ಚಿಕ್ಕನಾಯಕನಹಳ್ಳಿ: ಪಟ್ಟಣದ 2ನೇ ವಾರ್ಡ್ ಜೋಗಿಹಳ್ಳಿಯಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಪುರಸಭೆ ಮುಖ್ಯಾಧಿಕಾರಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿ ಸಾರ್ವಜನಿಕರು ಶುಕ್ರವಾರ ಪುರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಜೋಗಿಹಳ್ಳಿಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಸೂಕ್ತ ಪರ್ಯಾಯ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಸಪ್ತಶ್ರೀ ಅವರು ಪಟ್ಟಣದಲ್ಲಿ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಆದಾಗ್ಯೂ ಪುರಸಭಾ ಅಧಿಕಾರಿಗಳು ಮೇಲಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಸಾರ್ವಜನಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಪ್ರತಿಭಟನೆಕಾರರು ಕಿಡಿಕಾರಿದರು.
ಸ್ಥಳೀಯ ನಿವಾಸಿ ನಿಂಗಮ್ಮ ಮಾತನಾಡಿ 'ನೀರಿನ ಪಂಪ್‌ಸೆಟ್ ಮೋಟರ್ ಸುಟ್ಟುಹೋಗಿ 15 ದಿನ ಕಳೆದಿವೆ. ವಾರಕ್ಕೊಮ್ಮೆ ಕೇವಲ ಒಂದು ಗಂಟೆ ಮಾತ್ರ ನೀರು ಬಿಡುತ್ತಿದ್ದು, ಅದೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ಪರಿಪರಿಯಾಗಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ' ಎಂದರು.
ಗಿರಿಯಪ್ಪ ಮಾತನಾಡಿ 'ತಿಂಗಳು ಕಳೆದರೂ ಸರಿಯಾಗಿ ನೀರು ಬಿಡುತ್ತಿಲ್ಲ. ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಪುರಸಭೆ ಮುಖ್ಯಾಧಿಕಾರಿ ವಾರ್ಡ್‌ಗೆ ಭೇಟಿ ನೀಡಿದ್ದಾಗ ಸಮಸ್ಯೆ ಹೇಳಿಕೊಳ್ಳಲು ಮುಂದಾದೆವು. ಆದರೆ ನಮ್ಮ ಮಾತಿಗೆ ಕಿವಿಗೊಡದೆ, ಬೇಜವಾಬ್ದಾರಿಯಿಂದ ವರ್ತಿಸಿ ಅಲ್ಲಿಂದ ತೆರಳಿದರು' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-17-1871941309

