Dailyhunt Logo
  • Light mode
    Follow system
    Dark mode
    • Play Story
    • App Story
ಚಿನಕುರಳಿಯಂಥ ಪ್ರಶ್ನೆಗಳಿಗೆ ಶಾಸಕರ ಉತ್ತರ

ಚಿನಕುರಳಿಯಂಥ ಪ್ರಶ್ನೆಗಳಿಗೆ ಶಾಸಕರ ಉತ್ತರ

ಸೋಮವಾರಪೇಟೆ: ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಮಕ್ಕಳು ಶಾಸಕ ಡಾ.ಮಂತರ್‌ಗೌಡ ಅವರಿಗೆ ಪ್ರಶ್ನೆಗಳಿಗೆ ಕೇಳಿ ಉತ್ತರ ಪಡೆದುಕೊಂಡರು. ಒಬ್ಬರಿಗಿಂತ ಮತ್ತೊಬ್ಬರು ಚಿನಕುರಳಿಯಂತೆ ಪ್ರಶ್ನೆಗಳನ್ನು ಕೇಳಿ ಗಮನ ಸೆಳೆದರು.

ಈ ದೃಶ್ಯವು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ರಾಜ್ಯ ಶಾಸಕರ ವೇದಿಕೆ, ಯುನಿಸೆಫ್, ಸಿ.ಆರ್.ಟಿ ಯೋಜನೆ ಹಾಗೂ ನಾವು ಪ್ರತಿಷ್ಠಾನ ಟ್ರಸ್ಟ್ ಸಂಸ್ಥೆಯ ವತಿಯಿಂದ ಇಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಸಭೆಯಲ್ಲಿ ಕಂಡು ಬಂತು.

ರಾಜ್ಯ ಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮ ನ. 19 ಮತ್ತು 20ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದ್ದು, ಕೊಡಗು ಜಿಲ್ಲೆಯ ಮಕ್ಕಳ ಪ್ರತಿನಿಧಿಗಳಾಗಿ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಪಟಿಕ ಹಾಗೂ ಶನಿವಾರಸಂತೆ ವಿಘ್ನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಮುಬಾಶಿರ ಆಯ್ಕೆಯಾದರು.

ಶಿರಂಗಾಲದ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಲೋಕೇಶ್ ಸಮಾಜದಲ್ಲಿನ ಮಾದಕ ಪದಾರ್ಥಗಳು ಮತ್ತು ಮದ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಅವುಗಳ ನಿಷೇಧದ ಬಗ್ಗೆ ಪ್ರಶ್ನಿಸಿದರು.

ಶಾಸಕರು ಉತ್ತರ ನೀಡಿ, ಎರಡು ರೀತಿಯ ಡ್ರಗ್ಸ್ ಇದ್ದು, ಸರ್ಕಾರ ಒಂದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮತ್ತೊಂದು ಮದ್ಯ ಸರ್ಕಾರದ ಆದಾಯದ ಮೂಲವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯಗಳು ನಿಷೇಧಿಸಲು ಮುಂದಾಗುವುದಿಲ್ಲ. ಯಾವುದೇ ದುಶ್ಚಟಗಳಿದ್ದರೂ, ನಾವು ಅದರಿಂದ ಅಂತರ ಕಾಯ್ದುಕೊಳ್ಳುವ ಮೂಲಕ, ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು ಎಂದರು.

ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಧನುಷ್, ಈಗಿರುವ ಕಡ್ಡಾಯ ಶಿಕ್ಷಣವನ್ನು 14 ವರ್ಷದಿಂದ 18 ವರ್ಷಗಳವರೆಗೆ ವಿಸ್ತರಿಸಿ, ಉಚಿತ ಶಿಕ್ಷಣ ನೀಡುವಂತೆ ಮನವಿ ಮಾಡಿದರು. ಇದರಿಂದ ಬಾಲ್ಯ ವಿವಾಹ ಮತ್ತು ಗರ್ಭಾವಸ್ಥೆ ತಡೆಯಲು ಸಾಧ್ಯವಾಗುವುದು ಎಂದರು.

