ಚಿಕ್ಕಮಗಳೂರು: ಜೂನ್ ಕಳೆದರೂ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವೇ ಆಗಿಲ್ಲ. ಇದು ಕಾಫಿ ಬೆಳೆಗೆ ಹೊಸ ಹೊಸ ಕೀಟಬಾಧೆಗಳನ್ನು ತಂದೊಡ್ಡುತ್ತಿದೆ. ಸಣ್ಣ ಇರುವ ಜಾತಿಯ ಹುಳುಗಳು ಕಾಫಿ ಗಿಡಗಳಿಗೆ ಹರಡುತ್ತಿದ್ದು, ಫಸಲು ಕಡಿಮೆಯಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.
ಜಿಲ್ಲೆಯ ಸರಾಸರಿ ಮುಂಗಾರು ಮಳೆಯಲ್ಲಿ ಶೇ 60ರಷ್ಟು ಕಡಿಮೆಯಾಗಿದೆ. ಅದರಲ್ಲೂ ಮಲೆನಾಡು ಭಾಗದಲ್ಲೂ ಮಳೆ ಕೊರತೆ ಹೆಚ್ಚಿನ ಪ್ರಮಾಣದಲ್ಲಿದೆ. ಬಿಸಿಲು ಮತ್ತು ಆಗಾಗ ಬರುತ್ತಿರುವ ಸಣ್ಣ ಮಳೆ ಕಾಫಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ಹೂ ಅರಳುವ ಸಂದರ್ಭದಲ್ಲಿ ಉತ್ತಮವಾಗಿ ಮಳೆಯಾಗಿತ್ತು. ನಂತರ ಮಳೆ ಕೊರತೆಯಾಗಿದೆ. ಇದು ಫಸಲಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತಾರೆ ಬೆಳೆಗಾರರು.
ಮಲ್ಲಂದೂರು ಸುತ್ತಮುತ್ತಲ ತೋಟಗಳಲ್ಲಿ ಕಾಫಿ ಗಿಡದ ಎಲೆಗಳು ಕಬ್ಬು ಬಣ್ಣಕ್ಕೆ ತಿರುಗುತ್ತಿವೆ. ಈ ಗಿಡಗಳ ಮೇಲೆ ಸಣ್ಣ ಇರುವ ಜಾತಿಯ ಹುಳುಗಳು ಅಂಟಿಕೊಂಡು ಇಡೀ ತೋಟಗಳನ್ನು ಆವರಿಸಿಕೊಳ್ಳುತ್ತಿವೆ. ಎಲೆಯ ಮೇಲೆ ವೇಸ್ಟ್ ಆಯಿಲ್ ಬಣ್ಣದಲ್ಲಿ ಅಂಟಿಕೊಳ್ಳುವ ಸಣ್ಣ ಇರುವೆಗಳು, ಈಚು ಕಟ್ಟಿರುವ ಜಾಗದಲ್ಲೇ ಗಿಡಗಳನ್ನು ತಿನ್ನುತ್ತಿವೆ. ಗ್ರೀನ್ ಬಗ್ ಎಂಬ ಇರುವೆ ಜಾತಿಯ ಸಣ್ಣ ಕೀಟಾಣುಗಳು ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಇರುತ್ತವೆ. ಮಳೆಗಾಲದಲ್ಲಿ ತೊಳೆದು ಹೋಗುತ್ತವೆ. ಈ ವರ್ಷ ಮಳೆ ಕಡಿಮೆ ಇರುವುದರಿಂದ ಅವು ಉಳಿದುಕೊಂಡು ಕಾಫಿ ಗಿಡಗಳಿಗೆ ಮಾರಕವಾಗುತ್ತಿವೆ. ಒಂದು ಎಕರೆ ತೋಟವಿದ್ದರೆ ಅದರಲ್ಲಿ ಸುಮಾರು 200 ಗಿಡಗಳಿಗೆ ಇವು ಆವರಿಸಿಕೊಂಡಿವೆ. ಮಳೆ ಇದೇ ರೀತಿ ಕೈಕೊಟ್ಟರೆ ಇಡೀ ತೋಟಕ್ಕೆ ಆವರಿಸುವ ಆತಂಕ ಇದೆ ಎನ್ನುತ್ತಾರೆ ಬೆಳೆಗಾರರು.
