ಚಿಂತಾಮಣಿ: ನಗರದ ಜೋಡಿ ರಸ್ತೆಯಲ್ಲಿರುವ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಸಮೀಪದ ಹೂವಿನ ಅಂಗಡಿ ಬಳಿ ಶುಕ್ರವಾರ ರಾತ್ರಿ ದ್ವಿಚಕ್ರವಾಹನ ಪಾರ್ಕಿಂಗ್ ಮಾಡುವ ವಿಷಯದಲ್ಲಿ ಘರ್ಷಣೆ ನಡೆದಿದ್ದು, ಕತ್ತರಿಯಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ.
ಕನಂಪಲ್ಲಿ ನಿವಾಸಿಗಳಾದ ಬಾಲಚಂದ್ರ, ವೆಂಕಟೇಶ್ ಗಾಯಾಳುಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಜುನಾಥ್, ಮೋಹನ್, ರಾಜು ಹಲ್ಲೆ ನಡೆಸಿರುವ ಆರೋಪಿಗಳು.
ದ್ವಿಚಕ್ರವಾಹನದಲ್ಲಿ ಬಂದ ಬಾಲಚಂದ್ರ ಹೂವಿನ ಅಂಗಡಿ ಮುಂದೆ ನಿಲ್ಲಿಸಿ ಪಕ್ಕದ ಮೊಬೈಲ್ ಅಂಗಡಿಗೆ ಹೋಗಲು ಮುಂದಾಗಿದ್ದಾರೆ. ಹೂವಿನ ಅಂಗಡಿಯವರು ಇಲ್ಲಿ ಪಾರ್ಕಿಂಗ್ ಮಾಡಬೇಡ, ಗ್ರಾಹಕರಿಗೆ ತೊಂದರೆ ಆಗುತ್ತದೆ ಎಂದು ತಡೆದಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡಿದೆ. ಬಾಲಚಂದ್ರನ ತಮ್ಮ ವೆಂಕಟೇಶ್ ಸಹ ಅಲ್ಲಿಗೆ ಬಂದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಆರೋಪಿಗಳು ಕತ್ತರಿಯಿಂದ ಬಾಲಚಂದ್ರ, ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ವೆಂಕಟೇಶ್‌ಗೆ ಕತ್ತು, ಹೊಟ್ಟೆ ಸೇರಿದಂತೆ ನಾಲ್ಕೈದು ಕಡೆ ಚುಚ್ಚಿದ್ದಾರೆ. ಬಾಲಚಂದ್ರನ ಕುತ್ತಿಗೆಗೂ ಹೊಡೆತ ಬಿದ್ದಿದೆ.
'ಗಾಡಿ ಪಾರ್ಕಿಂಗ್ ಮಾಡಬೇಡ ಎಂದಿದ್ದಕ್ಕೆ ಮೂವರು ಹಲ್ಲೆ ನಡೆಸಿದರು' ಎಂದು ಗಾಯಾಳುಗಳು ಹೇಳುತ್ತಾರೆ.
'ಗ್ರಾಹಕರಿಗೆ ತೊಂದರೆಯಾಗುತ್ತದೆ. ಗಾಡಿಯನ್ನು ಸ್ವಲ್ಪ ದೂರ ನಿಲ್ಲಿಸುವಂತೆ ಹೇಳಿದ್ದರಿಂದ, ಕುಪಿತಗೊಂಡ ಬಾಲಚಂದ್ರ ಅವಾಚ್ಶ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ಮುಖದ ಮೇಲೆ ಹೊಟ್ಟೆ ಮೇಲೆ ಗಾಯಗೊಳಿಸಿದ್ದಾರೆ' ಎಂದು ಹೂವಿನ ಅಂಗಡಿಯ ಮಾಲೀಕ ಮೋಹನ್ ತಿಳಿಸಿದರು.
ನಗರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-16-2132843966

