Wednesday, 18 Nov, 6.25 am ಪ್ರಜಾವಾಣಿ

ರಾಷ್ಟ್ರೀಯ
ಚಿನ್ನ ಕಳ್ಳಸಾಗಣೆ: ಶಿವಶಂಕರ್‌ಗೆ ಜಾಮೀನು ನಿರಾಕರಣೆ

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿಕೊಂಡಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ, ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್‌ ಅವರಿಗೆ ಜಾಮೀನು ನೀಡಲು ಇಲ್ಲಿನ ನ್ಯಾಯಾಲವೊಂದು ನಿರಾಕರಿಸಿದೆ.

'ತನಿಖೆಯು ಪ್ರಮುಖ ಘಟ್ಟದಲ್ಲಿದೆ. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲು ತನಿಖಾ ಸಂಸ್ಥೆಗೆ ಹೆಚ್ಚಿನ ಕಾಲಾವಕಾಶ ಬೇಕಾಗಬಹುದು. ಜಾಮೀನು ನೀಡಿದರೆ ಸಾಕ್ಷ್ಯ ನಾಶ, ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ' ಎನ್ನುವ ಕಾರಣವನ್ನು ನೀಡಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು, ಮುಖ್ಯಮಂತ್ರಿಗಳ ಮಾಜಿ ಮುಖ್ಯಕಾರ್ಯದರ್ಶಿ ಶಿವಶಂಕರ್‌ ಅವರಿಗೆ ಜಾಮೀನು ನಿರಾಕರಿಸಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅ.28ರಂದು ಇ.ಡಿ ಶಿವಶಂಕರ್‌ ಅವರನ್ನು ಬಂಧಿಸಿತ್ತು. ನ.26ರವರೆಗೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ.

ಪ್ರಕರಣವೇನು?: ಜುಲೈ 5ರಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್‌ನಿಂದ ಬಂದ ಏರ್‌ ಕಾರ್ಗೊದಲ್ಲಿದ್ದ ಬ್ಯಾಗ್ ಒಂದರಲ್ಲಿ ₹ 15 ಕೋಟಿ ಮೌಲ್ಯದ 30 ಕೆ.ಜಿ. ಬಂಗಾರವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಜುಲೈ 11ರಂದು ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ಜೊತೆಗಿದ್ದ ಸಂದೀಪ್‌ ನಾಯರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಸ್ವಪ್ನಾ ಸುರೇಶ್‌ ಅವರ ಜೊತೆಗೆ ಶಿವಶಂಕರ್‌ ಅವರಿಗೆ ಸಂಪರ್ಕವಿತ್ತು ಎನ್ನುವ ಮಾಹಿತಿ ಬಹಿರಂಗವಾದ ನಂತರದಲ್ಲಿ, ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top