ಈ ಹಿಂದೆ ಕಾಂಡಕೊರಕ, ಎಲೆಕೊರಕ ರೋಗಗಳಿದ್ದವು.ಈಗ ಹೊಸ ಹೊಸ ಕೀಟಬಾಧೆಗಳು ಕಾಣಿಸಿಕೊಳ್ಳುತ್ತಿರುವುದು ಇನ್ನಿಲ್ಲದ ತಲೆನೋವಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ.
ಹೆಚ್ಚಾದ ಕೀಟಾಣು: ಆತಂಕ
ಮಳೆ ಕೊರತೆಯಿಂದ ಕಾಫಿ ತೋಟಗಳಲ್ಲಿ ಗ್ರೀನ್ ಬಾಗ್ ಎಂಬ ಕೀಟಾಣು ಹೆಚ್ಚಾಗಿದೆ ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಹೇಳಿದರು.
ಕಳೆದ ಏಳೆಂಟು ವರ್ಷಗಳಿಂದ ವಿಪರೀತ ಮಳೆ ಬಂದ ಕಾರಣ ಎಲೆಯಲ್ಲಿ ಈ ಕೀಟಾಣು ತೊಳೆದು ಹೋಗುತ್ತಿತ್ತು. ಈಗ ಮಳೆ ಇಲ್ಲದ ಕಾರಣ ಕಾಫಿ ತೋಟಕ್ಕೆ ಈ ಕೀಟಾಣು ಎಲೆಗೆ ಅಂಟಿಕೊಂಡಿದೆ. ಅಂಟು- ಅಂಟಾಗಿರುವ ಈ ಕೀಟಾಣು ನಂತರ ಕಾಫಿ ಗೊಂಚಲಿಗೆ ಸೇರಿಕೊಂಡು ಕಾಫಿ ಫಸಲು ನಾಶ ಮಾಡುತ್ತಿದೆ ಎಂದು ತಿಳಿಸಿದರು.
'ಬಿಸಿಲು ಮಳೆಯಾಟ ಅಪಾಯ'
ಮಳೆ ಮತ್ತು ಬಿಸಿಲಿನ ಕಾರಣಕ್ಕೆ ಹೀಚು ಬೇಗನೆ ಬಲಿಯಲು ಆರಂಭಿಸಿವೆ. ಇದು ಕೂಡ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನಕುಮಾರ್ ಹೇಳಿದರು. ಜೂನ್‌ನಲ್ಲಿ ಜೋರು ಮಳೆ ಇದ್ದರೆ ನಿಧಾನವಾಗಿ ಕಾಫಿ ಕಾಯಿಗಳು ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತವೆ. ಮಳೆ ಮತ್ತು ಬಿಸಿಲಿನಾಟ ಇದ್ದರೆ ವೇಗವಾಗಿ ಗಾತ್ರ ಹಿಗ್ಗಿಸಿಕೊಳ್ಳುತ್ತವೆ ಎಂದರು. ವೇಗವಾಗಿ ಕಾಫಿ ಈಚುಗಳು ದೊಡ್ಡದಾಗುತ್ತಿದ್ದು, ಬೇಗನೆ ಹಣ್ಣಾಗುವ ಸಾಧ್ಯತೆ ಇದೆ. ಅವಧಿಗೂ ಮುನ್ನ ಕಾಫಿ ಹಣ್ಣಾದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಜೋರು ಮಳೆಯಾದರೆ ಉದುರಿ ಹೋಗುವ ಸಾಧ್ಯತೆ ಹೆಚ್ಚು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-126-791923048