ಶಾಸಕರು ಮಾತನಾಡಿ, ಸರ್ಕಾರಿ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಕೇವಲ ಶೇ‌ 1.5 ಮತ್ತು ರಾಜ್ಯ ಶೇ 2 ರಿಂದ 3 ರಷ್ಟು ಬಜೆಟ್ ನಲ್ಲಿಡುತ್ತಿದ್ದು, ಇದರಿಂದ ಉಚಿತ ಶಿಕ್ಷಣ ಕಷ್ಟಸಾಧ್ಯ ಎಂದರು. ಉಚಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯ. ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಪಟಿಕ, ಸಮಾಜದಲ್ಲಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಖಾಸಗಿ ಶಾಲೆಗಳಲ್ಲಿ ಸ್ವಯಂ ರಕ್ಷಣೆಗೆ ಕರಾಟೆ ಮತ್ತು ಯೋಗದಂತಹ ತರಬೇತಿ ಸಿಗುತ್ತದೆ. ಅದು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಿಗಬೇಕು ಎಂದರು.

ಕೇವಲ ಬಾಲಕಿಯರ ಮೇಲೆ ಮಾತ್ರ ಲೈಂಗಿಕ ದೌರ್ಜನ್ಯ ನಡೆಯುತ್ತಿಲ್ಲ. ಬಾಲಕರ ಮೇಲೂ ನಡೆಯುತ್ತಿರುವುದಾಗಿ ಶಾಸಕರು ತಿಳಿಸಿದರು.

ಬಿಇಓ ಕೃಷ್ಣಪ್ಪ ಮಾತನಾಡಿ, ಕೆಪಿಎಸ್ ಶಾಲೆಗಳಲ್ಲಿಯೂ ಕರಾಟೆ ಮತ್ತು ಯೋಗ ತರಬೇತಿ ನೀಡಲು ಪ್ರಾರಂಭಿಸಿರುವುದಾಗಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀದೇವಿ ಮುದೋಳ, ಸಾಹಿತಿ ಜಲಾ ಕಾಳಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ, ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪ ನ್ಯಾಸಕಿ ತಿಲೋತ್ತಮೆ, ನಾವು ಪ್ರತಿಷ್ಠಾನ ಅಧ್ಯಕ್ಷ ಗೌತಮ್ ಕಿರಗಂದೂರು ಭಾಗವಹಿಸಿದ್ದರು.

ಮಕ್ಕಳಲ್ಲಿ ರಾಜಕೀಯದ ಅರಿವು; ಡಾ.ಮಂತರ್‌ಗೌಡ

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, 'ಶಿಕ್ಷಣದ ಅವಧಿಯಲ್ಲಿಯೇ ಸಂಸತ್ ಚಟುವಟಿಕೆಯ ಬಗ್ಗೆ ಸರ್ಕಾರ ಮಾಹಿತಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ರಾಜಕೀಯದ ಅರಿವು ಮೂಡುತ್ತದೆ ಮತ್ತು ಸಂಸತ್ ಒಳಗೆ ಯಾವ ರೀತಿಯಲ್ಲಿ ಚಟುವಟಿಕೆ ನಡೆಯುತ್ತದೆ ಎಂಬ ಮಾಹಿತಿಯೂ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಂಸತ್ ಒಂದು ಮಹತ್ವದ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳಿಗೆ ಸಂಸತ್ತಿನಲ್ಲಿ ನಡೆಯುವ ಕಲಾಪಗಳ ಅನುಭವವನ್ನು ತಿಳಿಸಿಕೊಡುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ವೇದಿಕೆಯಾಗಿದೆ ಎಂದರು.

ಇಂದು ಸಭೆಯಲ್ಲಿ ಚರ್ಚೆಗೊಳಗಾದ ವಿಷಯಗಳನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಅವುಗಳನ್ನು ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. 19 ರಂದು ನಡೆಯುವ ಸಂಸತ್ ಅಧಿವೇಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.

261104-51-817068018

Dailyhunt
Disclaimer: This content has not been generated, created or edited by Dailyhunt. Publisher: Prajavani