‌ಗಳ ವ್ಯತ್ಯಾಸದಿಂದ ಚರ್ಮ ಸೂಕ್ಷ್ಮವಾಗುತ್ತದೆ. ಆತಂಕ ಹೆಚ್ಚಾದಾಗ ಚರ್ಮ ಕೆಂಪಾಗುವಿಕೆ, ತುರಿಕೆ, ಅಲ್ಲಲ್ಲಿ ಗಂದೆ ಬರಬಹುದು.

ತಿಂದ ಆಹಾರವು ಜೀರ್ಣವಾಗುವ ಮೊದಲೇ ಸ್ನಾನ, ವ್ಯಾಯಾಮ, ಮುಂತಾದ ಪ್ರಕ್ರಿಯೆಗಳನ್ನು ಮಾಡುವುದರಿಂದ ಚರ್ಮದಲ್ಲಿ ಅನಾರೋಗ್ಯ ಉಂಟಾಗಬಹುದು.

ಹೆಚ್ಚು ಬಿಸಿಯಾದ ನೀರು ಅಥವಾ ಅತಿ ತಂಪಾದ ನೀರಿನಲ್ಲಿ ಸ್ನಾನ ಮಾಡುವುದೂ ಚರ್ಮಕ್ಕೆ ಹಾನಿ ಉಂಟು ಮಾಡುತ್ತದೆ.

ಆಯುರ್ವೇದದಲ್ಲಿ ಚರ್ಮದ ಕಿರಿಕಿರಿಯನ್ನು 'ತ್ವಕ್ ವಿಕಾರ'ಎಂದು ಕರೆಯುತ್ತಾರೆ. ರಕ್ತ ದುಷ್ಟಿಯೇ ಇದಕ್ಕೆ ಮೂಲ ಕಾರಣ ಎಂದು ಹೇಳಲಾಗಿದೆ, ಇದರೊಡನೆ, ಪಿತ್ತ ದೋಷ ಹೆಚ್ಚಾದಾಗ ಉರಿ, ಕೆಂಪು ಬರುತ್ತದೆ. ಕಫದೋಷದಿಂದ ತುರಿಕೆ ಮತ್ತು ಸ್ರಾವ ಬರುತ್ತದೆ. ವಾತದೋಷದಿಂದ, ನೋವು, ಒರಟಾಗುವಿಕೆ, ಒಣಗುವಿಕೆ ಉಂಟಾಗುತ್ತದೆ. ರಕ್ತ ಮತ್ತು ವಾತ-ಪಿತ್ತಗಳ ವಿವಿಧ ರೀತಿಯ ವಿಕೃತಿಯಿಂದ ಉಂಟಾಗುವ ನಾನಾ ವಿಧವಾದ ಚರ್ಮರೋಗಗಳನ್ನು ಆಯುರ್ವೇದವು ವಿವರಿಸುತ್ತದೆ.

ಚರ್ಮದ ಕಿರಿಕಿರಿಗೆ ತಕ್ಷಣವೇ ರಾಸಾಯನಿಕ ಕ್ರೀಮ್ ಹಚ್ಚುವ ಬದಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು. ಮೊದಲನೆಯದಾಗಿ ಚರ್ಮವನ್ನು ಸ್ವಚ್ಛವಾಗಿಡಿ; ಆದರೆ ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಬಾರಿ ಸಾಬೂನು ಬಳಸಬೇಡಿ. ಮುಖವನ್ನು ಶುಭ್ರಗೊಳಿಸಲು ಅಂಟುವಾಳದ ಕಾಯಿ, ಸೀಗೆಕಾಯಿ ಅಥವಾ ಕಡಲೆ ಹಿಟ್ಟು, ಹೆಸರುಹಿಟ್ಟನ್ನು ಬಳಸಿ. ಸ್ನಾನಕ್ಕೆ ಬೇವಿನ ಎಲೆ, ಹೊಂಗೆ ಎಲೆ ಹಾಕಿದ ಉಗುರು ಬೆಚ್ಚಗಿನ ನೀರು ತುಂಬಾ ಉಪಯುಕ್ತ. ಬೇವು ಮತ್ತು ಹೊಂಗೆ ರಕ್ತಶುದ್ಧಿ ಮತ್ತು ಕ್ರಿಮಿನಾಶಕ ಗುಣಗಳನ್ನು ಹೊಂದಿವೆ.

ಎರಡನೆಯದಾಗಿ, ತುರಿಕೆ ಇರುವ ಜಾಗಕ್ಕೆ ಶುದ್ಧ ಅಲೋವೆರಾ ತಿರುಳು ಅಥವಾ ತೆಂಗಿನ ಎಣ್ಣೆಗೆ ಸ್ವಲ್ಪ ಕರ್ಪೂರ ಬೆರೆಸಿ ಹಚ್ಚುವುದರಿಂದ ತಂಪು ಸಿಗುತ್ತದೆ. ಅರಿಶಿನವು ಅತ್ಯುತ್ತಮ ನಂಜುನಿರೋಧಕ. ಸಮ ಪ್ರಮಾಣದಲ್ಲಿ ನೀರು ಮತ್ತು ಹಾಲನ್ನು ಬೆರೆಸಿ, ಸ್ವಲ್ಪ ಅರಿಶಿನ ಅಥವಾ ಸಾರಿನಾ (ನನ್ನಾಲಿ, ಸೊಗದೇ ಬೇರು) ಸೇರಿಸಿ, ಕೇವಲ ಹಾಲಷ್ಟೇ ಉಳಿಯುವಂತೆ ಕುದಿಸಿ, ಶೋಧಿಸಿ, ಕುಡಿಯುವುದರಿಂದ ಒಳಗಿನಿಂದ ರಕ್ತ ಮತ್ತು ಪಿತ್ತದ ಅಂಶಗಳು ಕಡಿಮೆಯಾಗಿ, ದೇಹ ಶುದ್ಧಿಯಾಗುತ್ತದೆ.

ಮೂರನೆಯದಾಗಿ, ಬಟ್ಟೆಯ ಬಗ್ಗೆ ಗಮನವಿರಲಿ. ಬಿಗಿಯಾದ, ನೈಲಾನ್ ಬಟ್ಟೆಗಳ ಬದಲು ಸಡಿಲ ಹತ್ತಿಯ ಬಟ್ಟೆ ಧರಿಸಿ. ಹೊಸ ಬಟ್ಟೆಯನ್ನು ಒಮ್ಮೆ ತೊಳೆದು ನಂತರ ಧರಿಸಿ. ಆಹಾರದಲ್ಲಿ ತಂಪು ಪಾನೀಯ, ಜಂಕ್ ಫುಡ್ ಕಡಿಮೆ ಮಾಡಿ. ನೆಲ್ಲಿಕಾಯಿ, ಕಲ್ಲಂಗಡಿ, ಸೌತೆಕಾಯಿ, ಸಾಕಷ್ಟು ನೀರನ್ನು ಕುಡಿಯುವುದರಿಂದ ಚರ್ಮದ ಒಳಗಿನಿಂದ ತೇವಾಂಶದ ಸಮತೋಲನ ಉಂಟಾಗುತ್ತದೆ.

ಚರ್ಮದ ಕಿರಿಕಿರಿಗೆ ಸ್ಟಿರಾಯ್ಡ್ ಇರುವ ಕ್ರೀಮ್‌ಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದು ಅಪಾಯಕಾರಿ.

ಮನೆಮದ್ದು ಮಾಡಿಯೂ ಎರಡು ಮೂರು ದಿನಗಳಲ್ಲಿ ಕಡಿಮೆಯಾಗದಿದ್ದರೆ, ಕೀವು ತುಂಬಿದ ಗುಳ್ಳೆಗಳು, ಜ್ವರ, ಉಸಿರಾಟದ ತೊಂದರೆ, ಅಥವಾ ಇಡೀ ದೇಹಕ್ಕೆ ದದ್ದುಗಳು ಹರಡಿದರೆ ತಕ್ಷಣವೇ ಚರ್ಮರೋಗ ತಜ್ಞರನ್ನು ಭೇಟಿ ಮಾಡಬೇಕು. ಸ್ವಯಂ ಚಿಕಿತ್ಸೆ ಅಪಾಯಕಾರಿ. ಸರಿಯಾದ ಕಾರಣವನ್ನು ತಿಳಿದು ಸಕಾಲದಲ್ಲಿ ಆರೈಕೆ ಮಾಡಿದರೆ ಚರ್ಮ ಮತ್ತೆ ಆರೋಗ್ಯಕರವಾಗಿ ಹೊಳೆಯುವಂತೆ ಇರುತ್ತದೆ.

261103-51-2092246609

Dailyhunt
Disclaimer: This content has not been generated, created or edited by Dailyhunt. Publisher: Prajavani